ದೇಶದಲ್ಲಿ ಒಂದೇ ದಿನದಲ್ಲಿ 415ಕ್ಕೆ ಏರಿದ ಓಮಿಕ್ರಾನ್ ಪ್ರಕರಣಗಳು
ನವದೆಹಲಿ, ಡಿಸೆಂಬರ್ 25: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ 24 ಗಂಟೆಗಳಲ್ಲಿ ಪ್ರಕರಣಗಳ ಸಂಖ್ಯೆ 358 ರಿಂದ 415ಕ್ಕೆ ಏರಿದೆ.
ಓಮಿಕ್ರಾನ್ಗೆ ಜಾಗತಿಕ ಮಟ್ಟದಲ್ಲಿ ತುತ್ತಾದವರಲ್ಲಿ 10 ಮಂದಿಯಲ್ಲಿ 9 ಮಂದಿ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದ್ದರು. ಆದ್ದರಿಂದ ಜನರು ಕೋವಿಡ್ ಮಾರ್ಗಸೂಚಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆಯನ್ನು ಮುಂದುವರೆಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಇನ್ನು ಉತ್ತರಪ್ರದೇಶ, ಮಧ್ಯಪ್ರದೇಶ, ಹರ್ಯಾಣಗಳಲ್ಲಿ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ.
ಮಹಾರಾಷ್ಟ್ರದಲ್ಲಿ 108 ಪ್ರಕರಣಗಳು ಪತ್ತೆಯಾಗಿದ್ದು, ದಿನೇ ದಿನೇ ಹೆಚ್ಚಳ ಕಾಣುತ್ತಲೇ ಇದೆ. ಇನ್ನು ನವದೆಹಲಿ 79, ಗುಜರಾತ್ 43, ತೆಲಂಗಾಣ 38, ಕೇರಳ 37, ತಮಿಳುನಾಡಿನಲ್ಲಿ 34, ಕರ್ನಾಟಕ 31, ರಾಜಸ್ಥಾನ 22, ಉತ್ತರಖಂಡ್, ಲಡಾಕ್, ಚಂಡೀಗಡದಲ್ಲಿ ತಲಾ 1, ಉತ್ತರಪ್ರದೇಶದಲ್ಲಿ 2, ಜಮ್ಮು ಕಾಶ್ಮೀರ, ಪಶ್ಚಿಮ ಬಂಗಾಳದಲ್ಲಿ ತಲಾ 3, ಆಂಧ್ರಪ್ರದೇಶ, ಹರಿಯಾಣ, ಒಡಿಶಾದಲ್ಲಿ ತಲಾ 4 ಪ್ರಕರಣಗಳು ಪತ್ತೆಯಾಗಿವೆ.

ಕೊರೊನಾ ರೂಪಾಂತರಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ ಮಾದರಿಯಲ್ಲೇ ಮಹಾರಾಷ್ಟ್ರದಲ್ಲೂ ಹಲವು ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿದ್ದು, 20 ಕ್ಕಿಂತಲೂ ಹೆಚ್ಚಿನ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದೆ.
ಹೊಸ ರೂಪಾಂತರಿ ಸೋಂಕು ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ರಾತ್ರಿ ಕರ್ಫ್ಯೂ ಜಾರಿಗೊಳಿಸಿದ್ದು ರಾತ್ರಿ 9 ಗಂಟೆ ನಂತರ ಬೆಳಿಗ್ಗೆ 6 ಗಂಟೆ ವರೆಗೆ 5 ಕ್ಕೂ ಹೆಚ್ಚಿನ ಮಂದಿ ಒಂದೆಡೆ ಸೇರುವುದನ್ನು ನಿರ್ಬಂಧಿಸಲಾಗಿದೆ. ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದ್ದು, ಡಿ.24 ರ ಮಧ್ಯರಾತ್ರಿಯಿಂದಲೇ ಈ ನಿಯಮ ಜಾರಿಗೆ ಬರಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದೇ ವೇಳೆ ಗುಜರಾತ್, ಮಧ್ಯಪ್ರದೇಶ, ಹರ್ಯಾಣ, ಉತ್ತರ ಪ್ರದೇಶ ರಾಜ್ಯಗಳೂ ಓಮಿಕ್ರಾನ್ ಸೋಂಕು ತಡೆಗೆ ನೈಟ್ ಕರ್ಫ್ಯೂ ಕ್ರಮದ ಮೊರೆ ಹೋಗಿವೆ. ಗುಜರಾತ್ ನ 8 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೆ ಆದೇಶಿಸಲಾಗಿದೆ.
ಅಹಮದಾಬಾದ್, ವಡೋದರಾ, ಸೂರತ್, ರಾಜ್ ಕೋಟ್, ಭವ್ ನಗರ್, ಜಾಮ್ ನಗರ, ಗಾಂಧಿನಗರ, ಜುನಾಗಢ್ ಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಗುರುವಾರ ಒಂದೇ ದಿನದಂದು ಗುಜರಾತ್ ನಲ್ಲಿ 7 ಹೊಸ ಓಮಿಕ್ರಾನ್ ಪ್ರಕರಣಗಳು ವರದಿಯಾಗಿದ್ದವು.
ಉತ್ತರ ಪ್ರದೇಶ:ದೇಶಾದ್ಯಂತ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದ್ದರೂ, ಓಮಿಕ್ರಾನ್ ತಳಿ ಪ್ರಕರಣಗಳ ಏರಿಕೆ ಆತಂಕ ಮೂಡಿಸುತ್ತಿದೆ. ಬ್ರಿಟನ್ ಹಾಗೂ ಅಮೆರಿಕದಲ್ಲಿ ಡೆಲ್ಟಾ ಮತ್ತು ಓಮಿಕ್ರಾನ್ ತಳಿಗಳ ಸಂಯೋಜನೆ ಡೆಲ್ಮಿಕ್ರಾನ್, ಕೋವಿಡ್ ಪ್ರಕರಣಗಳ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ. ಇದು ಭಾರತದಲ್ಲಿಯೂ ಉಂಟಾಗಬಹುದು ಎಂಬ ಕಳವಳ ಎದುರಾಗಿದೆ.












Click it and Unblock the Notifications