Get Updates
Get notified of breaking news, exclusive insights, and must-see stories!

ಮೋಸ್ಟ್ ವಾಂಟೆಡ್ ನಕ್ಸಲ್ ಬಸವರಾಜು ಹತ್ಯೆ; 2026ರ ವೇಳೆಗೆ ನಕ್ಸಲ್ ಮುಕ್ತವಾಗುವತ್ತ ಭಾರತದ ದಿಟ್ಟ ಹೆಜ್ಜೆ

ಭಾರತದ ಹಲವು ರಾಜ್ಯಗಳಿಗೆ ತಲೆನೋವಾಗಿದ್ದ ನಕ್ಸಲರನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ದಿಟ್ಟ ಕ್ರಮ ತೆಗೆದುಕೊಂಡಿದೆ. ಇತ್ತೀಚೆಗೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ದಟ್ಟವಾದ ಅಬುಜ್ಮದ್ ಅರಣ್ಯ ಪ್ರದೇಶದಲ್ಲಿ ನಡೆದ ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಸಿಪಿಐ (ಮಾವೋವಾದಿ) ನ ಪ್ರಧಾನ ಕಾರ್ಯದರ್ಶಿ ಮತ್ತು ಸರ್ವೋಚ್ಚ ಕಮಾಂಡರ್ ನಂಬಲ ಕೇಶವ ರಾವ್ ಅಲಿಯಾಸ್ ಬಸವರಾಜು ಅವರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಈ ಮೂಲಕ ನಕ್ಸಲ್ ಮುಕ್ತ ಭಾರತದ ನಿರ್ಮಾಣಕ್ಕೆ ಮಹತ್ವದ ಹೆಜ್ಜೆ ಇಟ್ಟಂತಾಗಿದೆ.

ಬಸವರಾಜು ಅವರ ತಲೆಗೆ ₹1.5 ಕೋಟಿ ಬಹುಮಾನ ಘೋಷಿಸಲಾಗಿತ್ತು. ಬಸವರಾಜು ಭಾರತದ ಮೋಸ್ಟ್-ವಾಂಟೆಡ್ ನಕ್ಸಲೈಟ್ ಆಗಿದ್ದರು. ಭದ್ರತಾ ಪಡೆಗಳು, ಪೊಲೀಸರ ಮೇಲಿನ ಹಲವು ದಾಳಿಗಳ ಪ್ರಮುಖ ರೂವಾರಿ ಇವರೇ ಎಂದು ಹೇಳಲಾಗಿದೆ. ಪ್ರಮುಖ ನಾಯಕನನ್ನೇ ಹತ್ಯೆ ಮಾಡಿರುವುದು ನಕ್ಸಲರ ವಿರುದ್ಧದ ಹೋರಾಟಕ್ಕೆ ಸಿಕ್ಕ ದೊಡ್ಡ ಗೆಲುವು ಎಂದು ಪರಿಗಣಿಸಲಾಗಿದೆ.

indias most wanted naxal basavaraju death 2026 maoist free india

ಯಾರು ಈ ಬಸವರಾಜು?

ಬಸವರಾಜು 1955 ರಲ್ಲಿ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಜಿಯಣ್ಣಪೇಟೆ ಎನ್ನುವ ಪುಟ್ಟ ಗ್ರಾಮದಲ್ಲಿ ಜನಿಸಿದರು. ತಂದೆ ಶಿಕ್ಷಕರಾಗಿದ್ದರು, ಹುಟ್ಟೂರು ಸಮೀಪದ ತಲಗಂ ಗ್ರಾಮದಲ್ಲಿ ಶಾಲಾ ಶಿಕ್ಷಣ ಪಡೆದ ಬಳಿಕ ಅವರು ವಾರಂಗಲ್‌ನಲ್ಲಿರುವ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ (ಈಗ NIT) ಎಂಜಿನಿಯರಿಂಗ್ ಅಧ್ಯಯನ ಮಾಡಿದರು.

ಕಾಲೇಜು ದಿನಗಳಲ್ಲೇ ಅವರು ಮಾವೋವಾದಕ್ಕೆ ಆಕರ್ಷಿತರಾದರು. ಸಿಪಿಐ (ಎಂಎಲ್) ಪೀಪಲ್ಸ್ ವಾರ್ ಮೂಲಕ ಮೂಲಭೂತವಾದಿ ರಾಜಕೀಯದತ್ತ ವಾಲಿದರು. 1984 ರಲ್ಲಿ ಎಂ.ಟೆಕ್ ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು ಸಂಪೂರ್ಣವಾಗಿ ಮಾವೋವಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡರು. ನಕ್ಸಲರಾದ ಬಳಿಕ ಅವರ ಕುಟುಂಬ ಸಂಪೂರ್ಣವಾಗಿ ದೂರವಾಯಿತು.

ಬಸವರಾಜು ಸಂಘಟಿಸಿದ ಪ್ರಮುಖ ದಾಳಿಗಳು

1987 ರಲ್ಲಿ ಬಸವರಾಜು ಶ್ರೀಲಂಕಾದಲ್ಲಿ ಎಲ್‌ಟಿಟಿಇ ಜೊತೆ ಗೆರಿಲ್ಲಾ ಯುದ್ಧ ತರಬೇತಿಯನ್ನು ಪಡೆದರು. ಸ್ಫೋಟಕಗಳ ಬಳಕೆ ಮತ್ತು ಅರಣ್ಯ ಯುದ್ಧದಲ್ಲಿ ಕೂಡ ಅವರು ಪರಿಣಿತರಾಗಿದ್ದರು ಎಂದು ಹೇಳಾಗುತ್ತದೆ. ಬಳಿಕ ಹಲವು ದಾಳಿಗಳನ್ನು ಸಂಘಟಿಸುವ ಮೂಲಕ ಕುಖ್ಯಾತಿಯನ್ನು ಪಡೆದರು.

2010 ರ ದಂತೇವಾಡ ಹತ್ಯಾಕಾಂಡದಲ್ಲಿ 76 ಸಿಆರ್ ಪಿಎಫ್‌ ಸಿಬ್ಬಂದಿ ಹತ್ಯೆ.

2013ರ ಜೀರಾಮ್ ಘಾಟಿ ದಾಳಿಯಲ್ಲಿ ಮಹೇಂದ್ರ ಕರ್ಮ ಹಾಗೂ ಉನ್ನತ ಕಾಂಗ್ರೆಸ್ ನಾಯಕರು ಸೇರಿದಂತೆ 27 ಜನರು ಸಾವನ್ನಪ್ಪಿದರು.

2003 ರ ಅಲಿಪಿರಿ ಸ್ಫೋಟದಲ್ಲಿ ಆಂಧ್ರಪ್ರದೇಶದ ಆಗಿನ ಸಿಎಂ ಎನ್. ಚಂದ್ರಬಾಬು ನಾಯ್ಡು ಅವರ ಮೇಲೆ ನಡೆದ ಹತ್ಯಾ ಪ್ರಯತ್ನ ವಿಫಲವಾಗಿತ್ತು.

2018ರಲ್ಲಿ ಆಂಧ್ರಪ್ರದೇಶದ ಅರಕು ಕಣಿವೆಯಲ್ಲಿ ಟಿಡಿಪಿ ಶಾಸಕ ಕಿದಾರಿ ಸರ್ವೇಶ್ವರ ರಾವ್ ಮತ್ತು ಮಾಜಿ ಶಾಸಕ ಸಿವೇರಿ ಸೋಮ ಹತ್ಯೆಯಲ್ಲಿ ಬಸವರಾಜು ಹೆಸರು ಕೇಳಿಬಂದಿತ್ತು.

ಬಸವರಾಜುಗೆ ವಿನಯ್, ಗಂಗಣ್ಣ, ಪ್ರಕಾಶ್, ಬಿಆರ್ ಉಮೇಶ್ ಮತ್ತು ಕೇಶವ್ ಸೇರಿದಂತೆ ಹಲವು ಹೆಸರುಗಳಿಂದ ಕರೆಯಲಾಗುತ್ತಿತ್ತು. ದಟ್ಟಾರಣ್ಯದ ನಡುವೆ ಇದ್ದುಕೊಂಡು, ಗೌಪ್ಯವಾಗಿದ್ದ ಅವರು ಸಂಚು ರೂಪಿಸುತ್ತಿದ್ದರು. ಭದ್ರತಾ ಪಡೆಗಳು ತೀವ್ರ ಹುಟುಕಾಟ ನಡೆಸಿದರೂ ದಶಕಗಳವರೆಗೆ ಕಣ್ತಪ್ಪಿಸಿ ಓಡಾಡಿಕೊಂಡಿದ್ದರು.

ಗಣಪತಿ ನಿವೃತ್ತರಾದ ನಂತರ 2018 ರಲ್ಲಿ ಸಿಪಿಐ (ಮಾವೋವಾದಿ) ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದ ಬಸವರಾಜು, ಬಂಡಾಯ ಸಂಘಟನೆಯ ಕಾರ್ಯತಂತ್ರ ಮತ್ತು ಸಿದ್ಧಾಂತದ ಮೇಲಿನ ಅವರ ಹಿಡಿತವನ್ನು ಬಲಪಡಿಸಿದರು. ಅವರನ್ನು ಚಳವಳಿಯ ರಾಜಕೀಯ ಮತ್ತು ಮಿಲಿಟರಿಯ ಪ್ರಮುಖ ಮುಖಂಡ ಎಂದು ಪರಿಗಣಿಸಲಾಗಿತ್ತು.

ದೇಶದ ಅತಿದೊಡ್ಡ ಮಾವೋವಾದಿ ವಿರೋಧಿ ಕಾರ್ಯಾಚರಣೆ

ಮಾವೋವಾದಿಗಳನ್ನು ನಿರ್ನಾಮ ಮಾಡಲು ಭದ್ರತಾ ಪಡೆಗಳು ಸತತವಾಗಿ ಕಾರ್ಯಾಚರಣೆ ನಡೆಸುತ್ತಲೇ ಇದ್ದವು. ಬಸವರಾಜು ಅವರ ಹತ್ಯೆ ಒಂದು ಪ್ರತ್ಯೇಕ ಕಾರ್ಯಾಚರಣೆ ಆಗಿರಲಿಲ್ಲ. ಛತ್ತೀಸ್‌ಗಢದ ನಾರಾಯಣಪುರ ಅರಣ್ಯಗಳಲ್ಲಿ ಸಿಪಿಐ (ಮಾವೋವಾದಿ) ಮುಖ್ಯಸ್ಥ ಬಸವರಾಜು ಅವರನ್ನು ಹತ್ಯೆ ಮಾಡುವ ಕೆಲವೇ ದಿನಗಳ ಮೊದಲು, ಭದ್ರತಾ ಪಡೆಗಳು ದೇಶದ ಇತಿಹಾಸದಲ್ಲಿಯೇ ಅತಿದೊಡ್ಡ ಮತ್ತು ಅತ್ಯಂತ ನಿರಂತರವಾದ ಮಾವೋವಾದಿ ವಿರೋಧಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.

ಛತ್ತೀಸ್‌ಗಢ-ತೆಲಂಗಾಣ ಗಡಿಯಲ್ಲಿರುವ ಕರ್ರೆಗುಟ್ಟ ಬೆಟ್ಟಗಳ ಅಪಾಯಕಾರಿ ಭೂಪ್ರದೇಶದಲ್ಲಿ 24 ದಿನಗಳ ಕಾಲ ನಡೆದ ಈ ಕಾರ್ಯಾಚರಣೆಯು ಪ್ರಮುಖ ಗೆರಿಲ್ಲಾ ಮೂಲಸೌಕರ್ಯವನ್ನು ನಾಶಮಾಡಿತು, ಉನ್ನತ ಶ್ರೇಣಿಯ ಪಿಎಲ್‌ಜಿಎ ಕಾರ್ಯಕರ್ತರನ್ನು ನಿರ್ಮೂಲನೆ ಮಾಡುವ ಮೂಲಕ ನಕ್ಸಲರನ್ನು ಬೇರು ಸಮೇತ ಕಿತ್ತುಹಾಕುವ ಸ್ಪಷ್ಟ ಸೂಚನೆ ಕೊಟ್ಟಿದೆ.

ಪ್ರಧಾನಿ ಮೋದಿ, ಅಮಿತ್ ಶಾರಿಂದ ಶ್ಲಾಘನೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆಗಳ ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ. ವಿಶೇಷವಾಗಿ ಛತ್ತೀಸ್‌ಗಢ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್‌ಜಿ)ಯನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಮಾವೋವಾದವನ್ನು ನಿರ್ಮೂಲನೆ ಮಾಡಿ ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡುತ್ತದೆ ಎಂದು ಹೇಳಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಭದ್ರತಾ ಪಡೆಗಳ ಈ ಕಾರ್ಯಾಚರಣೆಯನ್ನು ದೇಶದ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದರು.

ಏಪ್ರಿಲ್ 21ರಂದು ಆರಂಭವಾದ ಕಾರ್ಯಾಚರಣೆ

ಏಪ್ರಿಲ್ 21, 2025 ರಂದು ನಕ್ಸಲ್‌ ನಿಗ್ರಹ ಕಾರ್ಯಾಚರಣೆ ಪ್ರಾರಂಭವಾಯಿತು ಮತ್ತು ಮೇ 11 ರಂದು ಮುಕ್ತಾಯಗೊಂಡಿದೆ. 1,200 ಚದರ ಕಿ.ಮೀ. ಗಿಂತ ಹೆಚ್ಚು ವಿಶಾಲವಾದ ಅರಣ್ಯ ಪ್ರದೇಶದೊಳಗೆ 21 ಎನ್‌ಕೌಂಟರ್ ಗಳು ನಡೆದವು. ಭದ್ರತಾ ಪಡೆಗಳಿಗೆ ಕ್ಷಣ ಕ್ಷಣಕ್ಕೂ ಅಪಾಯ ಎದುರಾಗುತ್ತಿತ್ತು. 450 ಕ್ಕೂ ಹೆಚ್ಚು ಐಇಡಿಗಳನ್ನು ಇರಿಸಲಾಗಿತ್ತು, ಅವುಗಳಲ್ಲಿ 15 ಸ್ಫೋಟಗೊಂಡವು, 18 ಸಿಬ್ಬಂದಿ ಗಾಯಗೊಂಡರು. 45°C ತಾಪಮಾನವಿದ್ದರೂ ಭದ್ರತಾ ಪಡೆಗಳು ಎದೆಗುಂದದೆ ಮುನ್ನುಗ್ಗಿದ್ದವು.

ಕಾರ್ಯಾಚರಣೆಯನ್ನು ಚುರುಕುಗೊಳಿಸಲು ಬೆಟ್ಟದ ತುದಿಯಲ್ಲಿ ಹೆಲಿಪ್ಯಾಡ್ ಮತ್ತು ಬೇಸ್ ಕ್ಯಾಂಪ್ ಅನ್ನು ಸ್ಥಾಪಿಸಲಾಯಿತು. ಭದ್ರತಾ ಪಡೆಗಳು ಸುಧಾರಿತ ಕಣ್ಗಾವಲು ಮತ್ತು 24/7 ಗುಪ್ತಚರ ವಿಶ್ಲೇಷಣೆಯನ್ನು ಬಳಸಿಕೊಂಡು 216 ಅಡಗುತಾಣಗಳನ್ನು ಪತ್ತೆಹಚ್ಚಿದವು, ಸ್ನೈಪರ್ ರೈಫಲ್ ಸೇರಿದಂತೆ 35 ಕ್ಕೂ ಹೆಚ್ಚು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡವು ಮತ್ತು ಬಿಜಿಎಲ್ ಶೆಲ್‌ಗಳು, ಐಇಡಿಗಳು ಮತ್ತು ಇತರ ಮಾರಕ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬಳಸುವ ನಾಲ್ಕು ಮಾವೋವಾದಿ ತಾಂತ್ರಿಕ ಘಟಕಗಳನ್ನು ನಾಶಪಡಿಸಲಾಗಿದೆ.

818 ಕ್ಕೂ ಹೆಚ್ಚು ಶೆಲ್‌ಗಳು, ಅಪಾರ ಪ್ರಮಾಣದ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಡಿತರ, ಔಷಧ ಮತ್ತು ದಿನನಿತ್ಯದ ಬಳಕೆಯ ವಸ್ತುಗಳು ಸರಬರಾಜು ನಡೆಸುತ್ತಿದ್ದು ಇದು ಸುರಕ್ಷಿತ ಮಾವೋವಾದಿ ನೆಲೆಯಾಗಿತ್ತು ಎನ್ನುವುದನ್ನು ಸೂಚಿಸುತ್ತದೆ.

ಉರುಳಿದ ನಕ್ಸಲರ ಭದ್ರಕೋಟೆ

60 ಕಿ.ಮೀ ಉದ್ದದ ಕರೇಗುಟ್ಟಲು ಬೆಟ್ಟಗಳು ಕಳೆದ ಎರಡೂವರೆ ವರ್ಷಗಳಲ್ಲಿ ಮಾವೋವಾದಿಗಳ ಭದ್ರಕೋಟೆಯಾಗಿ ಮಾರ್ಪಟ್ಟಿತ್ತು. ಇಲ್ಲಿ 300-350 ಸಶಸ್ತ್ರ ನಕ್ಸಲರು ಆಶ್ರಯ ಪಡೆದಿದ್ದರು ಎಂದು ವರದಿಯಾಗಿದೆ. ಇಂತಹ ಪ್ರಮುಖ ನೆಲೆಯನ್ನೇ ಭದ್ರತಾ ಪಡೆಗಳು ನಾಶ ಮಾಡಿವೆ.

ಸಿಆರ್‌ಪಿಎಫ್ ಡಿಜಿ ಜಿ.ಪಿ. ಸಿಂಗ್ ಅವರ ಪ್ರಕಾರ, ಈ ಕಾರ್ಯಾಚರಣೆ ಇಲ್ಲಿಯವರೆಗಿನ ಅತ್ಯಂತ ವ್ಯಾಪಕ ಮತ್ತು ಸಂಘಟಿತ ಮಾವೋವಾದಿ ವಿರೋಧಿ ಕಾರ್ಯಾಚರಣೆಯಾಗಿದೆ. ತಮ್ಮನ್ನು ಯಾರು ಸೋಲಿಸಲಾಗದು ಎನ್ನುವ ಮಾವೋವಾದಿಗಳ ನಂಬಿಕೆಯನ್ನು ಪುಡಿಗಟ್ಟಲಾಗಿದೆ ಎಂದು ಛತ್ತೀಸ್‌ಗಢ ಡಿಜಿಪಿ ಅರುಣ್ ದೇವ್ ಗೌತಮ್ ಹೇಳಿದರು.

ಮಾತುಕತೆಗೆ ಮನವಿ ಮಾಡಿದ ನಕ್ಸಲರು

ಭದ್ರತಾಪಡೆಗಳ ಕಾರ್ಯಾಚರಣೆಗೆ ನಕ್ಸಲರು ಹೆದರಿದ್ದಾರೆ. ಮಾವೋವಾದಿ ದಿ ಕೇಂದ್ರ ಸಮಿತಿ ಸದಸ್ಯ ಮತ್ತು ವಕ್ತಾರ ಅಭಯ್ 26 ನಕ್ಸಲರ ಹತ್ಯೆಯಾಗಿರುವುದನ್ನು ಒಪ್ಪಿಕೊಂಡರು. ಶಾಂತಿ ಮಾತುಕತೆ ನಡೆದಬೇಕು ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದರು. ಮಾತುಕತೆ ನಡೆಸುವ ಬಗ್ಗೆ ಸರ್ಕಾರ ನಿಲುವು ಸ್ಪಷ್ಟಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿದರು.

ಬಂದೂಕಿನ ಸದ್ದಿನಿಂದ ಅಭಿವೃದ್ಧಿಯತ್ತ

2014 ರಿಂದ, ಭದ್ರತಾ ಪಡೆಗಳು ಸಮಗ್ರ ತರಬೇತಿ, ಉತ್ತಮ ತಂತ್ರಜ್ಞಾನ ಮತ್ತು ಜಂಟಿ ಕಾರ್ಯಾಚರಣೆಗಳೊಂದಿಗೆ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಮಾವೋವಾದಿ ಪೀಡಿತ ಜಿಲ್ಲೆಗಳು 2014 ರಲ್ಲಿ 76 ರಿಂದ 2024 ರಲ್ಲಿ 42 ಕ್ಕೆ ಇಳಿದಿವೆ.

ಭದ್ರತಾ ಸಿಬ್ಬಂದಿಯ ಸಾವು ನೋವಿನ ಸಂಖ್ಯೆ ಕಡಿಮೆಯಾಗಿದೆ. 2014 ರಲ್ಲಿ 88 ರಿಂದ 2024 ರಲ್ಲಿ 19 ಕ್ಕೆ ಇಳಿಕೆಯಾಗಿದೆ.

ಮಾವೋವಾದಿ ಶರಣಾಗತಿಗಳು ಹೆಚ್ಚುತ್ತಿವೆ, 2024 ರಲ್ಲಿ 928 ನಕ್ಸಲರು ಶರಣಾಗಿದ್ದರೆ 2025 ರಲ್ಲಿ ಈಗಾಗಲೇ 700 ಕ್ಕೂ ಹೆಚ್ಚು ನಕ್ಸಲರು ಶರಣಾಗಿದ್ದಾರೆ.

2025 ರ ಮೊದಲ ನಾಲ್ಕು ತಿಂಗಳಲ್ಲಿ 197 ಮಾವೋವಾದಿಗಳನ್ನು ತಟಸ್ಥಗೊಳಿಸಲಾಗಿದೆ.

ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 320 ಕ್ಕೂ ಹೆಚ್ಚು ಭದ್ರತಾ ಶಿಬಿರಗಳು ಮತ್ತು 68 ರಾತ್ರಿ-ಲ್ಯಾಂಡಿಂಗ್ ಹೆಲಿಪ್ಯಾಡ್‌ಗಳನ್ನು ಸ್ಥಾಪಿಸಲಾಗಿದ್ದು, ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ರಸ್ತೆಗಳು, ಶಾಲೆಗಳು ಮತ್ತು ಮೊಬೈಲ್ ಸಂಪರ್ಕದಂತಹ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದೆ.

ಮಾವೋವಾದ ಮುಕ್ತ ಭಾರತ

ಎನ್‌ಐಎ ಮತ್ತು ರಾಜ್ಯ ತನಿಖಾ ಸಂಸ್ಥೆಗಳಂತಹ ಭದ್ರತಾ ಸಂಸ್ಥೆಗಳು ಮಾವೋವಾದಿ ಹಣಕಾಸಿನ ಮೇಲೆ ಕಠಿಣ ಕ್ರಮ ಕೈಗೊಂಡಿವೆ. ಬಾಲಕರನ್ನು ನಕ್ಸಲ್ ಚಟುವಟಿಕೆಗಳಿಗೆ ಬಳಸುವುದನ್ನು ಅಧಿಕಾರಿಗಳು ಖಂಡಿಸಿದರು, ಬಾಲ ಸಂಘ ಮತ್ತು ಚೇತನ ನಾಟ್ಯ ಮಂಡಳಿಯಂತಹ ವಿಭಾಗಗಳಿಗೆ ಅವರನ್ನು ಮೊದಲು ನೇಮಕ ಮಾಡಿ ಬಳಿಕ ಹೋರಾಟಗಾರರಾಗಿ ತರಬೇತಿ ಪಡೆಯುತ್ತಾರೆ.

ಮಾವೋವಾದಿಗಳ ಗುಂಪಿಗೆ ಈಗ ದೊಡ್ಡ ಹೊಡೆತ ಬಿದ್ದಿದೆ. ಉಳಿದಿರುವ ನಾಯಕರು ಸಣ್ಣ ಗುಂಪುಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭದ್ರತಾ ಪಡೆಗಳು 2025 ರ ಅಂತ್ಯದ ವೇಳೆಗೆ ಉಳಿದ ಗುಂಪುಗಳ ನಾಯಕರನ್ನು ನಿರ್ಮೂಲನೆ ಮಾಡುವ ಅಥವಾ ಶರಣಾಗುವಂತೆ ಮಾಡುವ ಗುರಿ ಹೊಂದಿದೆ. 2026 ರ ವೇಳೆಗೆ ಮಾವೋವಾದಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮಹತ್ವಾಕಾಂಕ್ಷೆ ಹೊಂದಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+