Aditya -L1: ಚಂದ್ರಯಾನದ ಬೆನ್ನಲ್ಲೇ ಊಹಿಸಲೂ ಅಸಾಧ್ಯವಾದ ಸಾಹಸಕ್ಕೆ ಮುಂದಾದ ಇಸ್ರೋ
ಚಂದ್ರಯಾನದ ಬೆನ್ನಲ್ಲೇ ಸೂರ್ಯಯಾನದತ್ತ ಇಸ್ರೋದ ಚಿತ್ತ ನೆಟ್ಟಿದ್ದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಮತ್ತೊಂದು ಮೈಲುಗಲ್ಲು ಇಡಲು ಮುಂದಾಗಿದೆ. ಸೂರ್ಯನ ಸಮಗ್ರ ಅಧ್ಯಯನಕ್ಕೆ ಮುಂದಾಗಿರುವ ಇಸ್ರೋ ಜನರಿಗೆ ಗುಡ್ ನ್ಯೂಸ್ ಕೊಡಲು ಭರ್ಜರಿ ತಯಾರಿಯಲ್ಲಿದೆ.
ಎಲ್ಲಾ ಅಂದುಕೊಂಡಂತೆ ಆದರೆ ಇದೇ ಸೆಪ್ಟಂಬರ್ ನಲ್ಲಿ ಹೊಸ ಶುಭ ಸುದ್ದಿ ಕೊಡಲಿದೆ. ಅಷ್ಟಕ್ಕೂ ಈ ಬಾರಿ ಇಸ್ರೋ ಮುಂದಾಗಿರುವುದು ಸೂರ್ಯನ ಸುತ್ತ ಅಧ್ಯಯನ ಮಾಡಲು. ಸೂರ್ಯನ ಅಧ್ಯಯನ ಅಷ್ಟು ಸುಲಭದ ಮಾತಲ್ಲ , ಸಾಕಷ್ಟು ಹಗಲು ರಾತ್ರಿಯ ಶ್ರಮ , ನಿದ್ರೆಯ ತ್ಯಾಗ ಹೀಗೆ ಪರಿಶ್ರಮದ ಫಲವಾಗಿ ಉಪಗ್ರಹ ಉಡಾವಣೆ ಆಗಿ ಭಾಸ್ಕರನ ಅಂಗಳ ತಲುಪ ಬೇಕಾಗುತ್ತದೆ.

ಅದು ತನ್ನ ಕೆಲಸ ಶುರು ಮಾಡುವವರೆಗೂ ಸಾಕಷ್ಟು ಪ್ರಾರ್ಥನೆ, ಕೆಲಸ ಕಂಡಿತಾ ಇದ್ದೇ ಇರುತ್ತೆ. ಭೂಮಿಯಿಂದ ಸರಿಸುಮಾರು 15 ಕೋಟಿ ಕಿಲೋ ಮೀಟರ್ ದೂರದಲ್ಲಿರುವ ಸೂರ್ಯನ ಮೇಲೆ ಅಧ್ಯಯನ ಮಾಡಲು ಇಸ್ರೋ ಮುಂದಾಗಿದೆ. ಇದರ ಭಾಗವಾಗಿ ಆದಿತ್ಯ ಎಲ್ -1 ಉಪಗ್ರಹ ಇಸ್ರೋ ಸಿದ್ಧತೆ ಮಾಡಿಕೊಂಡಿದೆ. ಬರೋಬ್ಬರಿ 1,500 ಕೆಜಿ ತೂಕದ ಆದಿತ್ಯ ಎಲ್-1 ಉಪಗ್ರಹವನ್ನ ಉಡಾವಣೆ ಮಾಡಲು ಇಸ್ರೋ ಸಿದ್ಧತೆ ಮಾಡಿಕೊಂಡಿದೆ.
ಈ ಉಪಗ್ರಹ ಸೆಪ್ಟಂಬರ್ ಮೊದಲ ವಾರದಲ್ಲಿಯೇ ಉಡಾವಣೆಯಾಗುವ ಸಾಧ್ಯತೆ ಇದೆ. ಆದಿತ್ಯ - ಎಲ್1 ಉಪಗ್ರಹ 6 ಸುಧಾರಿತ ಸಾಧನಗಳನ್ನ ಹೊಂದಿದ್ದು, ಇದು ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲಾಗ್ರೇಂಜ್ ಪಾಯಿಂಟ್ 1 ರ ಕಕ್ಷೆಯಲ್ಲಿ ನೆಲೆಯಾಗಲಿದೆ. ಇಲ್ಲಿಂದಲೇ ಸೂರ್ಯನನ್ನ ಆದಿತ್ಯ ಅಧ್ಯಯನ ಮಾಡಲಿದೆ.

ಕಕ್ಷೆಯನ್ನ ತಲುಪಿ ಕಾರ್ಯಾಚರಿಸಲು ಸುಮಾರು 3-4 ತಿಂಗಳು
ಆದಿತ್ಯ L1 ಉಪಗ್ರಹ ಉಡಾವಣೆಯಾದ ನಂತರ ತನ್ನ ಕಕ್ಷೆಯನ್ನ ತಲುಪಿ ಕಾರ್ಯಾಚರಿಸಲು ಸುಮಾರು 3-4 ತಿಂಗಳು ತೆಗೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. 15 ಕೋಟಿ ಕಿಲೋ ಮೀಟರ್ ದೂರದಲ್ಲಿರುವ ಸೂರ್ಯನ ಬೆಳಕು ಭೂಮಿ ತಲುಪಲು 8 -9 ನಿಮಿಷ ಬೇಕು. ಇಂತಹ ಸೂರ್ಯನ ಗುರುತ್ವಾಕರ್ಷಣ, ಶಕ್ತಿ, ಶಾಖ, ಬೆಳಕು ಹೇಗೆ ಉತ್ಪತ್ತಿಯಾಗುತ್ತೆ ಅನ್ನುವಂತಹ ವಿಚಾರದ ಮೇಲೆ ಈ ಉಪಗ್ರಹ ಅಧ್ಯಯನ ನಡೆಸಲಿದೆ.
ಸೂರ್ಯನಲ್ಲಿ 11 ವರ್ಷಕ್ಕೆ ಒಂದು ಬಾರಿ ದೊಟ್ಟ ಮಟ್ಟದಲ್ಲಿ ಹೊರ ಸೂಸುವಿಕೆ ನಡೆಯುತ್ತೆ. ಇಂತಹ ಸಮಯದಲ್ಲಿ ಸೂರ್ಯನ ತಾಪಮಾನ ಹೇಗಿರುತ್ತೆ? ಬೇರೆ ಬೇರೆ ಸಮಯದಲ್ಲಿ ಸೂರ್ಯನ ತಾಪಮಾನ ಹೇಗಿರುತ್ತೆ? ಅನ್ನೋದರ ಬಗ್ಗೆ ಕೂಡ ಅಧ್ಯಯನ ನಡೆಯಲಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್ ದೂರದಲ್ಲಿರುವ ಲ್ಯಾಗ್‌ರೇಂಜ್ ಲಾರ್ಗಾಂಜ್ನ ಹಾಲೊ ಆರ್ಬಿಟ್ ಕಕ್ಷೆಯಲ್ಲಿ, ಭೂಮಿ & ಸೂರ್ಯನ ಗುರುತ್ವಾಕರ್ಷಣೆ ಸಮವಾಗಿರುತ್ತದೆ.
ಗ್ರಹಣದಂತ ಸಮಯದಲ್ಲೂ ಕೂಡ ಯಾವುದೇ ಆತಂಕ ಇಲ್ಲ
ಇಲ್ಲಿ ಉಪಗ್ರಹ ನಿಯೋಜಿಸಿದರೆ ಯಾವುದೇ ಅಡ್ಡಿ ಆತಂಕ ಇರುವುದಿಲ್ಲ. ಗ್ರಹಣದಂತ ಸಮಯದಲ್ಲೂ ಕೂಡ ಯಾವುದೇ ಆತಂಕ ಇಲ್ಲದೆ ಅಧ್ಯಯನ ಮಾಡಲಿದೆ. ಅಲ್ಲದೇ ಸೂರ್ಯನ ವಾತಾವರಣ ಸೌರ ಮಾರುತಗಳನ್ನು ಸೃಷ್ಟಿಸುತ್ತದೆ. ಈ ಉಪಗ್ರಹವು ಸೌರ ಬಿರುಗಾಳಿಗಳು ಹೇಗೆ ಉಂಟಾಗುತ್ತವೆ ಅನ್ನುವುದನ್ನು ಅಧ್ಯಯನ ಮಾಡಲಿದ್ದು, ಇದರಿಂದ ಭೀಕರ ಸೌರಮಾರುತಗಳು ಅಪ್ಪಳಿಸುವಾಗ ಯಾವ್ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಅನ್ನೋದು ಕೂಡ ಅಧ್ಯಯನದಿಂದ ತಿಳಿದು ಬರಲಿದೆ.
ಇಷ್ಟೇ ಅಲ್ಲ ಸೌರ ಬಿರುಗಾಳಿ ವಿಕಿರಣಕಾರಿಯಾಗಿದ್ದು, ಗಗನಯಾತ್ರಿಗಳಿಗೆ ಅಪಾಯ ಸೃಷ್ಟಿಸಬಲ್ಲವು. ಈ ಅಧ್ಯಯನದಿಂದ ಇಂತಹ ಅಪಾಯದಿಂದ ತಪ್ಪಿಸಿಕೊಳ್ಳಲು ಏನೇನು ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಿಕೊಳ್ಳಬೇಕು ಅನ್ನುವುದನ್ನು ತಿಳಿದುಕೊಳ್ಳಲು ಸಹಾಯಕವಾಗಲಿದೆ.
ಇಸ್ರೋ ಅಭಿವೃದ್ಧಿಪಡಿಸಿರುವ ಆದಿತ್ಯ- ಎಲ್ 1
ಇಸ್ರೋ ಅಭಿವೃದ್ಧಿಪಡಿಸಿರುವ ಆದಿತ್ಯ- ಎಲ್ 1 ಉಪಗ್ರಹವು ಈಗಾಗಲೇ ಬೆಂಗಳೂರಿನ ಯು.ಆರ್.ರಾವ್ ಸಾಟಿಲೈಟ್ ಸೆಂಟರ್ ನಲ್ಲಿ ಸಿದ್ದವಾಗಿ, ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಸ್ಪೇಸ್ ಸೆಂಟರ್ ಉಡ್ಡಯನ ನೆಲೆಗೆ ತಲುಪಿದೆ. ಸೆಪ್ಟಂಬರ್ ನಲ್ಲಿ ಅಲ್ಲಿಂದಲೇ ಉಡಾವಣೆಯಾಗಲಿದ್ದು, ಕೆಲ ತಿಂಗಳಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಯಾಗಲಿ ಎನ್ನುವುದು ಎಲ್ಲರ ಆಶಯ.












Click it and Unblock the Notifications