ಭಾರತದ ಮೊದಲ ಪ್ರಾದೇಶಿಕ ಹೈಸ್ಪೀಡ್ ರೈಲಿಗೆ 'ನಮೋ ಭಾರತ್' ಹೆಸರು: ಇಂದು ಪ್ರಧಾನಿ ಮೋದಿ ಚಾಲನೆ
ದೆಹಲಿ ಮತ್ತು ಮೀರತ್ ನಡುವೆ ಭಾರತದ ಮೊದಲ ಪ್ರಾದೇಶಿಕ ಹೈಸ್ಪೀಡ್ ರೈಲು ಸಂಚರಿಸಲಿದ್ದು, ಈ ರೈಲಿಗೆ ಗುರುವಾರ 'ನಮೋ ಭಾರತ್' ಎಂದು ನಾಮಕರಣ ಮಾಡಲಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಈ ರೈಲನ್ನು ಉದ್ಘಾಟನೆ ಮಾಡಲಿದ್ದಾರೆ.
ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆಯು ಬುಧವಾರದಂದು ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಆರ್‌ಆರ್‌ಟಿಎಸ್) ಕಾರಿಡಾರ್‌ನ ಆದ್ಯತೆಯ ವಿಭಾಗವನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಮತ್ತು ಸಾಹಿಬಾಬಾದ್ ಮತ್ತು ದುಹೈ ಅನ್ನು ಸಂಪರ್ಕಿಸುವ 'ರಾಪಿಡ್‌ಎಕ್ಸ್ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ಹೇಳಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಹೆಸರು ಬದಲಾವಣೆಯನ್ನು ಖಚಿತಪಡಿಸಿದ್ದಾರೆ. "20 ಅಕ್ಟೋಬರ್ 2023 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಸಾಹಿಬಾಬಾದ್ ಮತ್ತು ದುಹೈ ಡಿಪೋ ನಡುವೆ ದೇಶದ ಮೊದಲ ಪ್ರಾದೇಶಿಕ ಕ್ಷಿಪ್ರ ರೈಲು ನಮೋ ಭಾರತ್ ಉದ್ಘಾಟನೆ ಆಗಲಿದ್ದು, ದೇಶದಲ್ಲಿ ಅತ್ಯಾಧುನಿಕ ಅಲ್ಟ್ರಾ ಮಾಡರ್ನ್ ನಗರ ಪ್ರಯಾಣದ ಹೊಸ ಯುಗದ ಆರಂಭವಾಗಲಿದೆ." ಎಂದು ಹೇಳಿದ್ದಾರೆ.
160-180 ಕಿಮೀ ವೇಗದಲ್ಲಿ ಸಂಚಾರ
ಕುರಿತು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಎಕ್ಸ್ ಅಧಿಕೃತ ಹ್ಯಾಂಡಲ್ ಪೋಸ್ಟ್ ಮಾಡಿದ್ದು, "ಭಾರತದ ಮೊದಲ ಪ್ರಾದೇಶಿಕ ರಾಪಿಡ್ ರೈಲು ನಮೋ ಭಾರತ್ ಗಂಟೆಗೆ 160 ರಿಂದ 180 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯದೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಸ್ಥಳೀಯವಾಗಿ ತಯಾರಿಸಲ್ಪಟ್ಟಿದೆ" ಎಂದು ಮಾಹಿತಿ ನೀಡಿದೆ.
ಆರ್‌ಆರ್‌ಟಿಎಸ್‌ನ 82-ಕಿಮೀ ಉದ್ದದ ಮೊದಲ ಕಾರಿಡಾರ್‌ನ 17-ಕಿಮೀ ಆದ್ಯತೆಯ ವಿಭಾಗವು ಶನಿವಾರದಿಂದ ಅದರ ಐದು ನಿಲ್ದಾಣಗಳಾದ ಸಾಹಿಬಾಬಾದ್, ಗಾಜಿಯಾಬಾದ್, ಗುಲ್ಧರ್, ದುಹೈ ಮತ್ತು ದುಹೈ ಡಿಪೋಗಳಲ್ಲಿ ಪ್ರಯಾಣಿಕರಿಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತದೆ. ರೈಲುಗಳು ಬೆಳಿಗ್ಗೆ 6 ರಿಂದ ರಾತ್ರಿ 11 ರವರೆಗೆ ಕಾರ್ಯನಿರ್ವಹಿಸಲಿವೆ. ಪ್ರತಿ 15 ನಿಮಿಷಗಳಿಗೆ ಒಂದು ರೈಲು ಸಂಚರಿಸುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
"ದೆಹಲಿ-ಗಾಜಿಯಾಬಾದ್-ಮೀರತ್ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು 30,000 ಕೋಟಿ ರೂ.ಗಿಂತ ಹೆಚ್ಚು ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ಘಾಜಿಯಾಬಾದ್, ಮುರಾದ್‌ನಗರ ಮತ್ತು ಮೋದಿನಗರದ ನಗರ ಕೇಂದ್ರಗಳ ಮೂಲಕ ಹಾದುಹೋಗುವ ಒಂದು ಗಂಟೆಗಿಂತ ಕಡಿಮೆ ಪ್ರಯಾಣದ ಸಮಯದಲ್ಲಿ ದೆಹಲಿಯನ್ನು ಮೀರತ್‌ಗೆ ಸಂಪರ್ಕಿಸುತ್ತದೆ" ಪ್ರಧಾನಿ ಕಚೇರಿ ಹೇಳಿದೆ.












Click it and Unblock the Notifications