ಹಮಾಸ್ ದಾಳಿ ವೇಳೆ ಪ್ರಾಣವನ್ನೇ ಪಣಕ್ಕಿಟ್ಟು ಜನರನ್ನು ರಕ್ಷಿಸಿದ ಮಲಯಾಳಿ ಯುವತಿಯರು- 'ಇಂಡಿಯನ್ ಸೂಪರ್ ವುಮೆನ್' ಎಂದ ಇಸ್ರೇಲ್
ನವದೆಹಲಿ, ಅಕ್ಟೋಬರ್ 18: ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಹಮಾಸ್ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸರಿಸುಮಾರು 1,400 ನಾಗರಿಕರು ಹತ್ಯೆಗೀಡಾಗಿದ್ದಾರೆ. ಇಂತಹ ಭಯಾನಕ ಪರಿಸ್ಥಿತಿಯಲ್ಲೂ ಕೇರಳ ಮೂಲದ ಯುವತಿಯರಿಬ್ಬರು ತಮ್ಮ ಸಾಹಸ ಮೆರೆದಿದ್ದಾರೆ. ಇದನ್ನು ಇಸ್ರೇಲ್‌ನಾದ್ಯಂತ ಹಾಡಿ ಹೊಗಳಲಾಗುತ್ತಿದೆ.
ಕೇರಳ ಮೂಲದ ಇಬ್ಬರು ಯುವತಿಯರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಾಗರಿಕರನ್ನು ರಕ್ಷಿಸಿರುವುದು ಬೆಳಕಿಗೆ ಬಂದಿದೆ. ಈ ಸಾಹಸದ ಕುರಿತು ಭಾರತದಲ್ಲಿರುವ ಇಸ್ರೇಲಿ ರಾಯಭಾರ ಕಚೇರಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ.
ಕೇರಳ ಮೂಲಕ ಸಬಿತಾ ಹಾಗೂ ಮೀರಾ ಎಂಬುವವರು ಈ ಸಾಹಸ ಮೆರೆದಿದ್ದಾರೆ. ಈ ಇಬ್ಬರು ಯವತಿಯರು ಇಸ್ರೇಲ್‌ನಲ್ಲಿ ಆರೈಕೆದಾರರಾಗಿ ( ಕೇರ್ ಗಿವರ್ಸ್ ) ಸೇವೆ ಸಲ್ಲಿಸುತ್ತಿದ್ದಾರೆ.

ಅಕ್ಟೋಬರ್ 7 ರಂದು ಹಮಾಸ್ ಉಗ್ರರು ಶಸ್ತ್ರಸಜ್ಜಿತವಾಗಿ ಮನೆಯೊಳಗೆ ನುಗ್ಗಿದ್ದಾರೆ. ಆ ವೇಳೆ ಸೇವೆಯಲ್ಲಿದ್ದ ಸಬಿತಾ ಮತ್ತು ಮೀರಾ ಅವರು ಉಗ್ರರರನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನು ಭಾರತದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯು ಹೊಗಳಿದೆ. ಈ ಇಬ್ಬರು ಮಹಿಳೆಯರನ್ನು 'ಇಂಡಿಯನ್ ಸೂಪರ್ ವುಮೆನ್' ಎಂದು ಕರೆದಿದೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಇಸ್ರೇಲ್ ರಾಯಭಾರ ಕಚೇರಿಯು ಪೋಸ್ಟ್ ಮಾಡಿದೆ. ಸಬಿತಾ ಅವರು ತಮಗಾದ ಅನುಭವವನ್ನು ವಿಡಿಯೊದಲ್ಲಿ ತಿಳಿಸಿದ್ದಾರೆ. ಇದನ್ನು ರಾಯಭಾರ ಕಚೇರಿ ಹಂಚಿಕೊಂಡಿದೆ.
'ಕೇರಳದ ಆರೈಕೆದಾರರಾದ ಶ್ರೀಮತಿ ಸಬಿತಾ ಅವರ ಈ ಕಥೆಯನ್ನು ಕೇಳಿ, ಅವರು ಮತ್ತು ಮೀರಾ ಮೋಹನನ್ ಹಮಾಸ್ ಉಗ್ರರ ದಾಳಿಯನ್ನು ತಡೆದಿದ್ದಾರೆ. ಉಗ್ರರು ಬಾಗಿಲ ಬಳಿ ಇದ್ದಾಗ, ಅವರು ಬಾಗಿಲನ್ನು ಒತ್ತಿ ಹಿಡಿದಿದ್ದಾರೆ. ಆ ಸಮಯದಲ್ಲಿ ಉಗ್ರರು ಒಳಗೆ ನುಗ್ಗದಂತೆ ನೋಡಿಕೊಂಡಿದ್ದಾರೆ' ಎಂದು ರಾಯಭಾರ ಕಚೇರಿ ತಿಳಿಸಿದೆ.
'ಹಮಾಸ್ ಭಯೋತ್ಪಾದಕರು ಕೊಲ್ಲುವುದನ್ನು ತಡೆಯುವ ಮೂಲಕ ತಾವು ಆರೈಕೆ ಮಾಡುತ್ತಿದ್ದ ಇಸ್ರೇಲಿ ನಾಗರಿಕರನ್ನು ಈ ಯುವತಿಯರು ರಕ್ಷಿಸಿದ್ದಾರೆ' ಎಂದು ಹೇಳಿದೆ.
ಸಬಿತಾ ಹಾಗೂ ಮೀರಾ ಅವರಿಗೆ 'ಇಂಡಿಯನ್ ಸೂಪರ್ ವುಮೆನ್' ಎಂದು ಇಸ್ರೇಲಿ ರಾಯಭಾರ ಕಚೇರಿಯು ಕರೆದಿದೆ.
ಕಾಯಿಲೆಯಿಂದ ಬಳಲುತ್ತಿರುವ ರಾಹೇಲ್ ಎಂಬ ಮಹಿಳೆಯನ್ನು ನಿರ್ ಓಜ್‌ನ ಗಡಿ ಪ್ರದೇಶದಲ್ಲಿನ ಅವರ ಮನೆಯಲ್ಲಿ ಸಬಿತಾ ಮತ್ತು ಮೀರಾ ನೋಡಿಕೊಳ್ಳುತ್ತಿದ್ದರು. ಸಬಿತಾ ಪಾಳಿ ಮುಗಿಸಿ ಹೊರಡಲು ತಯಾರಿ ನಡೆಸುತ್ತಿದ್ದಾಗ ಉಗ್ರಗಾಮಿಯೊಬ್ಬ ಬಾಗಿಲ ಬಳಿ ಬಂದು ನಿಂತಿದ್ದಾನೆ.
भारतीय वीरांगनाएं ! 🇮🇳🇮🇱
— Israel in India (@IsraelinIndia) October 17, 2023
मूलतः केरला की रहने वाली सबिता जी, जो अभी इजराइल में सेवारत हैं, बता रही हैं कि कैसे इन्होने और मीरा मोहन जी ने मिलकर इसरायली नागरिकों कि जान बचाई। हमास आतंकवादी हमले के दौरान इन वीरांगनाओं ने सेफ हाउस के दरवाजे को खुलने ही नहीं दिया क्योंकि आतंकवादी… pic.twitter.com/3vu9ba4q0d
ಸೈರನ್‌ಗಳನ್ನು ಕೇಳಿದ ತಕ್ಷಣ ಸಬಿತಾ ಅವರು ಸುರಕ್ಷತಾ ಕೋಣೆಗೆ ಧಾವಿಸಿದ್ದಾರೆ. ಆಗ ರಾಹೇಲ್ ಮಗಳು ಪರಿಸ್ಥಿತಿ ಹತೋಟಿಯಲ್ಲಿಲ್ಲ ಎಂದು ಹೇಳಿದ್ದಾರೆ. ಸಬಿತಾ ಅವರನ್ನು ಸುರಕ್ಷತಾ ಕೊಠಡಿಯಲ್ಲೇ ಇರುವಂತೆ ಸೂಚಿಸಿದ್ದಾರೆ. ಆದರೆ, ಕೊಠಡಿಯಿಂದ ಹೊರಬಂದ ಸಬಿತಾ ಭಯೋತ್ಪಾದಕರನ್ನು ಎದುರಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸಬಿತಾ, 'ಕೆಲವೇ ನಿಮಿಷಗಳಲ್ಲಿ ನಮ್ಮ ಮನೆಗೆ ಭಯೋತ್ಪಾದಕರು ನುಗ್ಗಲಿದ್ದಾರೆ. ಆ ನಂತರ ಗುಂಡಿನ ದಾಳಿ ನಡೆಸುತ್ತಾರೆ ಎಂಬುದಾಗಿ ನಮಗೆ ತಿಳಿದಿತ್ತು' ಎಂದು ಹೇಳಿದ್ದಾರೆ.
ಭಯೋತ್ಪಾದಕರು ಮನೆಯೊಳಗೆ ನುಗ್ಗಲು ಯತ್ನಿಸಿದಾಗ ಅರ್ಧ ಘಂಟೆಯವರೆಗೆ ಬಾಗಿಲನ್ನು ಹಿಡಿದಿದ್ದೆವು ಎಂದು ಸಬಿತಾ ತಿಳಿಸಿದ್ದಾರೆ.
'ಅವರು ಬಾಗಿಲನ್ನು ಹೊಡೆದರು. ಅವರು ಬಾಗಿಲಿಗೆ ಗುಂಡು ಹಾರಿಸಿದರು. ಅವರು ಮನೆಯ ಹೊರಾಂಗಣದಲ್ಲಿದ್ದ ಎಲ್ಲವನ್ನೂ ನಾಶಪಡಿಸಿದರು' ಎಂದು ಅವರು ಹೇಳಿದ್ದಾರೆ.
ಕೊನೆಗೆ ಇಸ್ರೇಲ್ ಸೇನೆ ನಮ್ಮ ರಕ್ಷಣೆಗೆ ಬಂದಾಗ ಭಯೋತ್ಪಾದಕರು ತಪ್ಪಿಸಿಕೊಂಡು ಓಡಿ ಹೋದರು ಎಂದು ಸಬಿತಾ ತಿಳಿಸಿದ್ದಾರೆ.
ಇಸ್ರೇಲ್‌ನಲ್ಲಿ ಸಾವಿರಾರು ಮಲಯಾಳಿಗಳು ಆರೈಕೆದಾರರಾಗಿ ಕೆಲಸ ಮಾಡುತ್ತಿದ್ದಾರೆ.
ಅಕ್ಟೋಬರ್ 07 ರಂದು ಆರಂಭವಾಗಿರುವ ಇಸ್ರೇಲ್ ಹಮಾಸ್ ನಡುವಿನ ಯುದ್ಧವು ತೀವ್ರ ಸ್ವರೂಪ ಪಡೆದುಕೊಂಡಿದೆ. ಗಾಜಾ ಪಟ್ಟಿಯ ಮೇಲೆ ಯುದ್ಧ ಘೋಷಿಸಿರುವ ಇಸ್ರೇಲ್ ಈಗಾಗಲೇ ಸಾವಿರಾರರು ಜನರನ್ನು ಕೊಂದು ಹಾಕಿದೆ. ನೆಲದ ಮೂಲಕ ದಾಳಿ ನಡೆಸಲು ಇಸ್ರೇಲ್ ಯೋಜನೆ ರೂಪಿಸಿದೆ.
ಗಾಜಾದ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆದಿದ್ದು, ಇದರಲ್ಲಿ ಸುಮಾರು 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದು ಜಗತ್ತಿನಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇಸ್ರೇಲ್‌ಗ ಇಂದು ಭೇಟಿ ನೀಡಿದ್ದಾರೆ. ಇಸ್ರೇಲ್ ಪ್ರಧಾನಿ ನೆತಹ್ಯಾಹು ಅವರ ಜೊತೆ ಮಾತುಕತೆ ನಡೆಸಲಿದ್ದಾರೆ.












Click it and Unblock the Notifications