ಉಕ್ರೇನ್‌ನಿಂದ ವಿದ್ಯಾರ್ಥಿಗಳ ಶಿಫ್ಟ್: ಕೇಂದ್ರ ಸರಕಾರದ ವಿರುದ್ಧ ಮುನಿಸೇಕೆ?
ಕರ್ನಾಟಕ ಮೂಲದ ನವೀನ್ ಸಾವಿನ ನಂತರ ಪಂಜಾಬ್ ಮೂಲದ ವಿದ್ಯಾರ್ಥಿ ರಷ್ಯಾ - ಉಕ್ರೇನ್ ಸಮರದ ಸಂದರ್ಭದಲ್ಲಿ ಮೃತಪಟ್ಟಿದ್ದಾನೆ. ಭಾರತೀಯರು ತಾಯ್ನಾಡಿಗೆ ವಾಪಸ್ ಬರಲು ಪರದಾಡುತ್ತಿದ್ದಾರೆ ಎನ್ನುವ ಸುದ್ದಿಯ ನಡುವೆ ಪ್ರಧಾನಿ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ್ದಾರೆ.
ಈ ಮಾತುಕತೆಯ ನಂತರ ರಷ್ಯಾದ ಸೇನೆ ಭಾರತೀಯರನ್ನು ಗಡಿ ದಾಟಲು ಸಹಾಯ ಮಾಡುತ್ತಿದೆ ಎಂದು ವರದಿಯಾಗಿದೆ. ಉಕ್ರೇನಿನ ಈಶಾನ್ಯ ಮತ್ತು ಪೂರ್ವ ಭಾಗದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಊಟ ನೀರಿಗೂ ಪರದಾಡುವಂತಹ ಪರಿಸ್ಥಿತಿಯಿದೆ ಎಂದು ಹೇಳಲಾಗುತ್ತಿದೆ.
ಮಾರ್ಚ್ ಎಂಟರೊಳಗೆ 31ವಿಮಾನದ ಮೂಲಕ 6,300 ಭಾರತೀಯರನ್ನು ವಾಪಸ್ ಕರೆತರಲಾಗುವುದು ಎಂದು ಕೇಂದ್ರ ಸರಕಾರ ಹೇಳಿದೆ. ಸ್ಥಳಾಂತರ ಕಾರ್ಯಾಚರಣೆಗೆ ನಿಯೋಜಿತರಾಗಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಬುಚಾರೆಸ್ಟ್‌ನಲ್ಲಿ ರೊಮೇನಿಯಾ ಮತ್ತು ಮೋಲ್ಡಾವಾ ದೂತವಾಸ ರಾಯಭಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಉಕ್ರೇನ್‌ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ವಾಪಸ್ ಕರೆತರಲು ಭಾರತ ಸರಕಾರ ಶತ ಪ್ರಯತ್ನ ಮುಂದುವರಿಸಿದೆ. ಇವೆಲ್ಲದರ ನಡುವೆ, ದೇಶಕ್ಕೆ ವಾಪಸ್ ಆದ ಕೆಲವು ವಿದ್ಯಾರ್ಥಿಗಳು ಕೇಂದ್ರ ಸರಕಾರದ ಕಾರ್ಯವೈಖರಿಯ ಬಗ್ಗೆ ಅಪಸ್ವರ ಎತ್ತಿದ್ದಾರೆ.

ಆಪರೇಷನ್ ಗಂಗಾ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ
ಉಕ್ರೇನ್‌ನಿಂದ ಆಪರೇಷನ್ ಗಂಗಾ ಮೂಲಕ ಭಾರತೀಯರನ್ನು ಕರೆತರಲಾಗುತ್ತಿದೆ, ಸಾವಿರಾರು ಮಂದಿ ಇದುವರೆಗೆ ವಾಪಸ್ ಆಗಿದ್ದಾರೆ. ಕರ್ನಾಟಕದ 86 ಜನ ವಾಪಸ್ ಆಗಿದ್ದಾರೆ. ರಾಜ್ಯಕ್ಕೆ ಬಂದಿಳಿದ ಕೆಲವು ವಿದ್ಯಾರ್ಥಿಗಳು, ಕೇಂದ್ರ ಸರಕಾರದ ಕಾರ್ಯವೈಖರಿಯನ್ನು ಹೊಗಳಿದ್ದರೆ, ಮತ್ತಷ್ಟು ಜನ ಬರೀ ಬುರುಡೆ ಎಂದು ಟೀಕಿಸಿದ್ದಾರೆ. ಸ್ಥಳೀಯರು ನಮ್ಮನ್ನು ಯಾವರೀತಿ ನಡೆಸಿಕೊಂಡರು, ಆಹಾರಕ್ಕಾಗಿ ಪರದಾಡುತ್ತಿದ್ದ ಸ್ಥಿತಿಗಳನ್ನು ವಿವರಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವರುಗಳೇ ಖುದ್ದಾಗಿ ಸ್ವಾಗತಿಸುತ್ತಿದ್ದಾರೆ
ಉಕ್ರೇನ್‌ನಿಂದ ದೇಶಕ್ಕೆ ಬಂದ ಪ್ರಯಾಣಿಕರನ್ನು ಕೇಂದ್ರ ಮತ್ತು ರಾಜ್ಯ ಸರಕಾರದ ಸಚಿವರುಗಳೇ ಖುದ್ದಾಗಿ ಸ್ವಾಗತಿಸುತ್ತಿದ್ದಾರೆ. ನರೇಂದ್ರ ಮೋದಿಯವರು ಸುರಕ್ಷತೆಯಿಂದ ಎಲ್ಲರನ್ನೂ ಕರೆತರಲು ಆದ್ಯತೆ ನೀಡಲು ತಿಳಿಸಿದ್ದಾರೆ. ಈ ವಿಚಾರವನ್ನು ಅಲ್ಲಿರುವ ನಿಮ್ಮ ಸ್ನೇಹಿತರಿಗೆ ಹೇಳಿ ಎಂದು ಸಚಿವರುಗಳು ಮನವಿಯನ್ನು ಮಾಡಿದ್ದರು. ಇದೆಲ್ಲಾ ಬುರುಡೆ, ಬಿಲ್ಡಪ್ ಎಂದು ಕೆಲವು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಉಕ್ರೇನ್ ನೆಲಕ್ಕೆ ಕಾಲಿಡಲು ಭಾರತಕ್ಕೆ ಗಟ್ಸ್ ಇಲ್ಲ
"ಭಾರತ ಸರಕಾರದಿಂದ ಊಟದ ವ್ಯವಸ್ಥೆಯಾಗಲಿ, ಗಡಿ ದಾಟಲು ಪ್ರತ್ಯೇಕ ಸರತಿಯ ವ್ಯವಸ್ಥೆಯೂ ಇರಲಿಲ್ಲ. ಆರು ಗಂಟೆಯಲ್ಲಿ ಮುಗಿಯುವ ಕೆಲಸ, ಹನ್ನೆರಡು ಗಂಟೆ ತೆಗೆದುಕೊಂಡಿದೆ. ಕ್ಯಾಬ್ ವ್ಯವಸ್ಥೆಯಿದ್ದರೂ, ತುಂಬಾ ದುಬಾರಿಯಾಗಿತ್ತು. ಭಾರತ ಸರಕಾರ ಇಲ್ಲಿ ಕುಳಿತುಕೊಂಡು ಬಡಾಯಿ ಕೊಚ್ಚಿಕೊಳ್ಳುತ್ತಿದೆ. ವಾಸ್ತವವಾಗಿ ಮೋದಿ ಸರಕಾರ ಏನನ್ನೂ ಮಾಡಲಿಲ್ಲ. ಉಕ್ರೇನ್ ನೆಲಕ್ಕೆ ಕಾಲಿಡಲು ಭಾರತಕ್ಕೆ ಗಟ್ಸ್ ಇಲ್ಲ"ಎಂದು ಕೊಪ್ಪಳದ ಸಂಗಮೇಶ್ ಎನ್ನುವ ವಿದ್ಯಾರ್ಥಿಯೊಬ್ಬರು ಆರೋಪಿಸಿದ್ದಾರೆ.

ಕರ್ನಾಟಕ ಸರಕಾರದಿಂದ ತಕ್ಕಮಟ್ಟಿನ ಸಹಾಯ ಮಾಡುತ್ತಿದೆ
"ಕೀವ್‌ನಲ್ಲಿ ನಮ್ಮ ದೂತಾವಾಸಕ್ಕೆ ಕಚೇರಿಗೆ ಫೋನ್ ಮಾಡಿದರೆ, ರಿಸೀವ್ ಮಾಡಕ್ಕೆ ಯಾರೂ ಇಲ್ಲ. ಅಲ್ಲಿರುವ ದೂತಾವಾಸ ಕಚೇರಿಯನ್ನು ಶಿಫ್ಟ್ ಮಾಡಿದ್ದಾರೆ. ಕೇಂದ್ರ ಸಚಿವರು ವಿಮಾನ ಇಲ್ಲಿಗೆ ಲ್ಯಾಂಡ್ ಆದ ನಂತರ ದೊಡ್ಡದೊಡ್ಡ ಮಾತನ್ನು ಆಡುತ್ತಿದ್ದಾರೆ. ಎಷ್ಟೋ ಕಿಲೋಮೀಟರ್ ನಡೆದುಕೊಂಡು ಬಂದಿದ್ದೇವೆ. ಹಂಗೆರಿ ಸರಕಾರ ನಮಗೆ ಸಹಾಯ ಮಾಡಿದೆಯೇ ಹೊರತು ಭಾರತ ಸರಕಾರವಲ್ಲ. ಗಡಿಯಲ್ಲಿ ಭಾರತ ದೇಶದ ಒಬ್ಬ ಪ್ರತಿನಿಧಿಯೂ ಇರಲಿಲ್ಲ. ಮೀಡಿಯಾ ಮುಂದೆ ಸರಕಾರ ಶೋಆಫ್ ಮಾಡುತ್ತಿದೆ. ಕರ್ನಾಟಕ ಸರಕಾರದಿಂದ ತಕ್ಕಮಟ್ಟಿನ ಸಹಾಯ ಮಾಡುತ್ತಿದೆ" ಎಂದು ಬೆಂಗಳೂರು, ಗಿರಿನಗರದ ಹನೀಶ್ ಹೇಳಿದ್ದಾರೆ.












Click it and Unblock the Notifications