ಕೊವಿಡ್-19 ನಿಯಮಗಳ ಸಡಿಲ; ಭಾರತದಲ್ಲಿ ವಿಮಾನ ಪ್ರಯಾಣ ಸುಗಮ
ನವದೆಹಲಿ, ಮಾರ್ಚ್ 23: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಬಹುಪಾಲು ಕಡಿಮೆಯಾಗಿದೆ. ದೇಶದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಲಕ್ಷದಿಂದ ಸಾವಿರದ ಅಂಕಿಗೆ ಇಳಿಕೆಯಾಗಿದೆ. ಇದರ ಮಧ್ಯೆ ಕೊವಿಡ್-19 ಸಂಬಂಧಿಸಿದ ನಿಯಮಗಳನ್ನು ಮತ್ತಷ್ಟು ಸಡಿಲಗೊಳಿಸಲಾಗಿದೆ.
ವಿಮಾನ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ವಿಮಾನಯಾನ ಸಚಿವಾಲಯವು ಕೆಲವು COVID-19-ಸಂಬಂಧಿತ ನಿಯಮಗಳನ್ನು ಸಡಿಲಗೊಳಿಸಿದೆ. ಇನ್ಮುಂದೆ ವಿಮಾನಗಳಲ್ಲಿ ಕ್ಯಾಬಿನ್ ಸಿಬ್ಬಂದಿ PPE ಕಿಟ್ ಧರಿಸಬೇಕಾಗಿಲ್ಲ, ವೈದ್ಯಕೀಯ ತುರ್ತುಸ್ಥಿತಿಗಳಿಗಾಗಿ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ವಿಮಾನಯಾನ ಸಂಸ್ಥೆಗಳು ಮೂರು ಸೀಟುಗಳನ್ನು ಖಾಲಿ ಇಡಬೇಕಾಗಿಲ್ಲ. ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಪ್ಯಾಟ್-ಡೌನ್ ಪರಿಶೀಲನೆ ಪುನರಾರಂಭಿಸಲು ಅವಕಾಶ ನೀಡಲಾಗಿದೆ.
ವಿಮಾನಯಾನ ಕಾರ್ಯಾಚರಣೆಯನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಇಂಥ ಕೆಲವು ಕೊವಿಡ್-19 ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ:
ದೇಶದಲ್ಲಿ ಓಮಿಕ್ರಾನ್ ರೂಪಾಂತರದ ನಂತರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕಡಿಮೆಯಾಯಿತು. ಈ ಹಿನ್ನೆಲೆ ಜನವರಿಯಲ್ಲಿ ವಿಮಾನಯಾನ ಸಂಸ್ಥೆಯ ವಹಿವಾಟು ಹೆಚ್ಚಾಗಿದ್ದು, ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದೆ. ಫೆಬ್ರವರಿಯಲ್ಲಿ ಸುಮಾರು 76.96 ಲಕ್ಷ ದೇಶೀಯ ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸಿದ್ದು, ಜನವರಿಗಿಂತ ಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದ್ದಾರೆ.
ಕೇಂದ್ರ ಸರ್ಕಾರ ಸಡಿಲಿಸಿರುವ ಕೊವಿಡ್-19 ನಿಯಮಗಳು:
- COVID-19 ಸಂಬಂಧಿಸಿದ ವೈದ್ಯಕೀಯ ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ಅಂತರಾಷ್ಟ್ರೀಯ ವಿಮಾನಗಳಲ್ಲಿ ಮೂರು ಆಸನಗಳನ್ನು ಖಾಲಿ ಇಡುವ ನಿರ್ಬಂಧವನ್ನು ತೆಗೆದುಹಾಕಲಾಗಿದೆ.
- ವಿಮಾನದಲ್ಲಿ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿಯಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡರೆ ಅದರ ನಿರ್ವಹಣೆಗೆ ವಿಮಾನಯಾನ ಸಂಸ್ಥೆಗಳು ಕೆಲವು ಹೆಚ್ಚುವರಿ PPE ರಕ್ಷಣಾತ್ಮಕ ಗೇರ್‌ಗಳು, ಸ್ಯಾನಿಟೈಸರ್ ಮತ್ತು N-95 ಮಾಸ್ಕ್ ಅನ್ನು ಸಾಗಿಸಬಹುದು.
- ಮಾರ್ಚ್ 27, 2022 ರಿಂದ ನಿಗದಿತ ಅಂತರಾಷ್ಟ್ರೀಯ ವಿಮಾನ ಕಾರ್ಯಾಚರಣೆಯನ್ನು ಪುನರಾರಂಭಿಸಲು ಸರ್ಕಾರ ಈಗ ನಿರ್ಧರಿಸಿದೆ.
- ಸಿಬ್ಬಂದಿಗೆ ಸಂಪೂರ್ಣ ಪಿಪಿಇ ಕಿಟ್‌ನ ಅಗತ್ಯವನ್ನು ತೆಗೆದುಹಾಕಲಾಗಿದೆ. ಆದಾಗ್ಯೂ, ಫೇಸ್ ಮಾಸ್ಕ್ ಬಳಕೆ ಮತ್ತು ಸ್ಯಾನಿಟೈಸರ್ ನಿರ್ವಹಣೆ ಕಡ್ಡಾಯವಾಗಿ ಮುಂದುವರಿಯುತ್ತದೆ.
- ಬ್ಯೂರೋ ಆಫ್ ಸಿವಿಲ್ ಏವಿಯೇಷನ್ ಸೆಕ್ಯುರಿಟಿ ನಿರ್ದೇಶನಗಳ ಪ್ರಕಾರ ವಿಮಾನ ನಿಲ್ದಾಣಗಳಲ್ಲಿ ಭದ್ರತಾ ಸಿಬ್ಬಂದಿಯಿಂದ ಪ್ಯಾಟ್-ಡೌನ್ ಪರಿಶೀಲನೆ ಅನ್ನು ಪುನಃ ಪರಿಚಯಿಸಲಾಗುತ್ತದೆ.
- ವಿಮಾನದಲ್ಲಿ ಪ್ರಯಾಣಿಸುವ ವೇಳೆ ನಿಯಮಿತ COVID-19 ಪ್ರೋಟೋಕಾಲ್‌ಗಳನ್ನು ಅನುಸರಿಸುವುದರ ಜೊತೆಗೆ ಭದ್ರತಾ ಸಿಬ್ಬಂದಿ N-95 ಮಾಸ್ಕ್ ಧರಿಸಬೇಕು ಮತ್ತು ಪ್ರತಿ ಪ್ಯಾಟ್-ಡೌನ್ ಪರಿಶೀಲನೆ ನಂತರ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
ದೇಶದಲ್ಲಿ ಒಂದೇ ದಿನ 1549 ಮಂದಿಗೆ ಕೊವಿಡ್
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಭೀತಿ ತಗ್ಗಿದೆ. ಭಾರತದಲ್ಲಿ ಒಂದು ದಿನದಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ ಒಂದೂವರೆ ಸಾವಿರಕ್ಕೆ ಇಳಿದಿದೆ. ಕಳೆದ 24 ಗಂಟೆಗಳಲ್ಲಿ 1549 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 6 ಮಂದಿ ಮಹಾಮಾರಿಗೆ ಬಲಿಯಾಗಿದ್ದು, 2652 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 43,009,390ಕ್ಕೆ ಏರಿಕೆಯಾಗಿದೆ. ಈ ಪೈಕಿ 42,467,774 ಸೋಂಕಿತರು ಗುಣಮುಖರಾಗಿದ್ದರೆ, 516,516 ಮಂದಿ ಸೋಂಕಿನಿಂದ ಪ್ರಾಣ ಬಿಟ್ಟಿದ್ದಾರೆ. 25,100 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಜಗತ್ತಿನಲ್ಲಿ ಒಟ್ಟು ಕೊರೊನಾವೈರಸ್ ಅಂಕಿ-ಸಂಖ್ಯೆ
ವಿಶ್ವದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಹಲವು ರಾಷ್ಟ್ರಗಳಲ್ಲಿ ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಜಗತ್ತಿನಲ್ಲಿ ಈವರೆಗೂ 471,587,481 ಕೊವಿಡ್-19 ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಮಹಾಮಾರಿಗೆ ಈವರೆಗೂ 6,102,570 ಮಂದಿ ಪ್ರಾಣ ಬಿಟ್ಟಿದ್ದಾರೆ. 407,711,190 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದರೆ, ಇನ್ನೂ 57,773,721 ಸಕ್ರಿಯ ಪ್ರಕರಣಗಳಿವೆ ಎಂದು ಅಂಕಿ-ಅಂಶಗಳಿಂದ ತಿಳಿದು ಬಂದಿದೆ.












Click it and Unblock the Notifications