ಭಾರತೀಯ ಬ್ಯಾಂಕಿಂಗ್ ಮಹಾಸಭೆಯಲ್ಲಿ ವಸೂಲಾಗದ ಸಾಲದ್ದೇ ಚರ್ಚೆ
ನವದೆಹಲಿ, ಆಗಸ್ಟ್ 24: ಭಾರತೀಯ ಬ್ಯಾಂಕಿಂಗ್ ಮಹಾಸಭೆಯಲ್ಲಿ ಬ್ಯಾಂಕುಗಳ ಬಹುದೊಡ್ಡ ಸಮಸ್ಯೆಯಾದ ವಸೂಲಿಯಾಗದ ಸಾಲದ ಬಗ್ಗೆ ಭಾರಿ ಚರ್ಚೆ ನಡೆಯಿತು.
ಹಿಂದಿರುಗದ ಸಾಲ ಅಥವಾ ವಸೂಲಾಗದ ಸಾಲ ಭಾರತೀಯ ಬ್ಯಾಂಕಿಂಗ್ ವಲಯ ಎದುರಿಸುತ್ತಿರುವ ಬಹು ಮುಖ್ಯ ಸಮಸ್ಯೆ. ಭಾರತೀಯ ಬ್ಯಾಂಕಿಂಗ್ ವಲಯ ಮತ್ತು ಆರ್ಥಿಕ ಸಂಸ್ಥೆಗಳು ಎದುರಿಸುತ್ತಿರುವ ಈ ಸಮಸ್ಯೆಗಳನ್ನು ಭಾರತೀಯ ಮಾದರಿಯಲ್ಲಿಯೇ ಪರಿಹರಿಸಲು ಬ್ಯಾಂಕುಗಳು ಯತ್ನಿಸಬೇಕಾಗಿದೆ ಎಂಬುದು ಬ್ಯಾಂಕಿಂಗ್ ದಿಗ್ಗಜರು ಅಭಿಪ್ರಾಯಪಟ್ಟರು.
ಐಸಿಐಸಿಐ ಬ್ಯಾಂಕ್ ಛೇರ್‌ಮನ್ ಗಿರೀಶ್ ಚಂದ್ರ ಚತುರ್ವೇಧಿ ಮಾತನಾಡಿ, ಸಾಲ ವಸೂಲಾತಿ ಎಂಬುದು ಭಾರತೀಯ ಬ್ಯಾಂಕಿಂಗ್‌ನ ಬಹುದೊಡ್ಡ ಸಮಸ್ಯೆ. ವಿದೇಶದಲ್ಲಿ ಸಾಲವಸೂಲಾತಿ ಎಂಬುದು ಕೇವಲ ಕೆಲವೇ ತಿಂಗಳುಗಳ ಪ್ರಕ್ರಿಯೆ ಆದರೆ ಭಾರತದಲ್ಲಿ ಸಾಲ ವಸೂಲಾತಿ ಮಾಡಲು 5-7 ವರ್ಷಗಳೇ ಹಿಡಿಯುತ್ತವೆ ಎಂದರು.

ಹಿಂದಿರುಗದ ಸಾಲದ ವಸೂಲಾತಿಗೆ ಕಾನೂನಿನಲ್ಲಿಯೇ ಕೆಲವು ಮಾರ್ಪಾಡುಗಳು ಅವಶ್ಯಕತೆ ಇದೆ ಎಂಬುದು ಚತುರ್ವೇಧಿ ಅವರ ಅಭಿಪ್ರಾಯ. ಆದರೆ ಭಾರತದಂತಹಾ ಸಂಯುಕ್ತ ರಾಷ್ಟ್ರದಲ್ಲಿ ಕೆಲವು ಕಾನೂನುಗಳು ಕೇಂದ್ರದ ಕೈಯಲ್ಲಿದ್ದರೆ, ಕೆಲವು ರಾಜ್ಯದ ಕೈಯಲ್ಲಿವೆ ಹಾಗಾಗಿ ಬದಲಾಣೆಗಳಾಗಲು ತಡವಾಗುತ್ತವೆ. ಆದರೆ ಇದರಿಂದ ತೊಂದರೆ ಅನುಭವಿಸುವುದು ಬ್ಯಾಂಕ್.
ಯುಕೋ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ರವಿ ಕೃಷ್ಣಾರೆಡ್ಡಿ ಮಾತನಾಡಿ, 'ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಸಣ್ಣ ಅಥವಾ ಮಧ್ಯಮ ಪ್ರಮಾಣದ ಹಿಂತರುಗದ ಸಾಲಗಳಿವೆ. ಆದರೆ ಸಮಸ್ಯೆ ಇರುವುದು ಅಭಿವೃದ್ಧಿ ಬ್ಯಾಂಕುಗಳಲ್ಲಿ. ಬ್ಯಾಂಕುಗಳಿಗೆ ಸಾಲ ಮರುಪಾವತಿ ಮಾಡಿಸಿಕೊಳ್ಳಲು ವಿಶೇಷ ತರಬೇತಿ ಇಲ್ಲ, ಕಾನೂನುಗಳೂ ನಮ್ಮ ಪರವಾಗಿಲ್ಲ' ಎಂಬುದು ಅವರ ಅಭಿಪ್ರಾಯ.
ಈ ಹಂತದಲ್ಲಿ ವಸೂಲಿಯಾಗದ ಸಾಲದ ವಿರುದ್ಧ ಬ್ಯಾಂಕುಗಳಿರುವ ಕೊನೆಯ ಅವಕಾಶವೆಂದು ದಿವಾಳಿತನದ ಸಂಹಿತ ಅಥವಾ ಬ್ಯಾಂಕ್ರಪ್ಟಿಸಿ ಕೋಡ್ (ಐಬಿಸಿ). 2016ರ ಐಬಿಸಿಯ ನಿಯಮಾವಳಿಗಳಿಂದ ಬ್ಯಾಂಕುಗಳು ವಸೂಲಿಯಾಗದ ಸಾಲ ಅಥವಾ ಲಾಭ ಉತ್ಪಾದಿಸದ ಸ್ವತ್ತು ಹಾಗೂ ಅವೈಜ್ಞಾನಿಕವಾಗಿ ಸಾಲದ ವಿರುದ್ಧ ಹೋರಾಡಬಹುದಾಗಿದೆ ಎಂದು ಭಾರತ ಸರ್ಕಾರದ ಮಾಜಿ ಹಣಕಾಸು ಸಲಹೆಗಾರ ಪಟ್ನಾಯಕ್ ಹೇಳಿದ್ದಾರೆ.












Click it and Unblock the Notifications