India weather: ದೇಶದ ಈ ಭಾಗದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ, ಹಾಗೆಯೇ ಮುಂದಿನ 2 ದಿನವೂ ಮುಂದುವರಿಕೆ
ನವದೆಹಲಿ, ಜನವರಿ, 09: ಚಳಿಗಾಲದ ನಡುವೆಯೂ ದೇಶದ ಹಲವೆಡೆ ಗುಡುಗು, ಮಂಜು ಸಹಿತ ಮಳೆಯಾಗುತ್ತಿದೆ. ಹಾಗೆಯೇ ಇನ್ನು ಮುಂದಿನ ಎರಡರಿಂದ ಮೂರು ದಿನಗಳ ಕಾಲ ಈ ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದೆ ಎನ್ನುವ ಮುನ್ಸೂಚನೆ ಇದೆ. ಹಾಗಾದರೆ ಯಾವೆಲ್ಲ ಭಾಗಗಳಲ್ಲಿ ಮಳೆ ಸುರಿಯಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಮಳೆಯ ಪ್ರಮಾಣದ ವಿವರ: ಮಂಗಳವಾರದ ಬೆಳಗ್ಗೆ 6 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಸರಾಸರಿ 46.03 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು 966.7ಮಿಮೀ ಮಳೆಯಾಗಿದೆ. ಮರಕ್ಕಣಂ ಜಿಲ್ಲೆಯಲ್ಲಿ 194 ಮಿ.ಮೀ., ತಿಂಡಿವನಂ 88, ಗಿಂಗಿ 68.3 ಮಿ.ಮೀ., ವನೂರ್ 62 ಮಿಲಿ ಮೀಟರ್, ಸೆಮ್ಮೆಡು 57.4 ಮಿಲಿ ಮೀಟರ್ ಮತ್ತು ಆನಂದಪುರಂನಲ್ಲಿ 55.2 ಮಿಲಿ ಮೀಟರ್ ಮಳೆಯಾಗಿದೆ. ಸದ್ಯ ಯಾವುದೇ ಜೀವ ಮಾನವ ಹಾನಿ ಸಂಭವಿಸಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ.

ಭಾರೀ ಮಳೆಯಿಂದ ಹದಿನಾಲ್ಕು ಗುಡಿಸಲುಗಳು ಭಾಗಶಃ ಹಾನಿಯಾಗಿದ್ದು, ಒಂದು ಗುಡಿಸಲು ಸಂಪೂರ್ಣ ಹಾನಿಯಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಆರು ಮೇಕೆಗಳು, ಎರಡು ಹಸುಗಳು ಮತ್ತು ಒಂದು ಕರು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಇನ್ನು ಇಂದು (ಜನವರಿ 09) ಕೂಡ ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯಪ್ರದೇಶ, ಮಧ್ಯ ಮಹಾರಾಷ್ಟ್ರ, ತಮಿಳುನಾಡು, ಪುದುಚೇರಿ, ಕಾರೈಕಾಲ್, ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕ, ಕೇರಳ, ಮಾಹೆ ಮತ್ತು ಲಕ್ಷದ್ವೀಪಗಳಲ್ಲಿ ಚದುರಿದಂತೆ ಗುಡುಗು ಸಹಿತ ಮಳೆಯಾಗುವ ಸಂಭವವಿದೆ.
ಅಂಡಮಾನ್-ನಿಕೋಬಾರ್ ದ್ವೀಪಗಳು, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಚಂಡೀಗಢ, ನವದೆಹಲಿ, ಪಂಜಾಬ್, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ ಮತ್ತು ಲಡಾಖ್, ಪಶ್ಚಿಮ ರಾಜಸ್ಥಾನ, ಪೂರ್ವ ಮಧ್ಯಪ್ರದೇಶ, ಗುಜರಾತ್, ಕೊಂಕಣ, ಗೋವಾ, ಮರಾಠವಾಡ ಸೇರಿದಂತೆ ಪ್ರತ್ಯೇಕ ಸ್ಥಳಗಳಲ್ಲಿ ಚಳಿಯ ನಡುವೆಯೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಉತ್ತರ ಭಾರತ, ಮಧ್ಯ ಭಾರತ, ಪೂರ್ವ ಭಾರತ ಮತ್ತು ಈಶಾನ್ಯ ಭಾರತದ ಪ್ರತ್ಯೇಕ ಸ್ಥಳಗಳಲ್ಲಿ ಬೆಳಗ್ಗೆ ಗಂಟೆಯವರೆಗೂ ದಟ್ಟವಾದ ಮಂಜು ಇತ್ತು.
ಬುಧವಾರ (ಜನವರಿ 10) ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಕೇರಳ-ಮಾಹೆ ಮತ್ತು ಲಕ್ಷದ್ವೀಪದಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಅಂಡಮಾನ್-ನಿಕೋಬಾರ್ ದ್ವೀಪಗಳು, ಉಪಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ, ಮಧ್ಯಪ್ರದೇಶ, ಮಧ್ಯ ಮಹಾರಾಷ್ಟ್ರ, ಛತ್ತೀಸ್‌ಗಢ ಮತ್ತು ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಗುಡುಗು ಸಹಿತ ಪ್ರತ್ಯೇಕ ಮಳೆಯಾಗುವ ಸಾಧ್ಯತೆಯಿದೆ.
ರಾಜಸ್ಥಾನದ ಕೆಲವು ಸ್ಥಳಗಳಲ್ಲಿ ಶೀತದ ವಾತಾವರಣ ಮುಂದುವರೆದಿದೆ. ಉತ್ತರ ಭಾರತ, ಮಧ್ಯ ಭಾರತ, ಪೂರ್ವ ಭಾರತ ಮತ್ತು ಈಶಾನ್ಯ ಭಾರತದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಇರಲಿದೆ ಎನ್ನುವ ಮುನ್ಸೂಚನೆ ಇದೆ.
ಬುಧವಾರದವರೆಗೆ ಕರಾವಳಿ ತಮಿಳುನಾಡಿನ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ. ಮುಂದಿನ 4-5 ದಿನಗಳಲ್ಲಿ ತಮಿಳುನಾಡು, ಕೇರಳ ಮತ್ತು ಲಕ್ಷದ್ವೀಪದಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ಗರಿಷ್ಠ ತಾಪಮಾನವು ಭಾರತದ ಉತ್ತರಾರ್ಧದಾದ್ಯಂತ ಸಾಮಾನ್ಯಕ್ಕಿಂತ ಕಡಿಮೆ ಇರುತ್ತದೆ. ಉತ್ತರ ಭಾರತವನ್ನು ಹೊರತುಪಡಿಸಿ, ಈ ಅವಧಿಯಲ್ಲಿ ಭಾರತದಾದ್ಯಂತ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ ಎನ್ನುವ ಮುನ್ಸೂಚನೆ ಇದೆ.












Click it and Unblock the Notifications