India Weather: ಮೇ 29ರವರೆಗೆ ಈ ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ
India weather: ದೇಶದ ಹಲವೆಡೆ ಬಿಸಿಗಾಳಿಯ ಪ್ರಮಾಣ ಹೆಚ್ಚಾಗುತ್ತಿದ್ದರೆ, ಇನ್ನು ಕೆಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಮತ್ತೊಂದೆಡೆ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ "ರೆಮಲ್" ಚಂಡಮಾರುತದ ಪ್ರಭಾವ ಹಿನ್ನೆಲೆ ಮುಂದಿನ ಮೂರು ದಿನಗಳ ಕಾಲ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದ ಮೇಲೆ ರೆಮಲ್ ಚಂಡಮಾರುತ ಪ್ರಭಾವ ಬೀರಿದ್ದು, ಇದರ ನಡುವೆಯೇ ಕೆಲವೆಡೆ ಇತರ ಭಾಗಗಳಲ್ಲಿ ತಾಪಮಾನದ ಪ್ರಮಾಣ ಹೆಚ್ಚಾಗುತ್ತಿದೆ. ರಾಜಸ್ಥಾನದ ಫಲೋಡಿಯಲ್ಲಿ ತಾಪಾಮ ಪ್ರಮಾಣ 50 ಡಿಗ್ರಿ ಸೆಲ್ಸಿಯಸ್‌ಗೆ ಏರಿದ್ದು, ಇದು ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜೂನ್ 1, 2019ರಿಂದ ಭಾರತದಲ್ಲಿ ದಾಖಲಾದ ಅತ್ಯಧಿಕ ತಾಪಮಾನವಾಗಿದೆ ಎನ್ನಲಾಗಿದೆ.

ಮೇ 25ರ ಶನಿವಾರದಂದು ಭಾರತದ ಹಲವು ಭಾಗಗಳಲ್ಲಿ ತಾಪಮಾನ ಪ್ರಮಾಣ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು ಇಂದು (ಮೇ 26) ರಾಜಸ್ಥಾನ ಮತ್ತು ಅಸ್ಸಾಂನ ಪ್ರತ್ಯೇಕ ಪ್ರದೇಶಗಳಲ್ಲಿ ಬಿಸಿಗಾಳಿಯ ಪ್ರಮಾಣ ತುಸು ಹೆಚ್ಚಾಗಲಿದೆ. ಈಗಾಗಲೇ ಮಧ್ಯಪ್ರದೇಶ, ನವದೆಹಲಿ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರದ ಕೆಲವು ಭಾಗಗಳಲ್ಲಿ ಮತ್ತು ಹರಿಯಾಣ, ಅಸ್ಸಾಂನ ಪ್ರತ್ಯೇಕ ಭಾಗಗಳಲ್ಲಿ ಶಾಖದ ಅಲೆಯ ವಾತಾವರಣ ಚಾಲ್ತಿಯಲ್ಲಿವೆ ಎಂದು ಹೇಳಿದೆ.
ಶನಿವಾರ (ಮೇ 25) ಸಂಜೆ 7:50ಕ್ಕೆ IMD ಹೊರಡಿಸಿದ ವರದಿ ಪ್ರಕಾರ, ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ 'ರೆಮಲ್' ಚಂಡಮಾರುತದ ಪ್ರಭಾವ ತೀವ್ರಗೊಂಡಿದೆ. ಇದು ಕೆಪುಪಾರಾದಿಂದ ಸರಿಸುಮಾರು 360 ಕಿಲೋ ಮೀಟರ್ ದಕ್ಷಿಣ-ಆಗ್ನೇಯಕ್ಕೆ ಮತ್ತು ಸಾಗರ್ ದ್ವೀಪದಿಂದ 350 ಕಿಲೋ ಮೀಟರ್ ದಕ್ಷಿಣ-ಆಗ್ನೇಯಕ್ಕೆ ಕೇಂದ್ರೀಕೃತವಾಗಿತ್ತು.
ಇನ್ನು ಈ ಚಂಡಮಾರುತವು ಇಂದು (ಮೇ 26) ಮತ್ತಷ್ಟು ತೀವ್ರಗೊಂಡು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದ ಕರಾವಳಿಯ ಸಾಗರ್ ದ್ವೀಪ ಮತ್ತು ಖೆಪುಪಾರಾ ನಡುವೆ 110ರಿಂದ 120 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಮಧ್ಯರಾತ್ರಿಯ ವೇಳೆಗೆ ಗಂಟೆಗೆ 135 ಕಿ.ಮೀ. ಹೆಚ್ಚಾಗುವ ಸಾಧ್ಯತೆಯೂ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.
ಎಲ್ಲೆಲ್ಲಿ ಮಳೆ?: ಚಂಡಮಾರುತದ ಪ್ರಭಾವ ಹಿನ್ನೆಲೆ ಮೇ 26 ಮತ್ತು ಮೇ 27ರಂದು ಪಶ್ಚಿಮ ಬಂಗಾಳ ಮತ್ತು ಉತ್ತರ ಒಡಿಶಾದ ಕರಾವಳಿ ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದೆ. ಅಲ್ಲದೆ, ಭಾರೀ ಮಳೆ ಮುನ್ಸೂಚನೆ ಕೋಲ್ಕತ್ತಾ, ಹೌರಾ, ನಾಡಿಯಾ ಮತ್ತು ಪುರ್ಬಾ ಮೇದಿನಿಪುರ್ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಮೇ 27-28ರಂದು ಈಶಾನ್ಯ ಭಾರತದ ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಬೀಳಬಹುದು ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಅದರಲ್ಲೂ ಭಾರತೀಯ ಹವಾಮಾನ ಇಲಾಖೆ ಕೇರಳದಲ್ಲಿ ಮೇ 26 ರಿಂದ 29ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ಎಲ್ಲೆಲ್ಲಿ ತಾಪಮಾನ ಹೆಚ್ಚಳ?: ವಾಯುವ್ಯ ಭಾರತ ಮತ್ತು ಮಧ್ಯಪ್ರದೇಶದ ಬಯಲು ಪ್ರದೇಶಗಳಲ್ಲಿ ತಾಪಮಾನ ಪ್ರಮಾಣದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು IMD ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹಾಗೆಯೇ ಮುಂದಿನ 4-5 ದಿನಗಳ ಕಾಲ ಪಶ್ಚಿಮ ಹಿಮಾಲಯ ಪ್ರದೇಶ, ಛತ್ತೀಸ್‌ಗಢದಲ್ಲಿಯೂ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಮೇ 29ರವರೆಗೆ ಜಮ್ಮು ವಿಭಾಗ, ಹಿಮಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ ಮತ್ತು ವಿದರ್ಭದ ಪ್ರತ್ಯೇಕ ಸ್ಥಳಗಳಲ್ಲಿ ತಾಪಮಾನ ಹೆಚ್ಚಾಗುವ ಸಾಧ್ಯತೆಯಿದೆ. ಮೇ 26 ರಿಂದ 28 ರವರೆಗೆ ಪಶ್ಚಿಮ & ಪೂರ್ವ ಉತ್ತರ ಪ್ರದೇಶದಲ್ಲಿ, ಮೇ 27 ರಿಂದ 29ರವರೆಗೆ ಛತ್ತೀಸ್‌ಗಢದಲ್ಲಿ, ಗುಜರಾತ್‌ನಲ್ಲಿ ಇಂದು ಇದೇ ವಾತಾವರಣ ಇರಲಿದ ಎಂದು ತಿಳಿಸಿದೆ.
ಮೇ 26 ರಿಂದ 29ರವರೆಗೆ ರಾಜಸ್ಥಾನದ ಹೆಚ್ಚಿನ ಭಾಗಗಳಲ್ಲಿ, ಪಂಜಾಬ್‌ನ ಹಲವು ಭಾಗಗಳಲ್ಲಿ, ನವದೆಹಲಿ, ಹರಿಯಾಣ, ಚಂಡೀಗಢ, ಪಶ್ಚಿಮ ಉತ್ತರ ಪ್ರದೇಶದಲ್ಲಿಯೂ ತೀವ್ರ ಶಾಖದ ಅಲೆಗಳು ಇರುವ ಸಾಧ್ಯತೆಯಿದೆ. ಮೇ 26ರಂದು ಪಶ್ಚಿಮ ಮಧ್ಯಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ, ಪೂರ್ವ ಮಧ್ಯಪ್ರದೇಶದಲ್ಲಿ ಮೇ 27 ಮತ್ತು 28ರಂದು ಇದೇ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ.












Click it and Unblock the Notifications