India weather: ದೇಶದ ಈ ಭಾಗಗಳಲ್ಲಿ ಮುಂದಿನ 3-4 ದಿನಗಳ ಕಾಲ ವಿಪರೀತ ಚಳಿ ಮುನ್ಸೂಚನೆ
ನವದೆಹಲಿ, ಡಿಸೆಂಬರ್, 20: ಡಿಸೆಂಬರ್ ತಿಂಗಳ ಆರಂಭದಿಂದಲೂ ಕೂಡ ಇಲ್ಲಿಯವರೆಗೂ ಕೂಡ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಅಬ್ಬರದ ಮಳೆಯಾಗುತ್ತಿದೆ. ಅದರಲ್ಲೂ ತಮಿಳುನಾಡಿನ ಚೆನ್ನೈನಲ್ಲೇ ಸುನಾಮಿಯಂತಹ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಇನ್ನು ಆಂಧ್ರ, ಕೇರಳದ ಅಲ್ಲಲ್ಲಿ ಅಲ್ಪ ಮಳೆಯಾಗಿದೆ ಅಷ್ಟೇ. ಇನ್ನು ಬಹುತೇಕ ರಾಜ್ಯಗಳಲ್ಲಿ ಮೋಡ ಮುಚ್ಚಿದ ವಾತಾರಣ ಇದ್ದು, ಚಳಿಯ ಪ್ರಮಾಣ ಹೆಚ್ಚಿರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದೇಶದ ಬಹುತೇಕ ಭಾಗಗಳಲ್ಲಿ ಚಳಿಯ ವಾತಾವರಣ ಮುಂದುವರೆದಿದೆ. ಉತ್ತರ ಭಾರತದಲ್ಲಿ ತಾಪಮಾನದ ಪ್ರಮಾಣ ಕಡಿಮೆಯಾಗುತ್ತಿದ್ದು, ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗುತ್ತಿದೆ. ಆದ್ದರಿಂದ ಜನರು ಮೈಬೆಚ್ಚಗಿರಿಸಲು ಸೂಕ್ತ ವಸ್ತ್ರಗಳನ್ನು ಧರಿಸಲು ಪ್ರಾರಂಭಿಸಿದ್ದಾರೆ.

ಮುಂದಿನ ಕೆಲವು ದಿನಗಳ ಕಾಲ ಪಂಜಾಬ್ ಮತ್ತು ಹರಿಯಾಣದ ಪ್ರತ್ಯೇಕ ಸ್ಥಳಗಳಲ್ಲಿ ದಟ್ಟವಾದ ಮಂಜು ಇರಲಿದ್ದು, ಶೀತದ ವಾತಾವರಣ ನಿರ್ಮಾಣ ಆಗಲಿದೆ. ವಾಯುವ್ಯ ಉತ್ತರ ಪ್ರದೇಶದಲ್ಲಿ ಮೂರು ದಿನಗಳ ಕಾಲ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ. ಅಸ್ಸಾಂ ಮತ್ತು ಮೇಘಾಲಯ ಮತ್ತು ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಇಂದು ದಟ್ಟವಾದ ಮಂಜು ಬಿದ್ದಿದ್ದು, ಸಂಜೆಯೂ ಸಹ ಇಲ್ಲಿ ಇದೇ ವಾತಾವರಣ ಮುಂದುವರೆಯಲಿದೆ ಎಂದು ತಿಳಿಸಿದೆ.
ಆರ್‌ಡಬ್ಲ್ಯೂಎಫ್‌ಸಿ ನವದೆಹಲಿಯಲ್ಲಿ ಭವಿಷ್ಯವಾಣಿಯ ಪ್ರಕಾರ, ಇಂದು ನವದೆಹಲಿಯಲ್ಲಿ ಗರಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಆಗಿದ್ದರೆ, ಕನಿಷ್ಠ 7 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆಯಿದೆ. ಇನ್ನು ಇಂದು ಬೆಳಗ್ಗೆ ನವದೆಹಲಿಯ ತಾಪಮಾನವು 8 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿತ್ತು, ಆದರೆ ಮುಂಬೈನಲ್ಲಿ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ನವದೆಹಲಿಯಲ್ಲಿ ಮಂಜಿನ ವಾತಾರವರಣ ನಿರ್ಮಾಣ ಆಗಿದ್ದು, ಭಾರೀ ಶೀತದಿಂದ ಇಲ್ಲಿನ ಜನರು ತತ್ತರಿಸಿ ಹೋಗಿದ್ದಾರೆ. ಇನ್ನು ಮುಂದಿನ ಕೆಲವು ದಿನಗಳ ಕಾಲ ನವದೆಹಲಿಯ ಕನಿಷ್ಠ ತಾಪಮಾನವು 7-9 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ಇರಲಿದೆ ಎಂದು ನಿರೀಕ್ಷಿಸಲಾಗಿದೆ. ಮುಂದಿನ 4-5 ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಕನಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ.












Click it and Unblock the Notifications