India vs Canada: ಕೆನಡಾ ಪ್ರಜೆಗಳಿಗೆ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದ ಭಾರತ- ಮತ್ತಷ್ಟು ಉಲ್ಬಣಿಸಿದ ಬಿಕ್ಕಟ್ಟು
ನವದೆಹಲಿ, ಸೆಪ್ಟೆಂಬರ್ 21: ಖಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿಕೆ ನೀಡಿದ್ದಾರೆ. ಇದು ಭಾರತ ಹಾಗೂ ಕೆನಡಾ ನಡುವಿನ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ. ಈಗ ಭಾರತವು ಕೆನಡಾ ಪ್ರಜೆಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಬಂದಿರುವ ಬೆದರಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಭಾರತ ಸರ್ಕಾರ ವೀಸಾ ನೀಡುವುದನ್ನು ಸ್ಥಗಿತಗೊಳಿಸಿದೆ. ಕೆನಡಾದಲ್ಲಿನ ಭಾರತದ ರಾಜತಾಂತ್ರಿಕರು ಹಾಗೂ ಪ್ರಜೆಗಳ ಸುರಕ್ಷತೆಯನ್ನು ಕಾಪಾಡುವುದಾಗಿ ಅಲ್ಲಿನ ಸರ್ಕಾರ ಹೇಳಿದ್ದರೂ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಂಡಿದೆ.

ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನವಾಗುವವರೆಗೂ ಅನಿರ್ದಿಷ್ಟಾವಧಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಭಾರತ ಸರ್ಕಾರ ತಿಳಿಸಿದೆ.
ಎರಡೂ ದೇಶಗಳು ಹಿರಿಯ ರಾಜತಾಂತ್ರಿಕರನ್ನು ಉಚ್ಚಾಟಿಸಿದ ನಂತರ ಈ ಮಹತ್ವದ ನಿರ್ಧಾರವನ್ನು ಭಾರತ ತೆಗೆದುಕೊಂಡಿದೆ.
ಕೆನಡಾದಲ್ಲಿನ ವೀಸಾ ಅರ್ಜಿ ಕೇಂದ್ರಗಳನ್ನು ನಡೆಸುತ್ತಿರುವ ಬಿಎಲ್‌ಎಸ್ ಇಂಟರ್‌ನ್ಯಾಶನಲ್ ತನ್ನ ವೆಬ್‌ಸೈಟ್‌ನಲ್ಲಿ ಈ ಸಂದೇಶವನ್ನು ಪ್ರಕಟಿಸಿದೆ. 'ಸೆಪ್ಟೆಂಬರ್ 21 ರಿಂದ ಜಾರಿಗೆ ಬರುವಂತೆ, ಮುಂದಿನ ಸೂಚನೆ ಬರುವವರೆಗೆ ಭಾರತೀಯ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ' ಎಂದು ಭಾರತ ಸರ್ಕಾರ ತಿಳಿಸಿದೆ ಎಂದು ಅದು ಹೇಳಿದೆ.

ಆದರೆ, ವೀಸಾ ಸೇವೆ ಸ್ಥಗಿತಗೊಳಿಸಿದ್ದರ ಕುರಿತು ಭಾರತ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಂದಿಲ್ಲ.
ಕೋವಿಡ್ -19 ಸಾಂಕ್ರಾಮಿಕದ ನಂತರ ಭಾರತವು ವೀಸಾಗಳನ್ನು ಅಮಾನತುಗೊಳಿಸಿರುವುದು ಇದೇ ಮೊದಲು ಎಂದು ತಿಳಿದುಬಂದಿದೆ.
ಇದೇ ವೇಳೆ, ಭಾರತೀಯ ಹೈಕಮಿಷನ್‌ನ ವೆಬ್‌ಸೈಟ್ ಡೌನ್ ಆಗಿದೆ. ಈ ಕಾರಣ, ವೀಸಾ ಸ್ಥಗಿತ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಸ್ಪಷ್ಟನೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲವೆಂದು ವರದಿಯಾಗಿದೆ.
ಭಾರತ-ವಿರೋಧಿ ಚಟುವಟಿಕೆಗಳು ಹಾಗೂ ರಾಜಕೀಯವಾಗಿ ಮನ್ನಣೆ ಪಡೆದ ದ್ವೇಷದ ಅಪರಾಧಗಳು ಕೆನಡಾದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ಕೆನಡಾದಲ್ಲಿರುವ ಭಾರತದ ನಾಗರಿಕರನ್ನು ಅತ್ಯಂತ ಜಾಗರೂಕರಾಗಿರುವಂತೆ ಕೇಂದ್ರ ಸರ್ಕಾರ ಮನವಿ ಮಾಡಿದೆ. ವಿಶೇಷವಾಗಿ ಭಾರತೀಯ ವಿದ್ಯಾರ್ಥಿಗಳಿಗೆ ತೀವ್ರ ಎಚ್ಚರಿಕೆ ಮತ್ತು ಜಾಗರೂಕರಾಗಿರಲು ಸೂಚಿಸಲಾಗಿದೆ.
ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಸರ್ರೆ ಪಟ್ಟಣದಲ್ಲಿ ಗುರುನಾನಕ್ ಸಿಖ್ ಗುರುದ್ವಾರದ ಪಾರ್ಕಿಂಗ್ ಸ್ಥಳದಲ್ಲಿ ನಿಜ್ಜರ್‌ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈತ ಪ್ರತ್ಯೇಕತಾವಾದಿ ಸಂಘಟನೆಯಾದ ಸಿಖ್ಸ್ ಫಾರ್ ಜಸ್ಟಿಸ್‌ನ ಪ್ರಮುಖ ನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದನೆಂದು ತಿಳಿದುಬಂದಿದೆ.











Click it and Unblock the Notifications