India-Pak Tensions: ದೇಶದ 21 ವಿಮಾನ ನಿಲ್ದಾಣಗಳಲ್ಲಿ ವಿಮಾನ ಸೇವೆ ದಿಢೀರ್ ರದ್ದು!
India-Pak Tensions: ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬೆನ್ನಲ್ಲೇ ಪಾಕಿಸ್ತಾನವು ಬಾಲ ಬಿಚ್ಚಿದ್ದು. ಭಾರತದ ಮೇಲೆ ಪ್ರತೀಕಾರ ತೆಗೆದುಕೊಳ್ಳದೆ ಬಿಡುವುದಿಲ್ಲ ಎಂದು ಹೇಳಿದೆ. ಎರಡೂ ದೇಶಗಳ ನಡುವೆ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮವಾಗುತ್ತಿದೆ. ಈ ನಡುವೆ ಭಾರತವು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಭಾರತೀಯ ಸೇನೆಯು ಅಲರ್ಟ್ ಆಗಿದೆ. ಭಾರತದಾದ್ಯಂತ 21 ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ಮೇ 10ರ ವರೆಗೆ ಮುಚ್ಚಲಾಗಿದೆ.
ಭಾರತದ ಗಡಿ ಪ್ರದೇಶದಲ್ಲಿ ಪಾಕಿಸ್ತಾನವು ಅಪ್ರಚೋದಿತ ಗುಂಡಿನ ದಾಳಿಯನ್ನು ಮುಂದುವರಿಸಿದೆ. ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರವನ್ನು ನೀಡುತ್ತಿದೆ. ಇದರ ನಡುವೆ ಸೂಕ್ಷ್ಮ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ಉತ್ತರ ಭಾರತ ಹಾಗೂ ವಾಯುವ್ಯ ಭಾರತದ ಪ್ರದೇಶದಲ್ಲಿನ ವಿಮಾನ ನಿಲ್ದಾಣಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

ದೇಶದ ಈ ಭಾಗಗಳಲ್ಲಿ ವಿಮಾನ ನಿಲ್ದಾಣಗಳು ಬಂದ್: ದೇಶದ ಪ್ರಮುಖ ಪ್ರದೇಶಗಳಲ್ಲಿ ವಿಮಾನ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳು, ಪಂಜಾಬ್, ಹಿಮಾಚಲ ಪ್ರದೇಶ, ರಾಜಸ್ಥಾನ ಹಾಗೂ ಗುಜರಾತ್ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ. ಭಾರತೀಯ ವಿಮಾನಯಾನ ಸಂಸ್ಥೆಗಳು ಇದೀಗ ಹೆಚ್ಚಿನ ಸಂಖ್ಯೆಯ ವಿಮಾನಗಳ ಹಾರಾಟವನ್ನು ನಿಷೇಧಿಸಿವೆ. ಅಮೆರಿಕ ಸೇರಿದಂತೆ ಕೆಲವು ಪ್ರಮುಖ ದೇಶಗಳ ವಿಮಾನಯಾನ ಸಂಸ್ಥೆಗಳು ಭಾರತಕ್ಕೆ ಪ್ರವೇಶಿಸುವುದಕ್ಕೆ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸಲು ಆಗದೆ ಇರುವುದು ಈಗಾಗಲೇ ಕೆಲವು ಅಂತಾರಾಷ್ಟ್ರೀಯ ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ಹೇಳಲಾಗುತ್ತಿದೆ.
ಇನ್ನು ಮುಖ್ಯವಾಗಿ ಈ ವಿಮಾನ ನಿಲ್ದಾಣಗಳಲ್ಲಿ ಹಲವು ವಿಮಾನಯಾನ ಸಂಸ್ಥೆಗಳು ಹಾಗೂ ಭಾರತೀಯ ವಾಯುಪಡೆಯು ಜಂಟಿಯಾಗಿ ಬಳಸುತ್ತವೆ. ಹೀಗಾಗಿ, ಈ ಪ್ರದೇಶಗಳನ್ನು ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲಾಗಿದ್ದು ಬಂದ್ ಮಾಡಲಾಗಿದೆ ಎಂದು ಹೇಳಲಾಗಿದೆ. ಹಲವು ಪ್ರಮುಖ ವಿಮಾನಯಾನ ಸಂಸ್ಥೆಗಳು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು ಈ ಮಾಹಿತಿಯನ್ನು ಹಂಚಿಕೊಂಡಿವೆ.
ಮೇ 7ರಂದು ಸಹ ಸಮಸ್ಯೆ: ಇನ್ನು ಆಪರೇಷನ್ ಸಿಂಧೂರ ಕಾರ್ಯಚರಣೆಯ ನಂತರ ದೇಶದಲ್ಲಿ ಕೆಲವೊಂದು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ದೇಶದ ಗಡಿ ಭಾಗದ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಗೃಹ ಸಚಿವ ಅಮಿತ್ ಶಾ ಅವರು ವಿಶೇಷ ಸಭೆಯನ್ನು ನಡೆಸಿದ್ದಾರೆ. ಅಲ್ಲದೇ ನೆನ್ನೆಯೂ ಸಹ ಹಲವು ಪ್ರಮುಖ ವಿಮಾನ ನಿಲ್ದಾಣಗಳ ಸೇವೆಯಲ್ಲಿ ಭಾರೀ ವ್ಯತ್ಯಾಸಗಳು ಆಗಿವೆ. ಗಡಿ ಭಾಗದ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.












Click it and Unblock the Notifications