ಮಣಿಪುರದಂತಹ ಪರಿಸ್ಥಿತಿ ತಪ್ಪಿಸಲು 'ಇಂಡಿಯಾ' ಮೈತ್ರಿಕೂಟ ಗೆಲ್ಲಲೇಬೇಕು: ಮೊದಲ ಪಾಡ್‌ಕ್ಯಾಸ್ಟ್‌ನಲ್ಲಿ ಎಂಕೆ ಸ್ಟಾಲಿನ್ ಹೇಳಿದ್ದೇನ
ಚೆನ್ನೈ, ಸೆಪ್ಟೆಂಬರ್ 04: ದೇಶದಲ್ಲಿ ಮಣಿಪುರದಂತಹ ಪರಿಸ್ಥಿತಿಯನ್ನು ತಪ್ಪಿಸಲು 'ಇಂಡಿಯಾ' ಮೈತ್ರಿಕೂಟ ಗೆಲುವು ಸಾಧಿಸಲೇಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದ್ದಾರೆ. ಅವರು ತಮ್ಮ ಪಾಡ್‌ಕಾಸ್ಟ್ ಸರಣಿಯ ಮೊದಲ ಸಂಚಿಕೆಯನ್ನು ಇಂದು ಪ್ರಕಟಿಸಿದ್ದಾರೆ. ಈ ಪಾಡ್‌ಕಾಸ್ಟ್ ಒಟ್ಟು ಐದು ಭಾಷೆಗಳಲ್ಲಿ ಲಭ್ಯವಿದೆ. ಇದು ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಪ್ರಕಟಗೊಂಡಿದೆ.
ತಮ್ಮ ಮೊದಲ ಪಾಡ್‌ಕಾಸ್ಟ್‌ನಲ್ಲಿ ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿ ಸ್ಟಾಲಿನ್ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಸುಳ್ಳು ಭರವಸೆಗಳನ್ನು ನೀಡುತ್ತ ಬಂದಿದೆ. ಪ್ರತಿಯೊಬ್ಬರ ಖಾತೆಗಳಲ್ಲಿ 15 ಲಕ್ಷವನ್ನು ಹಾಕಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದರು. ಆದರೆ, ಅದು ಇಂದಿಗೂ ಸಾಕಾರಗೊಂಡಿಲ್ಲವೆಂದು ಅವರು ಟೀಕಿಸಿದ್ದಾರೆ.

ತಾವು ಅಧಿಕಾರಕ್ಕೆ ಬಂದ ತಕ್ಷಣ ರೈತರ ಗಳಿಕೆ ನಾಲ್ಕು ಪಟ್ಟು ಹೆಚ್ಚಾಗಲಿದೆ ಪ್ರಧಾನಿ ಮೋದಿ ಅವರು ಹೇಳಿದ್ದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳ ಭರವಸೆ ನೀಡಲಾಗಿತ್ತು. ಆದರೆ, ಇದಾವುದೂ ಕಾರ್ಯರೂಪಕ್ಕೆ ಬರಲಿಲ್ಲ ಎಂದು ಸ್ಟಾಲಿಕ್ ವಾಗ್ದಾಳಿ ನಡೆಸಿದ್ದಾರೆ.
ಮಣಿಪುರ ಹಾಗೂ ಹರಿಯಾಣದಲ್ಲಿ ನಡೆದಿರುವ ಜನಾಂಗೀಯ ಹಿಂಸಾಚಾರವನ್ನು ಉಲ್ಲೇಖಿಸಿ ಮಾತನಾಡಿರುವ ಸ್ಟಾಲಿನ್, ಇಂಡಿಯಾ ಮೈತ್ರಿಕೂಟ ಜಯಗಳಿಸಿದರೆ ಈ ರೀತಿಯ ಗಲಭೆಗಳು ನಿಲ್ಲಲಿವೆ. ಮಣಿಪುರದಂತಹ ಪರಿಸ್ಥಿತಿಯನ್ನು ತಪ್ಪಿಸಲು ಇಂಡಿಯಾ ಮೈತ್ರಿಕೂಟ ಗೆಲುವು ಸಾಧಿಸಬೇಕು ಎಂದು ಹೇಳಿದ್ದಾರೆ.
ಬಹುಸಂಸ್ಕೃತಿಯ ಹಾಗೂ ವೈವಿಧ್ಯಮಯ ಭಾರತವನ್ನು ರೂಪಿಸಲು ಮತದಾರರು ಕೈಜೋಡಿಸಬೇಕು ಎಂದು ಸ್ಟಾಲಿನ್ ಒತ್ತಿ ಹೇಳಿದ್ದಾರೆ.

ಸಾರ್ವಜನಿಕ ವಲಯದ ಉದ್ಯಮಗಳನ್ನು ನಾಶಮಾಡಿ ಸ್ನೇಹಿತರ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಏರ್ ಇಂಡಿಯಾವನ್ನು ಖಾಸಗಿಯವರಿಗೆ ಮಾರಾಟ ಮಾಡುವುದು ಸೇರಿದಂತೆ ಮುಂತಾದ ವಿಚಾರಗಳನ್ನು ಮರೆಮಾಚಲು ಬಿಜೆಪಿ ಕೋಮುವಾದವನ್ನು ಬಳಸುತ್ತದೆ ಎಂದು ಸ್ಟಾಲಿನ್ ಆರೋಪಿಸಿದ್ದಾರೆ.
2002 ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆಗಳನ್ನು ಉಲ್ಲೇಖಿಸಿ ಎಂಕೆ ಸ್ಟಾಲಿನ್ ಮಾತನಾಡಿದ್ದಾರೆ.
'2002 ರಲ್ಲಿ ಗುಜರಾತ್‌ನಲ್ಲಿ ಬಿತ್ತಲಾದ ದ್ವೇಷ, 2023 ರಲ್ಲಿ ಮಣಿಪುರ ಜನಾಂಗೀಯ ಘರ್ಷಣೆಗೆ ಮತ್ತು ಹರಿಯಾಣದ ಜನಾಂಗೀಯ ಸಂಘರ್ಷಗಳಿಗೆ ಕಾರಣವಾಗಿದೆ' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ನ್ಯಾಯ, ಸಾಮಾಜಿಕ ಸಾಮರಸ್ಯ, ಒಕ್ಕೂಟ ವ್ಯವಸ್ಥೆ, ಜಾತ್ಯತೀತ ರಾಜಕೀಯ ಮತ್ತು ಸಮಾಜವಾದವನ್ನು ಮರುಸ್ಥಾಪಿಸುವುದು ಇಂಡಿಯಾ ಮೈತ್ರಿಕೂಟದ ಗುರಿಯಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
'ಇದನ್ನು ( ಬಿಜೆಪಿಯ ದ್ವೇಷ ರಾಜಕಾರಣ ) ಈಗ ನಿಲ್ಲಿಸದಿದ್ದರೆ ಭಾರತವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ' ಎಂದು ಸ್ಟಾಲಿನ್ ತಿಳಿಸಿದ್ದಾರೆ.
'ಒಕ್ಕೂಟ ವ್ಯವಸ್ಥೆಗೆ ಅಪಾಯ ಬಂದಾಗಲೆಲ್ಲಾ, ಡಿಎಂಕೆ ಯಾವಾಗಲೂ ಮುಂಚೂಣಿಯಲ್ಲಿ ನಿಂತು ಹೋರಾಡಿದೆ' ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರ ಮನ್ ಕಿ ಬಾತ್‌ಗೆ ಟಕ್ಕರ್ ನೀಡಲು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಪಾಡ್‌ಕಾಸ್ಟ್ ಅನ್ನು ಆರಂಭಿಸಿದ್ದಾರೆ. ಎಂಕೆ ಸ್ಟಾಲಿನ್ ಅವರ ಡಿಎಂಕೆ ಪಕ್ಷವು ಇಂಡಿಯಾ ಮೈತ್ರಿಕೂಟದ ಭಾಗವಾಗಿದೆ.












Click it and Unblock the Notifications