Ind-Pak War: "ಪಾಕಿಸ್ತಾನ ದಾಳಿ ಮಾಡಿದ್ರೆ ಪ್ರತ್ಯುತ್ತರಕ್ಕೆ ನಾವೂ ಸಿದ್ಧ"
Ind-Pak War: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ದೇಶದ ಸುಮಾರು 26 ಅಮಾಯಕರನ್ನು ಉಗ್ರರು ಬಲಿ ಪಡೆದುಕೊಂಡಿದ್ದರು. ಇದೀಗ ಭಾರತೀಯ ಸೇನೆ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ಕೈಗೊಂಡು ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಪಾಕ್‌ಗೆ ತಕ್ಕ ಪ್ರತ್ಯುತ್ತರ ನೀಡಿದೆ. ಇನ್ನೂ ಈ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಪ್ರತಿಕ್ರಿಯೆ ನೀಡಿದ್ದಾರೆ.
'ಆಪರೇಷನ್ ಸಿಂಧೂರ್ ವಿವರಗಳನ್ನು ಹಂಚಿಕೊಳ್ಳಲು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಮುಖ ರಾಷ್ಟ್ರಗಳ ಭದ್ರತಾ ಸಲಹೆಗಾರರ ಜೊತೆ ಮಾತುಕತೆ ನಡೆಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ, ಯುಕೆ ಎನ್‌ಎಸ್‌ಎ ಜೊನಾಥನ್ ಪೊವೆಲ್, ಸೌದಿ ಎನ್‌ಎಸ್‌ಎ ಮುಸೈದ್ ಅಲ್ ಐಬನ್, ಯುಎಇ ಎನ್‌ಎಸ್‌ಎ ಶೇಖ್ ತಹ್ನೂನ್, ಯುಎಇಯ ರಾಷ್ಟ್ರೀಯ ಭದ್ರತಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಅಲಿ ಅಲ್ ಶಮ್ಸಿ ಮತ್ತು ಜಪಾನ್‌ನ ಎನ್‌ಎಸ್‌ಎ ಮಸಟಕ ಒಕಾನೊ ಸೇರಿ ಉನ್ನತ ಭದ್ರತಾ ಅಧಿಕಾರಿಗಳೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ.

ಮೂಲಗಳ ಪ್ರಕಾರ, ಅಜಿತ್ ದೋವಲ್ ರಷ್ಯಾದ ಎನ್‌ಎಸ್‌ಎ ಸೆರ್ಗೆಯ್ ಶೋಯಿಗು, ಚೀನಾದ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಬ್ಯೂರೋದ ಸದಸ್ಯರಾಗಿರುವ ಚೀನಾದ ವಿದೇಶಾಂಗ ಸಚಿವ ವಾಂಗ್‌ಯಿ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್‌ರ ರಾಜತಾಂತ್ರಿಕ ಸಲಹೆಗಾರ ಎಮ್ಯಾನುಯೆಲ್ ಬೊನ್ನೆ ಅವರ ಜೊತೆ ಸಹ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.
ಎನ್‌ಎಸ್‌ಎ ಅಜಿತ್ ದೋವಲ್ ತನ್ನ ಸಹವರ್ತಿಗಳಿಗೆ ಭಯೋತ್ಪಾದನೆಯ ವಿರುದ್ಧ ಭಾರತ ತೆಗೆದುಕೊಂಡ ಕ್ರಮ ಮತ್ತು ದಾಳಿಯ ವಿಧಾನದ ಬಗ್ಗೆ ವಿವರಣೆ ನೀಡಿದ್ದಾರೆ. ಅಲ್ಲದೆ, ನಮಗೆ ಎರಡೂ ದೇಶಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸುವ ಉದ್ದೇಶ ಇಲ್ಲ. ಆದರೆ ಪಾಕಿಸ್ತಾನ ನಮ್ಮನ್ನು ಕೆಣಕಿದರೆ ನಾವೂ ಪ್ರತೀಕಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.
ಅಮಿತ್ ಶಾ ಹೇಳಿದ್ದೇನು?: ದೇಶದ ಗಡಿಗಳು, ಸಶಸ್ತ್ರ ಪಡೆಗಳು ಮತ್ತು ನಾಗರಿಕರಿಗೆ ಸವಾಲು ಹಾಕಲು ಧೈರ್ಯ ಮಾಡುವವರಿಗೆ 'ಆಪರೇಷನ್ ಸಿಂಧೂರ್' ಭಾರತದಿಂದ ಸೂಕ್ತ ಉತ್ತರವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗಷ್ಟೇ ನಡೆದ ಭಯೋತ್ಪಾದಕ ದಾಳಿ ಉಲ್ಲೇಖಿಸಿ ಮಾತನಾಡಿದ ಅವರು, ಪ್ರಚೋದನೆಯನ್ನು ನಿರ್ಲಕ್ಷಿಸದೆ ಭಾರತ ಸೂಕ್ತವಾಗಿ ಪ್ರತಿಕ್ರಿಯಿಸಿದೆ. ಆಪರೇಷನ್ ಸಿಂದೂರ್ ಕಾರ್ಯಾಚರಣೆ ಮೂಲಕ ಸೂಕ್ತ ಪ್ರತಿಕ್ರಿಯೆ ನೀಡಲಾಗಿದೆ. ಇದು ಜಗತ್ತಿಗೆ ದೊಡ್ಡ ಸಂದೇಶವನ್ನು ನೀಡಿದೆ ಎಂದು ಹೇಳಿದರು.
ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಪ್ರಾರಂಭಿಸಿದ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯು ಗಡಿಯುದ್ದಕ್ಕೂ ಭಯೋತ್ಪಾದಕ ನೆಲೆಗಳನ್ನ ಗುರಿಯಾಗಿಸಿಕೊಂಡಿತ್ತು. ಗೃಹ ವ್ಯವಹಾರಗಳ ಸಚಿವಾಲಯದ ಪ್ರಕಾರ, ಶಾ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದ ಪಾಕಿಸ್ತಾನ ಮತ್ತು ನೇಪಾಳದ ಗಡಿಯಲ್ಲಿರುವ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಈ ಕಾರ್ಯಾಚರಣೆಗೆ ಪ್ರಧಾನಿ ಮೋದಿ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದ್ದಾರೆ.












Click it and Unblock the Notifications