Independence Day 2023: ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಭಾಷಣದ ವೇಳೆ ಖಾಲಿ ಉಳಿದ ಅದೊಂದು ಕುರ್ಚಿ- ಯಾರದ್ದು ತಿಳಿಯಿರಿ
ನವದೆಹಲಿ, ಆಗಸ್ಟ್ 15: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ದೆಹಲಿಯ ಕೆಂಪುಕೋಟೆಯಲ್ಲಿ ಮಾತನಾಡಿದರು. ಈ ವೇಳೆ, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತ ಮಹಾಪುರುಷರನ್ನು ಅವರು ಸ್ಮರಿಸಿದರು.
ಗಲಭೆಪೀಡಿತ ಮಣಿಪುರದ ಕುರಿತು ಮಾತನಾಡಿದ ಅವರು, 'ಮಣಿಪುರದಲ್ಲಿ ಶಾಂತಿಯ ಮೂಲಕ ಪರಿಹಾರದ ಮಾರ್ಗ ಕಂಡುಕೊಳ್ಳಲಾಗುವುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಪರಿಹಾರಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ' ಎಂದು ಹೇಳಿದರು.

'ಸರಣಿ ಸ್ಫೋಟಗಳ ಯುಗ ಮುಗಿದಿದೆ. ಇಂದು ದೇಶದಲ್ಲಿ ಭಯೋತ್ಪಾದಕ ದಾಳಿಗಳು ಕಡಿಮೆಯಾಗಿವೆ. ನಕ್ಸಲ್ ಪೀಡಿತ ಪ್ರದೇಶಗಳೂ ತೀವ್ರ ಬದಲಾವಣೆ ಕಂಡಿವೆ' ಎಂದು ಮೋದಿ ತಿಳಿಸಿದರು.
ಪ್ರಧಾನಿ ಮೋದಿ ಅವರ ಭಾಷಣದ ವೇಳೆ, ಕೆಂಪುಕೋಟೆಯ ವೇದಿಕೆ ಮೇಲೆ ಕುರ್ಚಿಯೊಂದು ಖಾಲಿ ಇತ್ತು. ಇದು ಮಾಧ್ಯಮಗಳ ಗಮನ ಸೆಳೆಯಿತು.
ಖಾಲಿ ಉಳಿದಿದ್ದ ಕುರ್ಚಿಯ ಮೇಲೆ ವಿರೋಧ ಪಕ್ಷದ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಬರೆಯಲಾಗಿತ್ತು.

ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಮೋದಿ ಅವರ ಭಾಷಣ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ.
ಸ್ವಾತಂತ್ರ್ಯ ದಿನದ ಅಂಗವಾಗಿ ವಿಡಿಯೊವೊಂದನ್ನು ಹಂಚಿಕೊಂಡಿರುವ ಖರ್ಗೆ, ದೇಶದ ಹಿಂದಿನ ಪ್ರಧಾನಿಗಳು ನೀಡಿದ ಕೊಡುಗೆಗಳನ್ನು ಸ್ಮರಿಸಿದ್ದಾರೆ.
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ನೇತಾಜಿ ಸುಭಾಷ್ ಚಂದ್ರ ಬೋಸ್, ಮೌಲಾನಾ ಆಜಾದ್, ರಾಜೇಂದ್ರ ಪ್ರಸಾದ್, ಸರೋಜಿನಿ ನಾಯ್ಡು ಮತ್ತು ಬಿಆರ್ ಅಂಬೇಡ್ಕರ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರಿಗೆ ಖರ್ಗೆ ಅವರು ಗೌರವ ಸಲ್ಲಿಸಿದ್ದಾರೆ.
ಭಾರತದ ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ, ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್ ಮತ್ತು ಮನಮೋಹನ್ ಸಿಂಗ್ ಅವರ ಕೊಡುಗೆಗಳನ್ನು ಅವರು ನೆನೆದಿದ್ದಾರೆ. ಬಿಜೆಪಿ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನೂ ಸಹ ಖರ್ಗೆ ಸ್ಮರಿಸಿದ್ದಾರೆ.

ಇದೇ ವೇಳೆ, ಪ್ರಧಾನಿ ಮೋದಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಖರ್ಗೆ, 'ಪ್ರತಿಯೊಬ್ಬ ಪ್ರಧಾನ ಮಂತ್ರಿಗಳು ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಿದ್ದಾರೆ. ಇಂದು ಕೆಲವರು ಭಾರತವು ಕಳೆದ ಕೆಲವು ವರ್ಷಗಳಲ್ಲಿ ಮಾತ್ರ ಪ್ರಗತಿಯನ್ನು ಕಂಡಿದೆ ಎಂಬುದಾಗಿ ಹೇಳಲು ಪ್ರಯತ್ನಿಸುತ್ತಿದ್ದಾರೆ' ಎಂದು ತಿಳಿಸಿದ್ದಾರೆ.
'ಅಟಲ್ ಬಿಹಾರಿ ವಾಜಪೇಯಿ ಜೊತೆಗೆ, ಎಲ್ಲಾ ಪ್ರಧಾನಿಗಳು ರಾಷ್ಟ್ರದ ಬಗ್ಗೆ ಯೋಚಿಸಿದರು. ಅಭಿವೃದ್ಧಿಗೆ ಹಲವು ಕ್ರಮಗಳನ್ನು ತೆಗೆದುಕೊಂಡರು. ಇಂದು ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಸ್ವಾಯತ್ತ ಸಂಸ್ಥೆಗಳು ಗಂಭೀರ ಅಪಾಯದಲ್ಲಿದೆ ಎಂಬುದಾಗಿ ನಾನು ನೋವಿನಿಂದ ಹೇಳುತ್ತೇನೆ' ಎಂದು ಖರ್ಗೆ ತಿಳಿಸಿದ್ದಾರೆ.
ಧ್ವನಿಯನ್ನು ಹತ್ತಿಕ್ಕಲು ಹೊಸ ಸಾಧನಗಳನ್ನು ಬಳಸಲಾಗುತ್ತಿದೆ. ಸಿಬಿಐ, ಜಾರಿ ನಿರ್ದೇಶನಾಲಯ, ಆದಾಯ ತೆರಿಗೆ ಇಲಾಖೆಗಳು ಮಾತ್ರವಲ್ಲ ಚುನಾವಣಾ ಆಯೋಗವನ್ನೂ ದುರ್ಬಲಗೊಳಿಸಲಾಗುತ್ತಿದೆ. ವಿರೋಧ ಪಕ್ಷದ ಸಂಸದರನ್ನು ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಅಮಾನತುಗೊಳಿಸಲಾಗುತ್ತಿದೆ. ಮೈಕ್‌ಗಳನ್ನು ಮ್ಯೂಟ್ ಮಾಡಲಾಗುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಇಂದಿರಾ ಗಾಂಧಿಯವರ ನೀತಿಗಳು ಭಾರತವನ್ನು ಆತ್ಮ ನಿರ್ಭರ್ (ಸ್ವಾವಲಂಬಿ) ಆಗಲು ಸಹಾಯ ಮಾಡಿತು ಎಂದು ಖರ್ಗೆ ಹೇಳಿದ್ದಾರೆ.
ಹೊಸ ಇತಿಹಾಸವನ್ನು ಸೃಷ್ಟಿಸಲು ಹಿಂದಿನ ಇತಿಹಾಸವನ್ನು ಮಹಾನ್ ನಾಯಕರು ಅಳಿಸುವುದಿಲ್ಲ. ಆದರೆ, ಈಗಿನ ಕೆಲವರು ಎಲ್ಲವನ್ನೂ ಮರು ನಾಮಕರಣ ಮಾಡಲು ಪ್ರಯತ್ನಿಸುತ್ತಾರೆ. ಮೊದಲು 'ಅಚ್ಛೇ ದಿನ್' ಅಂದರು. ನಂತರ ನವ ಭಾರತ ಅಂದರು. ಈಗ ಅಮೃತ್ ಕಾಲ ಎನ್ನುತ್ತಿದ್ದಾರೆ. ತಮ್ಮ ವೈಫಲ್ಯಗಳನ್ನು ಮರೆಮಾಚಲು ಹೆಸರು ಬದಲಾಯಿಸುತ್ತಿಲ್ಲವೇ? ಎಂದು ಖರ್ಗೆ ಪ್ರಶ್ನಿಸಿದ್ದಾರೆ.












Click it and Unblock the Notifications