ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಪಡೆದವರ ಸಂಖ್ಯೆ ಎಷ್ಟಿದೆ?
ನವದೆಹಲಿ, ಜುಲೈ 28: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿಯನ್ನು ನಿಯಂತ್ರಿಸುವಲ್ಲಿ ಲಸಿಕೆ ವಿತರಣೆ ಅಭಿಯಾನ ಮಹತ್ವದ ಪಾತ್ರ ವಹಿಸಿದೆ. ಕೊವಿಡ್-19 ಲಸಿಕೆ ವಿತರಣೆ ಹೆಚ್ಚಿದಂತೆ ಸೋಂಕಿತರು ಮತ್ತು ಸಾವಿನ ಪ್ರಮಾಣದಲ್ಲಿ ಇಳಿಮುಖ ಕಂಡು ಬಂದಿದೆ.
ದೇಶದಲ್ಲಿ ಕೊವಿಡ್-19 ಲಸಿಕೆ ವಿತರಣೆ ಅಭಿಯಾನ ಆರಂಭಿಸಿ 194 ದಿನಗಳೇ ಕಳೆದಿದ್ದು, ಈವರೆಗೂ 45 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಲಸಿಕೆ ವಿತರಿಸಲಾಗಿದೆ. ಬುಧವಾರ ರಾತ್ರಿ 7 ಗಂಟೆ ವೇಳೆಗೆ 39,42,457 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ದೇಶದಲ್ಲಿ ಈವರೆಗೂ 45,02,55,460 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ.
ಭಾರತದಲ್ಲಿ ಕೊರೊನಾವೈರಸ್ ಲಸಿಕೆ ಅಭಿಯಾನ ಎಷ್ಟು ಹಂತಗಳಲ್ಲಿ ನಡೆಯುತ್ತಿದೆ. ಲಸಿಕೆ ವಿತರಣೆಯಲ್ಲಿ ಯಾವ ವರ್ಗಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ಲಸಿಕೆ ಖರೀದಿ ಪ್ರಮಾಣ ಮತ್ತು ಈವರೆಗೂ ಎಷ್ಟು ಲಸಿಕೆ ಪೂರೈಕೆಯಾಗಿದೆ. ಕೇಂದ್ರ ಪೂರೈಸಿದ ಲಸಿಕೆಯಲ್ಲಿ ಎಷ್ಟು ಪ್ರಮಾಣ ಬಳಕೆಯಾಗಿದೆ. ಎಷ್ಟು ಲಸಿಕೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಬಳಿ ಲಭ್ಯವಿದೆ ಎನ್ನುವುದರ ಕುರಿತು ಒಂದು ವಿಸ್ತೃತ ವರದಿ ಇಲ್ಲಿದೆ ಓದಿ.

ಕೊವಿಡ್-19 ಲಸಿಕೆ ವಿತರಣೆಯ ಹಂತಗಳೆಷ್ಟು?
ಭಾರತದಲ್ಲಿ ಕೊರೊನಾವೈರಸ್ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಲಸಿಕೆ ವಿತರಣೆಯನ್ನು ಸಮರೋಪಾದಿಯಲ್ಲಿ ನಡೆಸಲಾಗುತ್ತಿದೆ. ಕಳೆದ ಜನವರಿ 16ರಂದು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮೊದಲ ಶ್ರೇಣಿ ಕಾರ್ಮಿಕರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಮಾರ್ಚ್ 1ರಂದು ಎರಡನೇ ಹಂತದಲ್ಲಿ ಆರೋಗ್ಯ ಸಮಸ್ಯೆ ಹೊಂದಿರುವ 45 ವರ್ಷ ಮೇಲ್ಪಟ್ಟ ಹಾಗೂ 60 ವರ್ಷದ ಮೇಲ್ಪಟ್ಟ ಪ್ರತಿಯೊಬ್ಬರಿಗೆ ಲಸಿಕೆ ವಿತರಣೆ ಆರಂಭಿಸಲಾಯಿತು. ಏಪ್ರಿಲ್ 1ರಂದು ಮೂರನೇ ಹಂತದಲ್ಲಿ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಕೊವಿಡ್-19 ಲಸಿಕೆ ವಿತರಣೆ ಶುರು ಮಾಡಲಾಗಿತ್ತು. ಜೂನ್ 21ರಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಲಸಿಕೆ ವಿತರಣೆಯನ್ನು ಆರಂಭಿಸಲಾಗಿದೆ.

18-44 ವಯೋಮಾನದವರಿಗೆ ಲಸಿಕೆ ನೀಡಲು ಆದ್ಯತೆ
ಕೊರೊನಾವೈರಸ್ ಎರಡನೇ ಅಲೆಯಲ್ಲಿ ಅತಿಹೆಚ್ಚು ಸೋಂಕು ತಗುಲಿರುವುದು ಹಾಗೂ ಸಾವಿನ ಸಂಖ್ಯೆಯಲ್ಲಿ ಅತಿಹೆಚ್ಚು ಮಧ್ಯವಯಸ್ಕರ ಸಂಖ್ಯೆಯೇ ಹೆಚ್ಚಾಗಿದೆ. ಈ ಹಿನ್ನೆಲೆ 18 ರಿಂದ 44 ವರ್ಷದ ವಯೋಮಾನದವರಿಗೆ ಲಸಿಕೆ ನೀಡುವುದಕ್ಕೆ ಒತ್ತು ನೀಡಲಾಗುತ್ತಿದೆ. ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಬುಧವಾರ ಒಂದೇ ದಿನ 18 ರಿಂದ 44 ವಯೋಮಾನದ 20,54,874 ಜನರಿಗೆ ಮೊದಲ ಡೋಸ್ ಹಾಗೂ 3,00,099 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ದೇಶದಲ್ಲಿ ಇದೇ ವಯೋಮಾನದ 14,66,22,393 ಫಲಾನುಭವಿಗಳಿಗೆ ಮೊದಲ ಡೋಸ್ ಹಾಗೂ 71,92,485 ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ.

ಅತಿಹೆಚ್ಚು ಲಸಿಕೆ ವಿತರಿಸಿದ ರಾಜ್ಯಗಳ ಬಗ್ಗೆ ತಿಳಿಯೋಣ
ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ 18-44 ವಯೋಮಾನದ 1 ಕೋಟಿಗೂ ಅಧಿಕ ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆಯನ್ನು ವಿತರಿಸಲಾಗಿದೆ. ಇದರ ಹೊರತಾಗಿ ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್ ಗಢ, ದೆಹಲಿ, ಹರಿಯಾಣ, ಜಾರ್ಖಂಡ್, ಕೇರಳ, ತೆಲಂಗಾಣ, ಹಿಮಾಚಲ ಪ್ರದೇಶ, ಒಡಿಶಾ, ಪಂಜಾಬ್, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿ 18-44 ವಯೋಮಾನದ 10 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಮಾಹಿತಿ ನೀಡಿದೆ.

ಭಾರತದಲ್ಲಿ ಕೊರೊನಾವೈರಸ್ ಲಸಿಕೆಯ ಲಭ್ಯತೆ
ಕೇಂದ್ರ ಸರ್ಕಾರದಿಂದ ಈವರೆಗೂ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಷ್ಟು ಡೋಸ್ ಲಸಿಕೆ ಪೂರೈಕೆ ಆಗಿದೆ. ಎಷ್ಟು ಡೋಸ್ ಕೊವಿಡ್-19 ಲಸಿಕೆ ಬಾಕಿ ಉಳಿದಿದೆ. ಎಷ್ಟು ಡೋಸ್ ಲಸಿಕೆ ವ್ಯರ್ಥವಾಗಿದೆ. ದೇಶದಲ್ಲಿ ಅನುಮೋದನೆ ಪಡೆದಿರುವ ಲಸಿಕೆಗಳು ಯಾವುವು ಎಂಬುದರ ಕುರಿತು ಮುಂದೆ ಓದಿ.
2021ರ ಜುಲೈ 27ರ ಅಂಕಿ-ಅಂಶಗಳ ಪ್ರಕಾರ, ದೇಶದಲ್ಲಿ 46,23,27,530 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 46,23,27,530
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 1,20,70,820
* ಬಳಕೆ ಆಗಿರುವ ಲಸಿಕೆ ಪ್ರಮಾಣ - 44,29,95,780
* ಕೊವಿಡ್-19 ಲಸಿಕೆಯ ಲಭ್ಯತೆ - 2,18,10,422












Click it and Unblock the Notifications