• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿಮಗೆ ತಂದೆ-ತಾಯಿ ಎರಡೂ ಆಗಬಲ್ಲವನೇ ಗುರು

By ಮಲೆನಾಡಿಗ
|

ದೇಶಕ್ಕೆ ಉತ್ತಮ ನಾಗರಿಕರನ್ನು ರೂಪಿಸಿಕೊಡುವಲ್ಲಿ ಗುರುವಿನ ಪಾತ್ರ ಮಹತ್ವ ಅನನ್ಯವಾಗಿದೆ. ನಮ್ಮಲ್ಲಿರುವ ಅಜ್ಞಾನದಿಂದ ಹೊರಗೆ ಹಾಕಲು ಶಿಕ್ಷಕರು ಮಾರ್ಗದರ್ಶಿಯಾಗುತ್ತಾರೆ. ಗುರು ಎಂಬ ಶಬ್ದದ ಅರ್ಥವೂ ಇದನ್ನೇ ಹೇಳುತ್ತದೆ. ಅಂಧಃಕಾರವನ್ನು ದೂರಾಗಿಸುವವನು ಎಂದು. ಪ್ರತಿಯೊಬ್ಬರ ಜೀವನದ ಏಳು-ಬೀಳಿಗೆ ಗುರು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಕಾರಣನಾಗುತ್ತಾನೆ. ಏಕೆಂದರೆ ಒಬ್ಬ ಶಿಕ್ಷಕನು ನಮ್ಮಲ್ಲಿರುವ ಪ್ರಜ್ಞೆಯನ್ನು ಜಾಗೃತಗೊಳಿಸುವ ಶಕ್ತಿಯಾಗಿರುತ್ತಾನೆ. ಶಿಕ್ಷಕರ ದಿನಾಚರಣೆ ನಿಮಿತ್ತ 'ನಮ್ಮ ಬದುಕಿನಲ್ಲಿ ಶಿಕ್ಷಕರ ಮಹತ್ವ' ಎಂಬ ವಿಷಯದ ಮೇಲೆ ಈ ಲೇಖನ ಕೇಂದ್ರಿಕೃತವಾಗಿದೆ

'ವಿದ್ಯೆಯಂ ಕಲಿಸಿದಾತಂ ಗುರು' ಎನ್ನುವಾಗ ಜ್ಞಾನ ಬೋಧನೆ ಯಾರಿಂದಾದರೂ ಅದನ್ನು ಸ್ವೀಕರಿಸುವ ಮನೋಭಾವ ಎಲ್ಲರಲ್ಲೂ ಇದ್ದರೆ ಒಳಿತು. ಶಂಕರಾಚಾರ್ಯರಿಗೆ ಒಮ್ಮೆ ಚಂಡಾಲನೋರ್ವನಿಂದ ಉಪದೇಶವಾಯಿತಂತೆ (ಚಂಡಾಲ ರೂಪದಲ್ಲಿ ಶಿವನೇ ಬಂದಿದ್ದ ಎಂಬ ಮಾತು ಹಾಗಿರಲಿ) ಚಂಡಾಲನು ಮಾತುಗಳನ್ನು ನಾನೇಕೆ ಕೇಳಬೇಕು ಎಂದು ಶಂಕರರು ನಿರ್ಧರಿಸಬಹುದಾಗಿತ್ತು.[ಪ್ರಧಾನಿ ನರೇಂದ್ರ ಮೋದಿ ಭಾಷಣ]

ಆದರೆ ಚಂಡಾಲನ ಮಾತುಗಳನ್ನು ಆಲಿಸುವ ವ್ಯವಧಾನ ಹಾಗೂ ಪರರ ಬಗ್ಗೆ ಗೌರವ ನೀಡುವ ಸಂಸ್ಕಾರವಿತ್ತು ಅವರಲ್ಲಿ. ಹೌದು, ಇಂದು ನಮ್ಮಲ್ಲಿ ಕಮ್ಮಿಯಾಗಿರುವುದು ಇದೇ. ಗುರುಗಳ ಮಾತನ್ನು ಆಲಿಸದ ವಿದ್ಯಾರ್ಥಿವೃಂದ. ತಾನು ಹೇಳಿದ್ದೇ ಸರಿಯೆಂಬ ಗರ್ವದಿ ಮೆರೆವ ಕೆಲ ಶಿಕ್ಷಕರು. ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವೆ ಪರಸ್ಪರ ಗೌರವ ಕಡಿಮೆಯಾಗಿದೆ ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲವೆನ್ನಿಸುತ್ತದೆ. [ಪಾಠ ಹೇಳಿದವರು ನಂತರ ರಾಜಕಾರಣಕ್ಕೆ ಬಂದರು ]

ಶಿಷ್ಯಂದಿರು ಗುರು ಹೇಳಿಕೊಟ್ಟದ್ದನ್ನು ಸರಿಯಾಗಿ ಆಲಿಸಿ, ನಂತರ ಅದನ್ನು ಮನನ ಮಾಡಿ ಅದರ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಯೋಗ್ಯವಾದ ಗುರುವನ್ನು ಆರಿಸುವ ಹಕ್ಕು ಶಿಷ್ಯನಿಗೆ ಇರುತ್ತದೆಯಾದರೂ ಗುರುಗಳಲ್ಲಿ ಶ್ರೇಷ್ಠ, ಕನಿಷ್ಠ ಎಂಬ ಭೇದ ಸಲ್ಲದು. ಬೇಕಾದ ಗುರುವನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಶಿಷ್ಯನಿಗಿರುತ್ತದೆ. ಶಿಷ್ಯ ಗುರುವನ್ನು ಬದಲಿಸಬಹುದು ಆದರೆ, ಗುರು ತನ್ನ ನೆಚ್ಚಿನ ಶಿಷ್ಯನನ್ನು ಬದಲಿಸುವ ಆಯ್ಕೆಯೇ ಇಲ್ಲ.

ಗುರುಗಳ ಮಹತ್ವ ಕಡಿಮೆಯಾಗುತ್ತಿದೆಯೆ?

ಗುರುಗಳ ಮಹತ್ವ ಕಡಿಮೆಯಾಗುತ್ತಿದೆಯೆ?

ಇಂದಿನ ವೇಗದ ಯುಗದ ವ್ಯವಸ್ಥೆಯಿಂದ ಗುರುಗಳ ಮಹತ್ವ ಕಡಿಮೆಯಾಗಿದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ಶಿಕ್ಷಕರನ್ನೇ ನೋಡದೆ ಆನ್‌ಲೈನ್ ಶಿಕ್ಷಣ, ವರ್ಚ್ಯುಯಲ್ ಶಿಕ್ಷಣ ವ್ಯವಸ್ಥೆ ಪ್ರಚಲಿತವಾಗುತ್ತಿದೆ. ಎಲ್ಲಾ ಕ್ಷೇತ್ರದಲ್ಲೂ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ.

ವಿದ್ಯಾರ್ಥಿಗಳು ತಮ್ಮ ಹೊಸ ಸಂಶೋಧನೆಗಳನ್ನು ರಚನಾತ್ಮಕ ಕೆಲಸಗಳಿಗೆ ಉಪಯೋಗಿಸದೇ ವಿಧ್ವಂಸಕ ಕೃತ್ಯಗಳಿಗೆ ಪ್ರಯೋಗಿಸುತ್ತಿರುವುದು ಆತಂಕಕಾರಿ ವಿಷಯ.

ಉಗ್ರರು, ನಕ್ಸಲೀಯರ ಹಿಂದೆ ಪ್ರಜ್ಞಾವಂತರಾದ ಎಷ್ಟೊ ವಿದ್ಯಾರ್ಥಿಗಳು ಇದ್ದಾರೆಂಬುದು ವಿಷಾದದ ಸಂಗತಿ. ಈ ರೀತಿಯ ದಾರಿ ತಪ್ಪಿದ ಮಕ್ಕಳಿಗೆ ಯೋಗ್ಯ ಗುರುವಿನಿಂದ ಸರಿಯಾದ ಮಾರ್ಗದರ್ಶನ ದೊರೆಯದೆ ಇರುವುದೇ ಕಾರಣವೆನಿಸುತ್ತದೆ.

ಶಾಲೆಗಳ ಗುಣಮಟ್ಟ ಸುಧಾರಣೆಯಾಗಬೇಕಿದೆ

ಶಾಲೆಗಳ ಗುಣಮಟ್ಟ ಸುಧಾರಣೆಯಾಗಬೇಕಿದೆ

ಇನ್ನೊಂದೆಡೆ ಶಿಕ್ಷಕರ ಕೊರತೆಯಿಂದ ಕೂಡಿದ ಗ್ರಾಮೀಣ ಶಾಲೆಗಳು, ಮೂಲಭೂತ ಸೌಲಭ್ಯವನ್ನು ಕಾಣದ ಅನೇಕ ಶಾಲೆಗಳು ಇವೆ. ಆದರೆ ಎಲ್ಲೂ ಶಿಕ್ಷಕರು ಅಧಿಕ ಸಂಖ್ಯೆಯಿಂದ ಕೂಡಿದ ಶಾಲೆಗಳನ್ನು ಕಾಣೆ. ಆದರೆ, ಈಗ ಶಾಲೆಗಳ ಉದ್ಧಾರಕ್ಕಾಗಿ ಅನೇಕ ಸರ್ಕಾರೇತರ ಸಂಸ್ಥೆಗಳು ಟೊಂಕ ಕಟ್ಟಿ ನಿಂತಿವೆ.

ಐಟಿ ಕಂಪನಿಗಳು ನೋಟ್ ಬುಕ್ ವಿತರಣೆ, ಅಗತ್ಯ ವಸ್ತುಗಳ ಕಿಟ್ ವಿತರಣೆ ಕಾರ್ಯಕ್ರಮ ನಡೆಸುತ್ತಲೇ ಬಂದಿವೆ. ಆದರೆ, ಸರ್ಕಾರ ಇಂಥ ಎನ್ ಜಿಒಗಳಿಗೆ ಸೂಕ್ತ ಪ್ರೋತ್ಸಾಹ ನೀಡಬೇಕಷ್ಟೆ. ಯೋಜನೆಗಳ ಘೋಷಣೆ, ಅನುಷ್ಠಾನ ಅದಕ್ಕೆ ಅನುದಾನ ಎಂದು ಕುಳಿತರೆ ಇಂದಿನ ಶಾಲಾ ಮಕ್ಕಳು ನಾಳೆಗೆ ಕಾಲೇಜು ಮೆಟ್ಟಿಲೇರಿರುತ್ತಾರೆ. ವಿದ್ಯಾರ್ಥಿ ವೇತನದ ಜೊತೆಗೆ ವಿದ್ಯಾರ್ಥಿ/ನಿಯರ ರಕ್ಷಣೆಯ ಹೊಣೆಯೂ ಸರ್ಕಾರದ ಮೇಲಿದೆ.

ಎಂದಾದರೂ ಗುರುದಕ್ಷಿಣೆ ನೀಡಿದ್ದೀರಾ?:

ಎಂದಾದರೂ ಗುರುದಕ್ಷಿಣೆ ನೀಡಿದ್ದೀರಾ?:

ಹಿಂದೆಲ್ಲಾ ಗುರುವಿಗೆ ಗೌರವಪೂರ್ವಕವಾಗಿ ಗುರುದಕ್ಷಿಣೆ ಸಲ್ಲುತ್ತಿತ್ತು. ಕಾಣದ ಗುರುವು ತನ್ನೆಡೆಗೆ ಬಂದು ಗುರುದಕ್ಷಿಣೆ ಕೇಳಿದಾಗ ಕೈಬೆರಳನಿತ್ತ ಏಕಲವ್ಯನ ಕತೆ ಜನಜನಿತ. ಗುರುಗಳಲ್ಲಿ ಹೇಗೆ ಅರ್ಪಣಾ ಮನೋಭಾವ ಅಗತ್ಯವೋ ಹಾಗೆ ಶಿಷ್ಯರಲ್ಲಿ ಗುರುವನ್ನು ಸತ್ಕರಿಸುವ ಮನಸ್ಸಿರಬೇಕು.

ಸತ್ಕಾರವೆಂದರೆ ದ್ರವ್ಯರೂಪದಲ್ಲಿ ಸಂತೋಷಪಡಿಸುವುದಷ್ಟೇ ಅಲ್ಲ. ವರ್ಷಕ್ಕೊಂದು ದಿನವಾದರೂ (ಗುರುವಿನ ಹುಟ್ಟುಹಬ್ಬದ ದಿನವಾದರೆ ಇನ್ನು ಚೆನ್ನ) ಗುರುವಿಗೆ ನಮ್ಮ ನಮನ ಸಲ್ಲಿಸುವ ಕಾಯಕವನ್ನು ಇಟ್ಟುಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಅಲ್ಲವೇ. ಸಾವಿರಾರು ಶಿಷ್ಯರಿದ್ದರೂ ಗುರು ಮಾತ್ರ ಒಬ್ಬನೇ.

ಅಬ್ದುಲ್ ಕಲಾಮ್ ಎಂದಿಗೂ ಮಾದರಿ

ಅಬ್ದುಲ್ ಕಲಾಮ್ ಎಂದಿಗೂ ಮಾದರಿ

ಶಿಷ್ಯರ ಏಳಿಗೆಯನ್ನು ಸದಾ ಬಯಸುವ ಗುರುಗಳನ್ನು ಒಮ್ಮೆಯೂ ನೆನಪಿಸಿಕೊಳ್ಳದವನು ಮನುಷ್ಯನೇ ಅಲ್ಲಾ ಬಿಡಿ. ಭಾರತದಲ್ಲಿ ಗುರುವನ್ನು ನೆನಪಿಕೊಳ್ಳುವಂತೆ ಮಾಡಿದ ಕೀರ್ತಿ ರಾಷ್ಟ್ರಾಧ್ಯಕ್ಷರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣರಿಗೆ ಸಲ್ಲುತ್ತದೆ. ಉದಾರ ಮನೋಭಾವನೆಯಿಂದ ತಾವು ಹುಟ್ಟಿದ ದಿನವನ್ನು (ಸೆಪ್ಟೆಂಬರ್ 5) ಶಿಕ್ಷಕರ ದಿನವೆಂದು ಆಚರಿಸಲು ತಮ್ಮ ಶಿಷ್ಯ ವೃಂದಕ್ಕೆ ಕರೆಯನ್ನಿತ್ತರು.

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಮ್ ರವರು ಕೂಡ ತಮ್ಮ ಗುರುವಾದ ಶಿವಶಂಕರ್ ಅಯ್ಯರ್ ಅವರನ್ನು ನೆನಪಿಕೊಳ್ಳದ ವೇದಿಕೆ ಇಲ್ಲವೆನ್ನಬಹುದು. ತಾವು ಹೋದೆಡೆಯೆಲ್ಲ ಮಕ್ಕಳಿಗೆ ವಿದ್ಯೆಯ ಮಹತ್ವ, ಗುರುವಿನ ಅಗತ್ಯತೆಯ ಬಗ್ಗೆ ತಿಳಿಹೇಳುತ್ತಿರುತ್ತಾರೆ. ಶಾಲಾಕಾಲೇಜಿನ ದಿನಗಳು ಮುಗಿದ ಮೇಲೆ ವಿದ್ಯಾರ್ಥಿ/ನಿಯರು ಶಿಕ್ಷಕರನ್ನು ಮರೆಯುವುದು ಸಹಜ.

ಗುರು ಶಿಷ್ಯರ ಪರಂಪರೆ ಉಳಿಸಿ ಬೆಳಸಿ

ಗುರು ಶಿಷ್ಯರ ಪರಂಪರೆ ಉಳಿಸಿ ಬೆಳಸಿ

ಭಾರತದಲ್ಲಿ ಗುರು ಶಿಷ್ಯರ ಪರಂಪರೆಯ ದೊಡ್ಡ ಪಟ್ಟಿಯೇ ಇದೆ. ಯಮಧರ್ಮ-ನಚೀಕೇತ, ದ್ರೋಣಾಚಾರ್ಯ- ಆರ್ಜುನ, ಕೃಷ್ಣ-ಅರ್ಜುನ, ಚಾಣಕ್ಯ- ಚಂದ್ರಗುಪ್ತ, ರಾಮಕೃಷ್ಣ ಪರಮಹಂಸ-ಸ್ವಾಮಿ ವಿವೇಕಾನಂದ, ಗೋಪಾಲಕೃಷ್ಣಗೋಖಲೆ-ಮಹಾತ್ಮ ಗಾಂಧಿ, ಟಿ.ಎಸ್. ವೆಂಕಣ್ಣಯ್ಯ-ಕುವೆಂಪು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.

'ತಾಯಿಯೇ ಮೊದಲ ಗುರು' ಎನ್ನುತ್ತಾರೆ. ಇದು ನಿಜ ಕೂಡ. ಮಗುವಿಗೆ ಮೊದಲು ಕೇಳಿಸುವುದು ತನ್ನಮ್ಮನ ಮಾತುಗಳೇ. ತಾಯಿಯಾದವಳು ಮಕ್ಕಳನ್ನು ಸನ್ಮಾರ್ಗದಲ್ಲಿ ಬೆಳೆಸಿದರೆ ಗುರುವಿನ ಕೆಲಸಕ್ಕೆ ಸಹಕಾರಿಯಾಗುತ್ತದೆ. ತಾಯಿಯ ಮಮತೆಯನ್ನು, ತಂದೆಯಂತೆ ಜವಾಬ್ದಾರಿಯಿಂದ ಪೋಷಣೆ ಮಾಡಬಲ್ಲವನೇ ನಿಜವಾದ ಗುರು.

ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ

ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ

ಇಂದು ಮಾಧ್ಯಮಗಳಲ್ಲಿ ಶಿಕ್ಷಕರ ಮಹತ್ವವನ್ನು ತೋರಿಸುವ ಕಾರ್ಯಕ್ರಮಗಳು ಕಾಣೆಯಾಗಿವೆ. ಜೊತೆಗೆ ಚಲನಚಿತ್ರಗಳಲ್ಲಿ ಶಿಕ್ಷಕರನ್ನು ಸರ್ಕಸ್‌ನ ಬಫೂನ್‌ಗಳಂತೆ ಚಿತ್ರಿಸುತ್ತಿರುವುದು ವಿಷಾದನೀಯ ಸಂಗತಿ. ಗುರು ಶಿಷ್ಯರ ನಡುವಿನ ಅಂತರವನ್ನು ಹೆಚ್ಚಿಸುವಲ್ಲಿ ಇಂತಹ ಕೆಟ್ಟ ಅಭಿರುಚಿಯ ಚಿತ್ರಗಳು ಪ್ರಮುಖ ಪಾತ್ರವಹಿಸುತ್ತವೆಂದರೆ ತಪ್ಪಾಗಲಾರದು.

ಗುರುವಾದವನು ತನ್ನ ಶಿಷ್ಯನಿಗೆ ತಂದೆ-ತಾಯಿ ಎರಡೂ ಆಗಬಲ್ಲ. ಒಳ್ಳೆಯ ಮಾರ್ಗದಲ್ಲಿ ನಡೆಯುವವರು, ನಡೆದವರು, ನಡೆಯಬಯಸುವವರು ಇನ್ನಾದರೂ ತಮ್ಮ ಮಾರ್ಗದರ್ಶಕರನ್ನು ಮರೆಯದೇ ನೆನಪಿಸಿಕೊಳ್ಳುವುದು ಅಗತ್ಯ.

'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮನ್ನು ಪೋಷಿಸಿದವರನ್ನು ಒಮ್ಮೆ ಹಿಂತಿರುಗಿ ನೋಡಿದಾಗಲೇ ತೃಪ್ತಿ ದೊರೆಯುವುದು.' ನೀವು ನಿಮ್ಮ ಕಾಲೇಜಿನ ಅಥವಾ ಶಾಲೆಯ ಅದರಲ್ಲೂ ಪ್ರಾಥಮಿಕ ಶಾಲೆಯ ಗುರುಗಳನ್ನು ಭೇಟಿ ಮಾಡಿ ಮಾತನಾಡಿಸಿ. ಅವರಿಗೆ ನಿಮ್ಮ ನೋಡಿದಾಗ ಆಗುವ ಸಂತೋಷದ ಪರಿಯನ್ನು ನೋಡಿ ವಿಸ್ಮಿತರಾಗಿರಿ.... ಪ್ರಯತ್ನಿಸಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Who is the ideal teacher? how is today's education system? What are the Significance of Teachers in our life? an article by Malenadiga.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more