IMD Weather Forecast: ಈ ಭಾಗಗಳಲ್ಲಿ ಮುಂದಿನ ಮೂರು ದಿನ ವಿಪರೀತ ಚಳಿ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಚಳಿ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲಿದೆ. ಹಾಗೆಯೇ ಮುಂದಿನ ಮೂರು ದಿನಗಳವರೆಗೆ ಈ ಭಾಗಗಳಲ್ಲಿ ಶೀತಗಾಳಿ ಪ್ರಮಾಣ ಗಮನಾರ್ಹವಾಗಿ ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಈಗಾಗಲೇ ದೇಶದ ಹಲವೆಡೆ ರಣಭೀಕರ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿಸಿವೆ. ಇದೀಗ ಬಹುತೇಕ ಭಾಗಗಳಲ್ಲಿ ಚಳಿ ಆವರಿಸಿದ್ದು, ಜನರು ಮನೆಯಿಂದ ಹೊರಗಡೆ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಉತ್ತರ ಭಾರತದ ರಾಜ್ಯಗಳಲ್ಲಿ ದಟ್ಟ ಮಂಜಿನ ಜೊತೆ ಭೀಕರ ಚಳಿ ಮುಂದುವರೆದಿದ್ದು, ಈ ಭಾಗದ ಹಲವೆಡೆ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಡಿಸೆಂಬರ್ ಆರಂಭದಿಂದಲೂ ಉತ್ತರ ಭಾರತದಾದ್ಯಂತ ತಾಪಮಾನದಲ್ಲಿ ಗಮನಾರ್ಹವಾಗಿ ಇಳಿಕೆಯಾಗಿದ್ದು, ತೀವ್ರ ಶೀತಗಾಳಿ ಬೀಸುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗದ ಹಲವಾರು ರಾಜ್ಯಗಳಿಗೆ ಭಾರೀ ಶೀತಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ದೆಹಲಿ, ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ರಾಜಸ್ಥಾನ ಸೇರಿದಂತೆ ಸುಮಾರು 15 ರಾಜ್ಯಗಳಲ್ಲಿ ಮುಂದಿನ ಮೂರ್ನಾಲ್ಕು ದಿನ ದಟ್ಟ ಮಂಜಿನ ಜೊತೆ ತೀವ್ರ ಶೀತಗಾಳಿ ಇರಲಿದೆ ಎಂದು ಮುನ್ಸೂಚನೆ ನೀಡಿದೆ. ಇಂದು (ಡಿಸೆಂಬರ್ 12) ಈ ಭಾಗಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನ ಭಾಗದಲ್ಲಿ ತಾಪಮಾನ ಗಮರ್ನಾವಾಗಿ ಕುಸಿತ ಕಂಡಿದ್ದು, ತೀವ್ರ ಚಳಿಯಿಂದ ಈ ಭಾಗಗಳಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಹಿಮಾಚಲ ಪ್ರದೇಶದಲ್ಲೂ ಕನಿಷ್ಠ ತಾಪಮಾನವು ಕುಸಿಯುತ್ತಿದ್ದು, ಇಲ್ಲಿನ ಹಲವಾರು ಸ್ಥಳಗಳಲ್ಲಿ ಶೀತಗಾಳಿ ಪ್ರಮಾಣ ಹೆಚ್ಚಾಗುತ್ತಲಿದೆ. ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಗುರುವಾರ ಬೆಳಗ್ಗೆ ಕಾಶ್ಮೀರದ ಹಲವು ಭಾಗಗಳಲ್ಲಿ ಮಂಜು ಆವರಿಸಿತ್ತು. ಜೋಜಿ ಲಾ ಪಾಸ್‌ನಲ್ಲಿ ಕನಿಷ್ಠ ತಾಪಮಾನ ದಾಖಲಾಗಿದ್ದು, ಅಲ್ಲಿ -18 ಡಿಗ್ರಿ ಸೆಲ್ಸಿಯಸ್ ಇತ್ತು. ಜಮ್ಮುವಿನಲ್ಲಿ ಕನಿಷ್ಠ ತಾಪಮಾನ 8.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ ಬಗ್ಗೆ ವರದಿಯಾಗಿದೆ. ದಟ್ಟ ಮಂಜು ಕವಿದ ಹಿನ್ನೆಲೆ ಕಾಶ್ಮೀರ ಮತ್ತು ಲಡಾಖ್‌ನ ಹಲವು ಭಾಗಗಳಲ್ಲಿ ಮರಗಳು ಹಿಮದಿಂದ ಆವೃತವಾಗಿವೆ. ಹಿಮಾಚಲ ಪ್ರದೇಶದಲ್ಲಿ, ಕಳೆದ 24 ಗಂಟೆಗಳಲ್ಲಿ ಸರಾಸರಿ ಕನಿಷ್ಠ ತಾಪಮಾನದಲ್ಲಿ ಗಮಹರ್ನಾವಾಗಿ ಕಡಿಮೆ ಆಗಿರುವ ಬಗ್ಗೆ ವರದಿಯಾಗಿದೆ.
ಪಂಜಾಬ್‌ನ ಫರೀದ್‌ಕೋಟ್‌ನಲ್ಲಿ ಕನಿಷ್ಠ ತಾಪಮಾನ 4.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಚಂಡೀಗಢದಲ್ಲಿ 6.9 ಡಿಗ್ರಿ ಸೆಲ್ಸಿಯಸ್, ಹರಿಯಾಣದ ಅಂಬಾಲಾದಲ್ಲಿ 8.7 ಡಿಗ್ರಿ ಸೆಲ್ಸಿಯಸ್ ಮತ್ತು ಹಿಸಾರ್‌ನಲ್ಲಿ 6.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಜಸ್ಥಾನದ ಸಿಕಾರ್ ಜಿಲ್ಲೆಯ ಫತೇಪುರದಲ್ಲಿ 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಅತಿ ಹೆಚ್ಚು ಶೀತ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ.
ಒಡಿಶಾದ ಕೆಲವು ಭಾಗಗಳಲ್ಲಿ ಭಾರೀ ಚಳಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ರಾಜ್ಯದ 30 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಗಿದೆ. ಮುಂದಿನ ದಿನಗಳಲ್ಲಿ ತಾಪಮಾನ ಮತ್ತಷ್ಟು ಕುಸಿತ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿಯಲ್ಲೂ ಕೂಡ ಬೆಳಗ್ಗೆ ಹಾಗೂ ಸಂಜೆ ವೇಳೆ ದಟ್ಟ ಮಂಜಿನ ಜೊತೆ ಭೀಕರ ಚಳಿ ಮುಂದುವರೆದಿದೆ. ಪರಿಣಾಮ ವಾಹನ ಸವಾರರಿಗೆ ಅಡೆತಡೆಯಾಗುತ್ತಿದೆ. ಮತ್ತೊಂದೆಡೆ ಗಾಳಿ ಗುಣಮಟ್ಟ ದಿನದಿಂದ ದಿನಕ್ಕೆ ಹದಗೆಡುತ್ತಲಿದ್ದು, ಜನರು ಕಂಗಾಲಾಗಿದ್ದಾರೆ. ಮುಂದಿನ ಹಲವು ದಿನಗಳವರೆಗೆ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಅಂತಲೂ ಎಚ್ಚರಿಕೆ ನೀಡಿದೆ.












Click it and Unblock the Notifications