IMD Weather Forecast: ಈ ಭಾಗಗಳಲ್ಲಿ ಜೂನ್ 14ರಿಂದ ಒಂದು ವಾರ ಭಾರೀ ಮಳೆ ಸುರಿಯುವ ಮುನ್ಸೂಚನೆ
IMD Weather Forecast: ದೇಶದ ಹಲವು ರಾಜ್ಯಗಳಲ್ಲಿ ರಣಭೀಕರ ಮಳೆ ಮುಂದುವರೆದಿದೆ. ಹಾಗೆಯೇ ಮುಂದಿನ ಎರಡು ನಾಲ್ಕು ದಿನಗಳವರೆಗೆ ಈ ಭಾಗಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜೂನ್ 14ರ ಶನಿವಾರ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮತ್ತು ಗುಜರಾತ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಗುಡುಗು, ಮಿಂಚು ಸಹಿ ಬಿರುಗಾಳಿ ಮಳೆಯಾಗುವ ಸಾಧ್ಯತೆ ಇದೆ. ಮತ್ತೊಂದೆಡೆ ಪಶ್ಚಿಮ ರಾಜಸ್ಥಾನ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ತಾಪಮಾನದಲ್ಲಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ದಕ್ಷಿಣ ಭಾರತದಲ್ಲಿ ಎಲ್ಲೆಲ್ಲಿ ಎಷ್ಟು ದಿನ ಮಳೆ?: ಮುಂದಿನ 7 ದಿನಗಳವರೆಗೆ ಕೇರಳ, ಮಾಹೆ, ಕರ್ನಾಟಕ ಮತ್ತು ಲಕ್ಷದ್ವೀಪದಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ. ಜೂನ್ 17ರ ವರೆಗೆ ಕರಾವಳಿ ಆಂಧ್ರಪ್ರದೇಶ, ಯಾಣಂ, ರಾಯಲಸೀಮಾ, ತೆಲಂಗಾಣ ಮತ್ತು ಕರ್ನಾಟಕದಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ಜೊತೆಗೆ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ತಮಿಳುನಾಡಿನ ಪುದುಚೇರಿ, ಕಾರೈಕಲ್‌ನಲ್ಲೂ ಇದೇ ರೀತಿಯ ವಾತಾವರಣ ಇರಲಿದೆ ಎಂದು ಮುನ್ಸೂಚನೆ ನೀಡಿದೆ.
ಪಶ್ಚಿಮ ಭಾರತದಲ್ಲಿ ಎಲ್ಲೆಲ್ಲಿ ಎಷ್ಟು ದಿನ ಮಳೆ?: ಜೂನ್ 14 ರಿಂದ 18ರ ವರೆಗೆ ಮಧ್ಯ ಮಹಾರಾಷ್ಟ್ರ, ಮರಾಠವಾಡ, ಕೊಂಕಣ ಮತ್ತು ಗೋವಾದ ಪ್ರತ್ಯೇಕ ಸ್ಥಳಗಳಲ್ಲಿ, ಜೂನ್ 14 ಮತ್ತು 15 ರಂದು ಗುಜರಾತ್‌ನಲ್ಲಿ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಒಂದು ವಾರ ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಜೂನ್ 14 ರಿಂದ 16ರ ವರೆಗೆ ಬಿಹಾರ, ಜಾರ್ಖಂಡ್, ಒಡಿಶಾ, ವಿದರ್ಭ, ಛತ್ತೀಸ್‌ಗಢ, ಮಧ್ಯಪ್ರದೇಶ, ಸಿಕ್ಕಿಂನಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗಲಿದ್ದು, ಜೊತೆಗೆ ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ವಾಯುವ್ಯ ಭಾರತದ ಹವಾಮಾನ: ಜೂನ್ 18ರ ವರೆಗೆ ಉತ್ತರಾಖಂಡದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಜೂನ್ 15 ರಿಂದ 18 ರವರೆಗೆ ಹಿಮಾಚಲ ಪ್ರದೇಶ, ಜೂನ್ 17ರ ವರೆಗೆ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಅಲ್ಲಲ್ಲಿ ಪ್ರತ್ಯೇಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಈಶಾನ್ಯ ಭಾರತದ ಹವಾಮಾನ: ಮುಂದಿನ ಏಳು ದಿನಗಳ ಕಾಲ ಈಶಾನ್ಯ ಭಾರತದಾದ್ಯಂತ ಗುಡುಗು, ಮಿಂಚು ಸಹಿತ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಜೂನ್ 14ರಿಂದ 18ರ ವರೆಗೆ ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.
ತಾಪಮಾನದ ವಿವರ: ಮುಂದಿನ ಎರಡು ದಿನಗಳ ಕಾಲ ವಾಯುವ್ಯ ಮತ್ತು ಮಧ್ಯ ಭಾರತದಲ್ಲಿ ಗರಿಷ್ಠ ತಾಪಮಾನದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬಳಿಕ ಕ್ರಮೇಣ 2-4°C ಇಳಿಕೆಯಾಗುವ ಸಾಧ್ಯತೆಯಿದೆ. ಪೂರ್ವ ಭಾರತದಲ್ಲಿ, ತಾಪಮಾನವು 24 ಗಂಟೆಗಳ ಕಾಲ ಸ್ಥಿರವಾಗಿರಲಿದ್ದು, ನಂತರ ಮುಂದಿನ ಮೂರು ದಿನಗಳಲ್ಲಿ 2-3°Cನಷ್ಟು ಇಳಿಕೆಯಾಗುವ ಸಾಧ್ಯತೆಯಿದೆ. ಉಳಿದಂತೆ ದೇಶದ ಬೇರೆಡೆ ಯಾವುದೇ ಭಾಗಗಳಲ್ಲಿ ತಾಪಮಾನದಲ್ಲಿ ಗಮನಾರ್ಹ ಬದಲಾವಣೆಯಾಗುವುದಿಲ್ಲ ಎಂದು ತಿಳಿಸಿದೆ.
ಜೂನ್ 14 ಮತ್ತು 15ರಂದು ಹಿಮಾಚಲ ಪ್ರದೇಶ ಮತ್ತು ಪೂರ್ವ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ, ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಚಂಡೀಗಢ, ನವದೆಹಲಿಯ ಕೆಲವು ಭಾಗಗಳಿಲ್ಲಿ ತಾಪಮಾನ ಪ್ರಮಾಣ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.












Click it and Unblock the Notifications