IMD Weather Forecast: ಈ ಭಾಗಗಳಲ್ಲಿ ಮುಂದಿನ ನಾಲ್ಕೈದು ದಿನ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಹಲವೆಡೆ ಭೀಕರ ಚಳಿ ನಡುವೆಯೂ ಮಳೆರಾಯ ಅಬ್ಬರಿಸಿ ಬೊಬ್ಬೆರೆಯುತ್ತಿದ್ದಾನೆ. ಹಾಗೆಯೇ ಚಂಡಮಾರುತ ಪರಿಣಾಮ ಈ ಭಾಗಗಳಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ ಗುಡುಗು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಹಲವು ದಿನಗಳ ಕಾಲ ಕೆಲವೆಡೆ ಭಾರೀ ಮಳೆಯಾಗಲಿದ್ದು, ಉಳಿದ ಭಾಗಗಳಲ್ಲಿ ಭಾರೀ ಚಳಿ ಮುಂದುವರೆಯುವ ಸಾಧ್ಯತೆಯಿದೆ. ಈಗಾಗಲೇ ಬಹುತೇಕ ಭಾಗಗಳಲ್ಲಿ ಭಾರೀ ಚಳಿ ಮುಂದುವರೆದಿದೆ.

ದೆಹಲಿ, ಪಂಜಾಬ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಲ್ಲಿ ತೀವ್ರ ಶೀತಗಾಳಿ ಮುಂದುವರೆದಿದೆ. ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಭಾಗಗಳಲ್ಲಿ ಭಾರೀ ಹಿಮಪಾತವಾಗಿದ್ದು, ಜನರು ತತ್ತರಿಸಿ ಹೋಗಿದ್ದಾರೆ. ಈ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ತಾಪಮಾನ ಗಮನಾರ್ಹವಾಗಿ ಕಡಿಮೆಯಾಗಲಿದ್ದು, ಚಳಿ ಪ್ರಮಾನ ಹೆಚ್ಚಾಗಲಿದೆ ಎಂದು ಐಎಂಡಿ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ದಕ್ಷಿಣ ಭಾರತದಲ್ಲಿ ಭಾರಿ ಮಳೆ ಎಚ್ಚರಿಕೆ: ದಿತ್ವಾ ಚಂಡಮಾರುತ ಪರಿಣಾಮ ದಕ್ಷಿಣ ಭಾರತದ ಹಲವು ಭಾಗಗಳಲ್ಲಿ ಮುಂದಿನ ಹಲವು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ಪುದುಚೇರಿ, ಕಾರೈಕಲ್, ಕಾಂಚೀಪುರಂ, ತಿರುವಲ್ಲೂರು, ಚೆಂಗಲ್ಪಟ್ಟು ಮತ್ತು ರಾಣಿ ಪೇಟೆ ಜಿಲ್ಲೆಗಳಲ್ಲಿ ಮುಂದಿನ ನಾಲ್ಕೈದು ದಿನ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇನ್ನೂ ಕಾಶ್ಮೀರಾದ ಗುಲ್ಮಾರ್ಗ್, ಪಹಲ್ಗಾಮ್, ಸೋನಾಮಾರ್ಗ್, ಹಿಮಾಚಲ ಪ್ರದೇಶದ ಕಿನ್ನೌರ್, ಮನಾಲಿ, ಶಿಮ್ಲಾ, ಕುಫ್ರಿ ಮತ್ತು ಉತ್ತರಾಖಂಡದ ಔಲಿ, ಕೇದಾರನಾಥ ಮತ್ತು ಚೋಪ್ಟಾ ಭಾಗಗಳಲ್ಲಿ ಭಾರೀ ಚಳಿ ಮುಂದುವರೆದಿದೆ. ಅಲ್ಲದೆ, ಹಿಮಪಾತ ಕೂಡ ಸಂಭವಿಸಿದೆ. ಈ ಪ್ರದೇಶಗಳಲ್ಲಿ ಮಂಜು ಮುಚ್ಚಿದ ವಾತಾವರಣ ಮುಂದುವರೆದ ಪರಿಣಾಮ ನದಿಗಳ ನೀರು ಮಂಜುಗಡ್ಡೆಯಂತೆ ಹೆಪ್ಪುಗಟ್ಟಿವೆ. ಕೇದಾರನಾಥದಲ್ಲಿ -14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿರುವ ಬಗ್ಗೆ ವರದಿಯಾಗಿದೆ.
ಮುಂದಿನ ಕೆಲವು ದಿನಗಳವರೆಗೆ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಹಗುರದಿಂದ ಮಧ್ಯಮ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಭಾರೀ ಹಿಮಪಾತದಿಂದ ಕೆಲವು ಪ್ರಮುಖ ಹೆದ್ದಾರಿಗಳು ಮತ್ತು ಸ್ಥಳೀಯ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅಡೆತಡೆ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮಂಜಿನ ಪ್ರಮಾಣ ಇನ್ನೂ ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಈಗಾಗಲೇ ಶನಿವಾರ, ಜಬಲ್ಪುರ ಮತ್ತು ಗ್ವಾಲಿಯರ್ ಸೇರಿದಂತೆ ಮಧ್ಯಪ್ರದೇಶದ 12 ನಗರಗಳಲ್ಲಿ ತಾಪಮಾನವು 10 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆಯಾಯಿತು. ಇನ್ನೂ ಇದೀಗ ಇಂದೋರ್, ಭೋಪಾಲ್ ಮತ್ತು ಉಜ್ಜಯಿನಿ ಸೇರಿದಂತೆ ಹಲವಾರು ಜಿಲ್ಲೆಗಳಲ್ಲಿ ಬೆಳಗಿನ ವೇಳೆ ದಟ್ಟ ಮಂಜು ಕವಿದ ವಾತಾವರಣ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಭಾಗಗಳಲ್ಲಿ ಚಳಿ ಪ್ರಮಾಣ ಮತ್ತಷ್ಟು ಹೆಚ್ಚಳ ಆಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ.
ಕಳೆದ ಎರಡು ದಿನಗಳಿಂದ ಹಗುರ ಮಳೆಯ ಹೊರತಾಗಿಯೂ, ರಾಜಸ್ಥಾನದಲ್ಲಿ ಚಳಿ ತೀವ್ರಗೊಂಡಿದೆ. ಶೇಖಾವತಿ ಮತ್ತು ಬಿಕಾನೇರ್ ವಿಭಾಗಗಳಲ್ಲಿ ಕನಿಷ್ಠ ತಾಪಮಾನವು ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.












Click it and Unblock the Notifications