IMD Weather Forecast: ಈ ಭಾಗಗಳಲ್ಲಿ ಆಗಸ್ಟ್ 12ರ ವರೆಗೆ ಬಿರುಗಾಳಿ ಸಹಿತ ರಣಭೀಕರ ಮಳೆ ಮುಮನ್ಸೂಚನೆ
IMD Weather Forecast: ದೇಶದ ಹಲವು ರಾಜ್ಯಗಳಲ್ಲಿ ಮುಂಗಾರು ಚುರುಕು ಪಡೆದಿದ್ದು, ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸಂಭವಿಸಿವೆ. ಇದರ ಜೊತೆಗೆ ಇದೀಗ ಚಂಡಮಾರುತದ ಕಾಟ ಕೂಡ ಶುರುವಾಗಿದೆ. ಹಾಗೆಯೇ ಆಗಸ್ಟ್ 12ರ ವರೆಗೆ ಈ ಭಾಗಗಳಲ್ಲಿ ಬಿರುಗಾಳಿ ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ದೇಶದ ಹಲವೆಡೆ ಸಾಧಾರಣ ಮಳೆಯಾಗುತ್ತಿದ್ದರೆ, ಇನ್ನೂ ಕೆಲವೆಡೆ ರಣಭೀಕರ ಮಳೆಯಿಂದ ಜಲಪ್ರಳಯ ಸೃಷ್ಟಿಯಾದ ಘಟನೆಗಳು ನಡೆದಿವೆ. ಹಾಗೆಯೇ ಮುಂದಿನ ಹಲವು ದಿನಗಳ ಕಾಲ ಕೆಲವು ಭಾಗಗಳಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.

ಅದರಲ್ಲೂ ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಸತತ ಮೂರನೇ ದಿನವೂ ಭಾರೀ ಮಳೆ ಮುಂದುವರೆದಿದ್ದು, ರಾಜ್ಯದಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ 24ಕ್ಕೆ ಏರಿಕೆ ಆಗಿದೆ. ಈ ರಣಭೀಕರ ಮಳೆ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ತೀವ್ರ ಆತಂಕ ಮೂಡಿಸಿದ್ದು, ಜನರು ಜೀವವನ್ನು ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲಪ್ರಳಯಕ್ಕೆ ಕೊಚ್ಚಿಹೋದ ಮನೆಗಳು: ಗಂಗಾ, ಯಮುನಾ ಮತ್ತು ಶಾರದಾ ನದಿಗಳು ವಿವಿಧ ಪ್ರದೇಶಗಳಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹತ್ತಿರದ ಹಳ್ಳಿಗಳು, ಕೃಷಿಭೂಮಿ ಮತ್ತು ರಸ್ತೆಗಳು ಜಲಾವೃತಗೊಂಡಿವೆ. ಅದರಲ್ಲೂ, ಉತ್ತರಖಂಡ ಭಾಗದಲ್ಲಿ ಜಲಪ್ರಳಯದಿಂದ ಮನೆಗಳು ಕೊಚ್ಚಿಹೋಗಿದ್ದು, ಜನರು ಬೀದಿಗೆ ಬಂದಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂತಲೂ ಹವಾಮಾನ ಇಲಾಖೆ ಮುನ್ಸೂಚನೆಯನ್ನೂ ಕೂಡ ನೀಡಿದೆ.
ಹವಾಮಾನ ಇಲಾಖೆ ನೀಡಿದ ಎಚ್ಚರಿಕೆಗಳು: ಭಾರತೀಯ ಹವಾಮಾನ ಇಲಾಖೆ ಮುಂದಿನ ಕೆಲವು ದಿನಗಳವರೆಗೆ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಆಗಸ್ಟ್ ಆಗಸ್ಟ್ 12ರ ವರೆಗೆ ದೇಶದ ದಕ್ಷಿಣ, ಮಧ್ಯ ಮತ್ತು ಈಶಾನ್ಯ ಭಾಗಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಆರೆಂಟ್ ಅಲರ್ಟ್ ಘೋಷಣೆ: ಭಾರೀ ಮಳೆ ಮುನ್ಸೂಚನೆ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಇಂದು (ಆಗಸ್ಟ್ 7) ಬಿಹಾರ, ಕರ್ನಾಟಕ, ಜಾರ್ಖಂಡ್, ಸಿಕ್ಕಿಂ, ಅಸ್ಸಾಂ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಿಗೆ ಹವಾಮಾನ ಇಲಾಖೆ ಆರೆಂಟ್ ಅಲರ್ಟ್ ಘೋಷಣೆ ಮಾಡಿದೆ.
ಮುಂಬೈನ ಕೆಲವು ಭಾಗಗಳಲ್ಲಿ ಈಗಾಗಲೇ ಬುಧಾವಾರ ರಾತ್ರಿಯಿಡೀ ಮಳೆ ಆಗಿದೆ. ಹಾಗೆಯೇ ಗುರುವಾರ ಕೂಡ ಮಳೆ ಮುಂದುವರಿದಿದ್ದು, ಮುಂದಿನ ಹಲವು ದಿನಗಳವರೆಗೆ ಇದೇ ರೀತಿಯ ವಾತಾವರಣ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಷ್ಟ್ರ ರಾಜಧಾನಿ ನವದೆಹಲಿ ಹವಾಮಾನ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು (ಆಗಸ್ಟ್ 7) ಗುರುವಾರ ಭಾಗಶಃ ಮೋಡ ಕವಿದ ವಾತಾವರಣ ಇದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗರಿಷ್ಠ ತಾಪಮಾನ 34 ರಿಂದ 36 ಡಿಗ್ರಿ ಸೆಲ್ಸಿಯಸ್ ದಾಖಲಾದರೆ, ಕನಿಷ್ಠ ತಾಪಮಾನ 24ರಿಂದ 26 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಎಲ್ಲಿ ಯಾವಾಗ ಮಳೆ?: ಉತ್ತರಾಖಂಡ, ಹಿಮಾಚಲ ಪ್ರದೇಶದಲ್ಲಿ ಆಗಸ್ಟ್ 7-12ರ ವರೆಗೆ, ಪಂಜಾಬ್ ಆಗಸ್ಟ್ 7-12, ಹರಿಯಾಣ ಆಗಸ್ಟ್ 11 ಮತ್ತು 12, ಪಶ್ಚಿಮ ಉತ್ತರ ಪ್ರದೇಶ ಆಗಸ್ಟ್ 8, 11 ಮತ್ತು 12 ಹಾಗೂ ಪೂರ್ವ ಉತ್ತರ ಪ್ರದೇಶದಲ್ಲಿ ಆಗಸ್ಟ್ 12ರಂದು ಪ್ರತ್ಯೇಕವಾದ ಅಲ್ಲಲ್ಲಿ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಭಾರತದಲ್ಲಿ ಎಲ್ಲೆಲ್ಲಿ ಮಳೆ?: ತಮಿಳುನಾಡು, ಕೇರಳ, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ಹಾಗೂ ಕರ್ನಾಟಕದ ಕೆಲವು ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಉತ್ತರಖಂಡದ ಬಳಿಕ ಹಿಮಾಚಲಕ್ಕೆ ಎಚ್ಚರಿಕೆ ಸಂದೇಶ: ಈಗಾಗಲೇ ಉತ್ತರಖಂಡದಲ್ಲಿ ಭಾರೀ ಮಳೆಯಿಂದ ಮೇಘಸ್ಫೋಟಕ ಸಂಭವಿಸಿದೆ. ಇದೆ ಬೆನ್ನಲ್ಲೇ ಇದೀಗ ಆಗಸ್ಟ್ 7 ರಿಂದ 9ರವರೆಗೆ ಹಿಮಾಚಲ ಪ್ರದೇಶದಲ್ಲಿ ಮುಂಗಾರು ಮಳೆ ಮುಂದುವರಿಯುವ ಮುನ್ಸೂಚನೆಯನ್ನು ನೀಡಿದ್ದು, ಇಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಕಳೆದ 24 ಗಂಟೆಗಳಲ್ಲಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಭಾರೀ ಮಳೆ ಮುಂದುವರೆದ ಪರಿಣಾಮ ಅವಾಂತರಗಳು ಸಂಭವಿಸಿವೆ. ಅದರಲ್ಲೂ ಈಗಾಗಲೇ ಮೇಘಸ್ಫೋಟದಿಂದ ಉತ್ತರಖಂಡದ ಹಲವೆಡೆ ಮನೆಗಳು ಜಲಾವೃತವಾಗಿದ್ದು, ಹಲವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಇನ್ನು ಉತ್ತರಕಾಶಿಯಲ್ಲಿ ಜಲಪ್ರಳಯದಲ್ಲಿ ಸಿಲುಕಿರುವವರನ್ನು ಕರೆತರಲು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
ಭಾರತೀಯ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಇಂಡೋ-ಟಿಬೆಟಿಯನ್ ಗಡಿ ಪೊಲೀಸ್, ರಾಜ್ಯ ವಿಪತ್ತು ನಿರ್ವಹಣಾ ಪಡೆ, ಉತ್ತರಾಖಂಡ ಪೊಲೀಸ್ ಮತ್ತು ಸ್ಥಳೀಯ ಆಡಳಿತವು ಧರಾಲಿಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿವೆ. ಹರ್ಸಿಲ್‌ನಿಂದ ಹೆಲಿಕಾಪ್ಟರ್ ಹಾರಾಟಗಳು ಪ್ರಾರಂಭವಾಗಿದ್ದು, ಪೀಡಿತ ಪ್ರದೇಶದಿಂದ ಹಲವಾರು ಜನರನ್ನು ಸ್ಥಳಾಂತರ ಮಾಡಲಾಗಿದೆ ಎಂದು ಗರ್ವಾಲ್ ವಿಭಾಗದ ಆಯುಕ್ತ ವಿನಯ್ ಶಂಕರ್ ಪಾಂಡೆ ಹೇಳಿದ್ದಾರೆ.
190 ಜನರ ರಕ್ಷಣೆ: ಮೇಘಸ್ಫೋಟದಿಂದ ಭಾರಿ ಪ್ರವಾಹ ಮತ್ತು ಭೂಕುಸಿತ ಉಂಟಾದ ಪರಿಣಾಮ ಬುಧವಾರ ಧರಾಲಿಯಲ್ಲಿ ಸುಮಾರು 190 ಜನರನ್ನು ರಕ್ಷಣೆ ಮಾಡಲಾಗಿದೆ. IAF, ITBP, NDRF, SDRF ಮತ್ತು ಸ್ಥಳೀಯ ಸ್ವಯಂಸೇವಕರು ಜಂಟಿ ರಕ್ಷಣಾ ಕಾರ್ಯಾಚರಣೆಯನ್ನು ಮುಂದುವರೆಸಿದ್ದಾರೆ ಎಂದು ವರದಿಯಾಗಿದೆ.
ಭಾರೀ ಮಳೆಯಿಂದ ನಷ್ಟವೆಷ್ಟು?: ಹಿಮಾಚಲ ಪ್ರದೇಶ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿ ಪ್ರಕಾರ, ಈ ವರ್ಷದ ಜೂನ್ 20ರಿಂದ ಆಗಸ್ಟ್ 6ರ ವರೆಗೆ ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಒಟ್ಟು 199 ಜನರು ಸಾವನ್ನಪ್ಪಿದ್ದು, ಒಟ್ಟು 1905.5 ಕೋಟಿ ರೂಪಾಯಿಗಳಿಗೂ ಹೆಚ್ಚು ನಷ್ಟವಾಗಿದೆ. ಒಟ್ಟು 199 ಸಾವುಗಳಲ್ಲಿ 108 ಸಾವುಗಳು ಭೂಕುಸಿತ, ದಿಢೀರ್ ಪ್ರವಾಹದಿಂದ ಸಂಭವಿಸಿವೆ. ಇನ್ನೂ 91 ಜನರು ಸಂಚಾರ ಅಪಘಾತಗಳಲ್ಲಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.












Click it and Unblock the Notifications