IMD Weather Forecast: ಈ ಭಾಗಗಳಲ್ಲಿಂದು ಕೆಲವೇ ಕ್ಷಣಗಳಲ್ಲಿ ಬಿರುಗಾಳು ಸಹಿತ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಬಹುತೇಕ ರಾಜ್ಯಗಳಲ್ಲಿ ಮುಂಗಾರು ಮತ್ತೆ ಚುರುಕು ಪಡೆದಿದೆ. ಈಗಾಗಲೇ ಭಾರೀ ಮಳೆಯಿಂದ ಹಲವೆಡೆ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಇನ್ನೂ ಇಂದು (ಸೆಪ್ಟೆಂಬರ್ 3) ಕೆಲವೇ ಕ್ಷಣಗಳಲ್ಲಿ ಈ ಭಾಗಗಳಲ್ಲಿ ಗುಡುಗು ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಹಲವು ರಾಜ್ಯಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಇನ್ನೂ ಕೆಲವೆಡೆ ಗುಡುಗು, ಮಿಂಚು ಸಹಿತ ಬಿರುಗಾಳಿ ಮಳೆ ಸುರಿಯುವ ಸಾಧ್ಯತೆಯಿದೆ. ಅದರಲ್ಲೂ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ. ಈಗಾಗಲೇ ಈ ಭಾಗಗಳ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಸಂಭವಿಸಿ ಮನೆಗಳು ಕೊಚ್ಚಿಹೋಗಿ ತುಂಬಾ ಜನ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ ಮನೆ-ಮಠಗಳನ್ನು ಕಳೆದುಕೊಂಡು ಕೂಡ ಜನರು ಬೀದಿಗೆ ಬಂದಿದ್ದಾರೆ.

ಕಳೆದ ಕೆಲ ವಾರಗಳಿಂದ ಉತ್ತರ ಭಾರತದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದೆ. ಇನ್ನು (ಸೆಪ್ಟೆಂಬರ್ 3) ನೋಯ್ಡಾ, ಗುರುಗ್ರಾಮ್ ಮತ್ತು ಗಾಜಿಯಾಬಾದ್ ಸೇರಿದಂತೆ ನವದೆಹಲಿ-ಎನ್‌ಸಿಆರ್ ಭಾಗಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನಿಡಿದೆ. ಈಗಾಗಲೇ ಇಲ್ಲಿನ ಜನರು ರಣಮಳೆಗೆ ಬೇಸತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಏನು ಕಾದಿದೆಯೋ ಗೊತ್ತಿಲ್ಲ ಎನ್ನುವ ಆತಂಕದಲ್ಲಿದ್ದಾರೆ.
ಇಂದು ಬೆಳ್ಳಂಬೆಳಗ್ಗೆ ಗುರುಗ್ರಾಮದಲ್ಲಿ ಭಾರೀ ಮಳೆಯಿಂದಾಗಿ ರಸ್ತೆಗಳಲ್ಲ ನದಿಯಂತೆ ಮಾರ್ಪಟ್ಟು ವಾಹನ ಸವಾರರು ಪರದಾಡಿದ ಘಟನೆ ನಡೆದಿದೆ. ಭಾರೀ ಮಳೆ ಮುಂದುವರೆಯುವ ಹಿನ್ನೆಲೆ ಇಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಗುರುಗ್ರಾಮಕ್ಕೆ ಮುಂಜಾಗ್ರತಾ ಕ್ರಮವಾಗಿ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೆ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ಭಾಗಗಳಲ್ಲಿನ ಎಲ್ಲಾ ಸರ್ಕಾರಿ ಶಾಲಾ-ಕಾಲೇಜುಗಳು ಹಾಗೂ ಕಚೇರಿಗಳನ್ನು ಮುಚ್ಚುವಂತೆ ಶಿಫಾರಸು ಮಾಡಿದ್ದು, ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಸೂಚನೆ ನೀಡಲಾಗಿದೆ.
ಆರೆಂಜ್, ರೆಡ್ ಅಲರ್ಟ್: ಇಂದು ಭಾರೀ ಮಳೆ ಹಿನ್ನೆಲೆ ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್‌ನ ಕೆಲ ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುಂಜಾಗ್ರತಾ ಕ್ರಮವಾಗಿ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಇನ್ನು ಪಂಜಾಬ್, ಜಮ್ಮು ಮತ್ತು ಕಾಶ್ಮೀರ ರಾಜ್ಯದ ಬಹುತೇಕ ಜಿಲ್ಲೆಗಳಿಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಮುಂದಿನ 24 ಗಂಟೆಗಳಲ್ಲಿ ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಇದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣ ಆದರೂ ಆಗಬಹುದು. ಆದ್ದರಿಂದ ನದಿತೀರಗಳ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
ಎಲ್ಲೆಲ್ಲಿ ಪ್ರವಾಹದ ಆತಂಕ ನಿರ್ಮಾಣ?
* ಉತ್ತರಾಖಂಡ: ಅಲ್ಮೋರಾ, ಬಾಗೇಶ್ವರ್, ಚಮೋಲಿ, ಡೆಹ್ರಾಡೂನ್, ಪೌರಿ, ಪಿಥೋರಗಢ, ರುದ್ರಪ್ರಯಾಗ, ತೆಹ್ರಿ, ಉತ್ತರಕಾಶಿ.
* ಜಮ್ಮು ಮತ್ತು ಕಾಶ್ಮೀರ: ಅನಂತನಾಗ್, ದೋಡಾ, ಕಥುವಾ, ಕಿಶ್ತ್ವಾರ್, ಕುಲ್ಗಾಮ್, ಪೂಂಚ್, ರಾಂಬನ್, ರಿಯಾಸಿ, ಉಧಮ್ಪುರ್
* ಹಿಮಾಚಲ ಪ್ರದೇಶ: ಚಂಬಾ, ಕಂಗ್ರಾ, ಕಿನ್ನೌರ್, ಕುಲು, ಲಾಹೌಲ್-ಸ್ಪಿತಿ, ಮಂಡಿ, ಶಿಮ್ಲಾ, ಸಿರ್ಮೌರ್
ಕಳೆದ ಕೆಲ ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಭೂಕುಸಿತ, ಪ್ರವಾಹ ಮತ್ತು ಜಲಾವೃತದಂತಹ ಘಟನೆಗಳು ಸಂಭವಿಸಿದ್ದು, ಇದರಿಂದ ಹಲವೆಡೆ ಅನೇಕ ಜನರು ಜೀವ ಕಳೆದುಕೊಂಡಿದ್ದಾರೆ. ಅಲ್ಲದೆ, ಸಾವಿರಾರು ಜನರು ಮನೆ-ಮಠಗಳು, ಕೃಷಿ ಭೂಮಿಗಳನ್ನು ಕಳೆದುಕೊಂಡು ಬೀದಿಗೆ ಬಂದಿರುವ ಘಟನೆಗಳು ನಡೆದಿದೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಿಂದಾಗಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವು ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸಂಚಾರ ಕೂಡ ಸ್ಥಗಿತಗೊಂಡಿದೆ. ಮತ್ತೊಂದೆಡೆ, ಪ್ರವಾಹದಲ್ಲಿ ಸಿಲುಕಿಕೊಂಡಿರುವವರನ್ನು ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಭಾರತೀಯ ಸೇನೆ, ವಾಯುಪಡೆ, ನೌಕಾಪಡೆ, ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತವಾಗಿವೆ.
ಹಿಮಾಚಲ ಪ್ರದೇಶದಲ್ಲಿ ಮುಂಗಾರು ಆರ್ಭಟಕ್ಕೆ ಜೂನ್ 20 ರಿಂದ 340 ಜನರು ಬಲಿಯಾಗಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ. ಈ ಪೈಕಿ 182 ಜನರು ಭೂಕುಸಿತ, ಪ್ರವಾಹ ಮತ್ತು ಮನೆ ಕುಸಿತದಂತಹ ಮಳೆ ಸಂಬಂಧಿತ ಘಟನೆಗಳಿಂದ ಸಾವನ್ನಪ್ಪಿದ್ದರೆ. 158 ಸಾವುಗಳು ರಸ್ತೆ ಅಪಘಾತಗಳಿಮದ ಸಂಭವಿಸಿವೆ ಎಂದು ವರದಿಯಾಗಿದೆ. ಒಟ್ಟಿನಲ್ಲಿ ಭಾರೀ ಮಳೆಯಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಹದ ವಾತಾವರಣ ಸೃಷ್ಟಿಯಾಗಿದೆ. ಮತ್ತೊಂದೆಡೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಷ್ಟೇನು ಅನಾಹುತಗಳಾಗಿಲ್ಲ. ಆದರೆ, ಸೆಪ್ಟೆಂಬರ್‌ನಲ್ಲಿ ಬಹುತೇಕ ರಾಜ್ಯಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದೆ. ಕರ್ನಾಟಕದ ಕರಾವಳಿ ರಾಜ್ಯಗಳು, ತಮಿಳುನಾಡು, ಕೇರಳದ ಭಾಗಗಳಲ್ಲಿ ಮಳೆ ಸಂಪೂರ್ಣವಾಗಿ ಆವರಿಸಲಿದೆ ಎನ್ನುವ ಮುನ್ಸೂಚನೆ ಇದೆ.












Click it and Unblock the Notifications