IMD Weather Forecast: ಈ ಭಾಗಗಳಲ್ಲಿ ಸೆಪ್ಟೆಂಬರ್ 1ರಿಂದ ಮುಂದಿನ 5 ದಿನ ರಣಭೀಕರ ಮಳೆ ಮುನ್ಸೂಚನೆ
IMD Weather Forecast: ದೇಶದ ಹಲವು ರಾಜ್ಯಗಳಲ್ಲಿ ಈಗಾಗಲೇ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಹಾಗೆಯೇ ಈ ಭಾಗಗಳಲ್ಲಿ ಮುಂದಿನ 5 ದಿನ ರಣಭೀಕರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗಾದ್ರೆ, ಎಲ್ಲೆಲ್ಲಿ ಯಾವಾಗ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ಹಲವೆಡೆ ಸಾಧಾರಣ ಮಳೆ ಸುರಿಯಲಿದ್ದು, ಇನ್ನೂ ಕೆಲವೆಡೆ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ. ಈಗಾಗಲೇ ಕಳೆದ ತಿಂಗಳು ಭಾರತದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದ್ದು, ಸೆಪ್ಟೆಂಬರ್‌ನಲ್ಲಿಯೂ ಈ ಮಳೆ ಮುಂದುವರೆಯುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ವಾಯುವ್ಯ ಭಾರತದಲ್ಲಿ ಸೆಪ್ಟೆಂಬರ್ 1ರಿಂದ ಮುಂದಿನ ಮೂರು ದಿನಗಳವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆಪ್ಟೆಂಬರ್ 3ರ ವರೆಗೆ ಹಿಮಾಚಲ ಪ್ರದೇಶ ಮತ್ತು ಸೆಪ್ಟೆಂಬರ್ 1 ರಂದು ಉತ್ತರಾಖಂಡ, ಸೆಪ್ಟೆಂಬರ್ 1 ಮತ್ತು 2ರಂದು ಜಮ್ಮುವಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.
ಮುಂದಿನ ಐದು ದಿನಗಳ ಕಾಲ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ನಾಲ್ಕು ದಿನ ಒಡಿಶಾದಲ್ಲಿ, ಸೆಪ್ಟೆಂಬರ್ 2-4ರ ವರೆಗೆ ವಿದರ್ಭ ಮತ್ತು ಆಗಸ್ಟ್ 31ರಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ಬಿಹಾರದಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 1 ಮತ್ತು 2ರಂದು ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ, ಪಶ್ಚಿಮ ಮಧ್ಯಪ್ರದೇಶ, ಒಡಿಶಾದ ಪ್ರತ್ಯೇಕ ಪ್ರದೇಶಗಳಲ್ಲಿ ಅಲ್ಲಲ್ಲಿ ಬಿರುಗಾಳಿ ಸಹಿತ ರಣಭೀಕರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡಿದೆ.
ಇನ್ನು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಬಿಟ್ಟುಬಡದೇ ವರುಣನ ಆರ್ಭಟ ಮುಂದುವರೆದಿದೆ. ಇನ್ನು ಇಂದು (ಸೆಪ್ಟೆಂಬರ್ 1) ಮೋಡ ಕವಿದ ವಾತಾವರಣ ಇದ್ದು, ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ.
ಇನ್ನು ಇಂದು ದೆಹಲಿಯಲ್ಲಿ ಗರಿಷ್ಠ ತಾಪಮಾನವು 29 ರಿಂದ 31°Cವರೆಗೆ ಇರಲಿದ್ದು, ಕನಿಷ್ಠ ತಾಪಮಾನ 22ರಿಂದ 24°C ವರೆಗೆ ದಾಖಲಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ರಿಂದ 4°C ಕಡಿಮೆಯಾಗಬಹುದು ಮತ್ತು ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 3 ರಿಂದ 5°C ಕಡಿಮೆಯಾಗಬಹುದು ಎಂದು ತಿಳಿಸಿದೆ.
ಮತ್ತೊಂದೆಡೆ ಭಾರತೀಯ ಹವಾಮಾನ ಇಲಾಖೆ ಸೆಪ್ಟೆಂಬರ್ ತಿಂಗಳಿನಲ್ಲಿ ದೇಶಾದ್ಯಂತ ಕಂಡುಕೇಳರಿಯದ ದಾಖಲೆ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ. ಇನ್ನು ಇದೀಗ ಭಾರೀ ಮಳೆ ಮುಂದುವರೆದ ಕಾರಣ ಉತ್ತರಾಖಂಡದಲ್ಲಿ ಮತ್ತೆ ಭೂಕುಸಿತದ ಆತಂಕ ಎದುರಾಗುದೆ. ಅಲ್ಲದೆ, ದಕ್ಷಿಣ ಹರಿಯಾಣ, ನವದೆಹಲಿ ಮತ್ತು ಉತ್ತರ ರಾಜಸ್ಥಾನದಲ್ಲಿಯೂ ಭಾರೀ ಮಳೆ ಸುರಿಯುವ ಮುನ್ಸೂಚನೆ ಇದ್ದು, ಇದರಿಂದ ಇಲ್ಲಿನ ಜನರು ಮುಂದೆ ಇನ್ನೂ ಏನೆಲ್ಲಾ ಅನಾಹುತಗಳು ಕಾದಿವೆಯೋ ಎಂದು ಜೀವವನ್ನು ಕೈಯಲ್ಲಿಡಿದು ಜೀವನ ಸಾಗಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.












Click it and Unblock the Notifications