
ಸೆಪ್ಟೆಂಬರ್‌ನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆ ಸೂಚನೆ ಕೊಟ್ಟ IMD
ನವದೆಹಲಿ, ಸೆಪ್ಟೆಂಬರ್ 01: ಸೆಪ್ಟೆಂಬರ್ ತಿಂಗಳಿನಲ್ಲಿ ದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ದಾಖಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜುಲೈ ಹಾಗೂ ಆಗಸ್ಟ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ಮಳೆ ದಾಖಲಾಗಿತ್ತು. ಎರಡು ತಿಂಗಳಿನಲ್ಲಿ ಬಿಟ್ಟು ಬಿಟ್ಟು ಮಳೆಯಾಗಿತ್ತು. ದೀರ್ಘಕಾಲ ಬಿಡುವನ್ನೂ ಪಡೆದುಕೊಂಡಿತ್ತು. ಹೀಗಾಗಿ ಮಳೆ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿತ್ತು. ಇದೀಗ ಸೆಪ್ಟೆಂಬರ್ ತಿಂಗಳಿನಲ್ಲಿ ಮಳೆ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ರೈತರಲ್ಲಿ ಸಂತಸ ಮೂಡಿಸಿದೆ.
ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಸಾಮಾನ್ಯಕ್ಕಿಂತ 10% ಅಧಿಕ ಮಟ್ಟದಲ್ಲಿ ದಾಖಲಾಗಿತ್ತು. ಜುಲೈ ತಿಂಗಳಿನಲ್ಲಿ ಮತ್ತೆ ತಗ್ಗಿತ್ತು. ಆಗಸ್ಟ್ ತಿಂಗಳಿನಲ್ಲಿ ಕೂಡ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಲಿಲ್ಲ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಭಾರತದಲ್ಲಿ ಆಗಸ್ಟ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ 26% ಕಡಿಮೆ ಮಳೆ ದಾಖಲಾಗಿದೆ. ಹಲವು ರಾಜ್ಯಗಳಲ್ಲಿ ಮಳೆಯಾದರೂ ಒಟ್ಟಾರೆ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಇದೀಗ ಸೆಪ್ಟೆಂಬರ್ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗುವ ಸೂಚನೆಯನ್ನು ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ.
ಮುಂಗಾರು ಹಂಗಾಮಿನ ಬೆಳೆಗಳ ಸಸ್ಯ ಸಂರಕ್ಷಣೆ; ರೈತರಿಗೆ ಸಲಹೆಗಳು
ಆಗಸ್ಟ್ ತಿಂಗಳಿನಲ್ಲೂ ಕಡಿಮೆ ಮಳೆ ದಾಖಲು
ಜುಲೈ ತಿಂಗಳಿನಂತೆ ಆಗಸ್ಟ್ ತಿಂಗಳಿನಲ್ಲಿಯೂ ಸಾಮಾನ್ಯಕ್ಕಿಂತ ಕಡಿಮೆ ಮಳೆ ದಾಖಲಾಗಿದೆ. ಆಗಸ್ಟ್‌ನಲ್ಲಿ ಸಾಮಾನ್ಯಕ್ಕಿಂತ 26% ಕಡಿಮೆ ಮಳೆ ದಾಖಲಾಗಿರುವುದಾಗಿ ತಿಳಿಸಿದೆ. ಜುಲೈ ತಿಂಗಳಿನಲ್ಲಿ ಸಾಮಾನ್ಯಕ್ಕಿಂತ 7% ಮಳೆ ಕಡಿಮೆಯಾಗಿತ್ತು. ಆಗಸ್ಟ್‌ನಲ್ಲಿ ಮಳೆ ಕೊರತೆ ಇನ್ನಷ್ಟು ಅಧಿಕವಾಗಿದೆ. ಈ ಬಾರಿ 26% ಮಳೆ ಕಡಿಮೆಯಾಗಿದೆ ಎಂದು ಐಎಂಡಿ ನಿರ್ದೇಶಕ ಮಹೋಪಾತ್ರ ಮಾಹಿತಿ ನೀಡಿದ್ದಾರೆ.
ಉತ್ತರ ಹಾಗೂ ಮಧ್ಯ ಭಾರತದಲ್ಲಿ ಕಡಿಮೆ ಮಳೆ ದಾಖಲಾಗಿರುವುದಾಗಿ ಮಾಹಿತಿ ನೀಡಿದ್ದಾರೆ. ಈ ವರ್ಷ ಜೂನ್‌ನಿಂದ ಸೆಪ್ಟೆಂಬರ್ ತಿಂಗಳವರೆಗೆ ಒಟ್ಟಾರೆ ಮಳೆ ಪ್ರಮಾಣ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಮುಂಗಾರಿನ ಕೊನೆಯ ತಿಂಗಳಾದ ಸೆಪ್ಟೆಂಬರ್‌ನಲ್ಲಿ ಹೆಚ್ಚಿನ ಮಳೆ ದಾಖಲಾಗಬಹುದು. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್ ಹಾಗೂ ಬಿಹಾರದಲ್ಲಿ ಮತ್ತೆ ಮಳೆ ಆರಂಭವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಪಶ್ಚಿಮ ಭಾಗಗಳಲ್ಲಿ ಮಳೆ ಮುಂದುವರೆಯಲಿದೆ ಎಂದು ತಿಳಿಸಿದೆ.
ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದಲ್ಲಿ ದೇಶ ಜುಲೈ ತಿಂಗಳಿನಲ್ಲಿ ಸಾಮಾನ್ಯ ಮಳೆ ಪಡೆದಿದ್ದು, 101% ರಷ್ಟು ಮಳೆ ಪ್ರಮಾಣ ದಾಖಲಾಗಿದೆ. ಈಶಾನ್ಯ ಹಾಗೂ ಪೂರ್ವ ಭಾರತದಲ್ಲಿ 12% ಹೆಚ್ಚಿನ ಮಳೆ ದಾಖಲಾಗಿದೆ. ವಾಯವ್ಯ ಭಾರತದಲ್ಲಿ 19% ಮಳೆ ಕೊರತೆ, ಮಧ್ಯ ಭಾರತದಲ್ಲಿ 3% ಮಳೆ ಕೊರತೆ ಉಂಟಾಗಿದೆ ಎಂದು ಮಾಹಿತಿ ನೀಡಿದೆ.
ಸೆಪ್ಟೆಂಬರ್ 2ರವರೆಗೂ ಈ ರಾಜ್ಯಗಳಲ್ಲಿ ಭಾರೀ ಮಳೆ ಎಚ್ಚರಿಕೆ ಕೊಟ್ಟ IMD
ಈ ಬಾರಿ ಹೇಗಿರಲಿದೆ ಮುಂಗಾರು?
ಈ ವರ್ಷ ನೈಋತ್ಯ ಮುಂಗಾರು ದಕ್ಷಿಣ ಭಾರತ ಹಾಗೂ ಉತ್ತರ ಭಾರತದಲ್ಲಿ ಸಾಮಾನ್ಯ ರೀತಿ ಇರಲಿದ್ದು ಕೇಂದ್ರ ಪ್ರದೇಶದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಆದರೆ ಭಾರತ ಪೂರ್ವ ಭಾಗದಲ್ಲಿ ಮತ್ತು ಈಶಾನ್ಯ ಭಾರತದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆ ಮಟ್ಟದಲ್ಲಿ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ನೈಋತ್ಯ ಮುಂಗಾರಿನ ಕಾಲಾವಧಿಯಲ್ಲಿ (ಜೂನ್‌ನಿಂದ-ಸೆಪ್ಟೆಂಬರ್) ದೇಶಾದ್ಯಂತ ಮಳೆಯ ಪ್ರಮಾಣ ಸಾಮಾನ್ಯವಾಗಿರಲಿದೆ ಎಂದು ಮುನ್ಸೂಚನೆ ನೀಡಿದೆ.
ರಾಜ್ಯದಲ್ಲಿ ಕೃಷಿ ಚಟುವಟಿಕೆ ಮೇಲೆ ಪರಿಣಾಮ
ಜೂನ್ 6ರಂದು ಮುಂಗಾರು ಕರ್ನಾಟಕ ಪ್ರವೇಶಿಸಿದ್ದು, ನಂತರ ಇಡೀ ರಾಜ್ಯವನ್ನು ಆವರಿಸಿತ್ತು. ಜೂನ್ ತಿಂಗಳ ಮೊದಲ ವಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿತ್ತು. ಆದರೆ ಜೂನ್ ಮಧ್ಯಭಾಗದಲ್ಲಿ ಏಕಾಏಕಿ ಮಳೆ ಕಡಿಮೆಯಾಯಿತು. ಇದರಿಂದ ಜಲಾಶಯಗಳಿಗೆ ಒಳಹರಿವು ಕಡಿಮೆಯಾಗಿದ್ದು, ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ. ಮುಂಗಾರು ಆರಂಭವಾದ ನಂತರವೂ ದೀರ್ಘಕಾಲ ಮಳೆಯಾಗದೇ ಇರುವುದು ಕೃಷಿ ಚಟುವಟಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಬಿತ್ತನೆ ಗುರಿ ತಲುಪಲು ಸಾಧ್ಯವಾಗಿಲ್ಲ.