ಈ ರಾಜ್ಯಗಳಲ್ಲಿ ಇನ್ನಷ್ಟು ದಿನ ಬಿರುಸಿನ ಮಳೆ ಮುನ್ಸೂಚನೆ
ನವದೆಹಲಿ, ಸೆಪ್ಟೆಂಬರ್ 28: ದೇಶದಲ್ಲಿ ಗುಲಾಬ್ ಚಂಡಮಾರುತ ಪ್ರಭಾವ ಕೊಂಚ ತಗ್ಗಿದೆ. ಒಡಿಶಾ, ಆಂಧ್ರ, ತೆಲಂಗಾಣ, ಛತ್ತೀಸ್‌ಗಢದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಚಂಡಮಾರುತ ದುರ್ಬಲವಾಗಿದ್ದರೂ ಹಲವು ರಾಜ್ಯಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಅಧಿಕ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಇದರೊಂದಿಗೆ, ಮುಂಗಾರಿನ ಕೊನೆ ಅವಧಿಯಲ್ಲಿ ಮತ್ತೆ ಮಳೆ ಬಿರುಸು ಪಡೆದಿದ್ದು, ಇನ್ನೂ ಕೆಲವು ದಿನಗಳವರೆಗೆ ಮಳೆ ತಗ್ಗುವುದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮ್ಯಾನ್ಮಾರ್ ಕರಾವಳಿ ಜೊತೆಜೊತೆಗೆ ಪೂರ್ವ-ಮಧ್ಯ ಹಾಗೂ ನೆರೆಯ ಈಶಾನ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ಪರಿಚಲನೆಯು ಈಶಾನ್ಯ ಹಾಗೂ ಪೂರ್ವಮಧ್ಯ ಉಷ್ಣವಲಯಕ್ಕೆ ವಿಸ್ತರಿಸಿದೆ. ಇದರ ಪ್ರಭಾವದಡಿಯಲ್ಲಿ ಮುಂದಿನ 12 ಗಂಟೆಗಳಲ್ಲಿ ಪಶ್ಚಿಮ ಬಂಗಾಳ ಹಾಗೂ ನೆರೆಯ ಬಾಂಗ್ಲಾದೇಶ ಕರಾವಳಿಯಲ್ಲಿ, ವಾಯವ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಭಾರೀ ಮಳೆಯಾಗುವುದೆಂದು ಮಾಹಿತಿ ನೀಡಿದೆ.

ಭಾರತದ ಪಶ್ಚಿಮ ಕರಾವಳಿಯಲ್ಲಿ ಮಾರುತಗಳು ಬಲಗೊಳ್ಳುವ ಸಾಧ್ಯತೆಯಿದ್ದು, ಹಲವು ರಾಜ್ಯಗಳು ಈ ಅವಧಿಯಲ್ಲಿ ಅತ್ಯಧಿಕ ಮಳೆಗೆ ಸಾಕ್ಷಿಯಾಗಲಿವೆ ಎಂದು ತಿಳಿದುಬಂದಿದೆ.
ಮುಂಗಾರು ತನ್ನ ಸಾಮಾನ್ಯ ಸ್ಥಾನ ದಕ್ಷಿಣಕ್ಕೆ ಪರಿಚಲನೆ ಮಾಡುತ್ತಿದ್ದು, ಮುಂದಿನ ನಾಲ್ಕೈದು ದಿನಗಳವರೆಗೂ ಇದರ ಪ್ರಭಾವ ಮುಂದುವರೆಯಲಿರುವುದಾಗಿ ತಿಳಿಸಿದೆ. ಈಶಾನ್ಯ ಅರಬ್ಬೀ ಸಮುದ್ರದ ಮೇಲೆ ಚಂಡಮಾರುತದ ಪರಿಚಲನೆ ಸರಾಸರಿ ಸಮುದ್ರ ಮಟ್ಟಕ್ಕಿಂತ 1.5 ಕಿ.ಮೀವರೆಗೆ ವಿಸ್ತರಿಸಲಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 28ರಿಂದ ಆರಂಭಗೊಂಡು, ಅಕ್ಟೋಬರ್ 2ರವರೆಗೂ ಈ ರಾಜ್ಯಗಳಲ್ಲಿ ಮಳೆ ಮುಂದುವರೆಯುವ ಸೂಚನೆಯನ್ನು ನೀಡಲಾಗಿದೆ.

ಈ ಎಲ್ಲಾ ಪ್ರಭಾವದಡಿಯಲ್ಲಿ ಗುಜರಾತ್, ಮಧ್ಯ ಮಹಾರಾಷ್ಟ್ರ, ಕೊಂಕಣ, ಗೋವಾದಲ್ಲಿ ಮಂಗಳವಾರ ವ್ಯಾಪಕ ಮಳೆಯಾಗಲಿದೆ. ಪಶ್ಚಿಮ ಬಂಗಾಳ, ಸೌರಾಷ್ಟ್ರ, ಕಚ್, ಮಧ್ಯ ಪ್ರದೇಶ, ವಿದರ್ಭಾ, ಛತ್ತೀಸ್‌ಗಡ, ಜಾರ್ಖಂಡ್, ಆಂಧ್ರ ಕರಾವಳಿ ಪ್ರದೇಶ, ತೆಲಂಗಾಣ, ಕರ್ನಾಟಕ ಉತ್ತರ ಒಳನಾಡು, ಕರಾವಳಿ, ತಮಿಳುನಾಡು, ಪುದುಚೇರಿ ಹಾಗೂ ಕಾರೈಕಲ್‌ನಲ್ಲಿ ಮುಂದಿನ ನಾಲ್ಕೈದು ದಿನಗಳವರೆಗೂ ಮಳೆಯಾಗುವುದು ಖಚಿತ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉತ್ತರಾಖಂಡ, ಪೂರ್ವ ರಾಜಸ್ಥಾನ, ಮಧ್ಯ ಪ್ರದೇಶ, ವಿದರ್ಭಾ, ಛತ್ತೀಸ್‌ಗಡ, ಪಶ್ಚಿಮ ಬಂಗಾಳ, ಒಡಿಶಾ, ಅಂಡಮಾನ್ ನಿಕೋಬಾರ್, ಅಸ್ಸಾಂ ಹಾಗೂ ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಝೋರಾಂ, ತ್ರಿಪುರಾದಲ್ಲಿ ಗುಡುಗು ಮಿಂಚು ಸಹಿತ ಹೆಚ್ಚಿನ ಮಳೆಯಾಗುವುದಾಗಿ ತಿಳಿಸಿದೆ.
ದಕ್ಷಿಣದ ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ ರಾಜ್ಯಗಳು ಕೂಡ ಈ ಅವಧಿಯಲ್ಲಿ ಹೆಚ್ಚಿನ ಮಳೆ ಪಡೆಯುವುದಾಗಿ ಸೂಚನೆ ನೀಡಲಾಗಿದೆ.
ನೈಋತ್ಯ ಹಾಗೂ ಬಂಗಾಳ ಕೊಲ್ಲಿಗೆ ಹೊಂದಿಕೊಂಡ ಪ್ರದೇಶಗಳಲ್ಲಿ 40-50 ಕಿ.ಮೀ ವೇಗದಲ್ಲಿ ಮಾರುತಗಳು ಬೀಸಲಿವೆ. ಅರಬ್ಬೀ ಸಮುದ್ರದಲ್ಲಿ ಮಾರುತಗಳು ಬಲಗೊಳ್ಳಲಿದ್ದು, ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ರವಾನಿಸಲಾಗಿದೆ.
ದುರ್ಬಲಗೊಳ್ಳಲಿದೆ ಗುಲಾಬ್ ಚಂಡಮಾರುತ;
ಆಂಧ್ರದ ಕರಾವಳಿಗೆ ಮಂಗಳವಾರ ಗುಲಾಬ್ ಚಂಡಮಾರುತ ಅಪ್ಪಳಿಸಿದ್ದು, ಇದರ ಪ್ರಭಾವದಲ್ಲಿ ಮುಂದಿನ 10 ಗಂಟೆಗಳ ಕಾಲ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಗುಲಾಬ್ ಚಂಡಮಾರುತ ದುರ್ಬಲಗೊಂಡು ವಾಯುಭಾರ ಕುಸಿತವಾಗಿ ಪರಿವರ್ತನೆಯಾಗಿದೆ. ಗುಲಾಬ್ ಚಂಡಮಾರುತ ಮಂಗಳವಾರ ತೆಲಂಗಾಣದ ಭದ್ರಾಚಲಂನ ಈಶಾನ್ಯ ಭಾಗದಲ್ಲಿ ಗಂಟೆಗೆ 150 ಕಿ.ಮೀ ವೇಗವಾಗಿ ಹಾದು ಹೋಗಿದೆ. ಮಹಾರಾಷ್ಟ್ರ ಮತ್ತು ಗುಜರಾತ್ ಕರಾವಳಿ ತೀರಕ್ಕೆ ಅಪ್ಪಳಿಸಿ ತೀವ್ರತೆ ತಗ್ಗಲಿದೆ. ಸೆ.30ರಂದು ಅದು ಮತ್ತೆ ಪ್ರಬಲ ಚಂಡಮಾರುತವಾಗಿ ಮರುಹುಟ್ಟು ಪಡೆಯಲಿದೆ. ಇದು ದೇಶದ ಹಲವು ಭಾಗಗಳಲ್ಲಿ ಭಾರಿ ಮಳೆ ಸುರಿಸಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.












Click it and Unblock the Notifications