Nitin Gupta : ಭಾರತಕ್ಕೇ ಮೊದಲ ರ‍್ಯಾಂಕ್‌ ಬಂದವನಿಂದ ಈಗ ಸೊಳ್ಳೆಯ ಮೆದುಳು ಅಧ್ಯಯನ! ಯಾರೀ ನಿತಿನ್‌ ಗುಪ್ತಾ?

IIT-JEEಯಲ್ಲಿ ದೇಶಕ್ಕೆ ನಂಬರ್‌ 1 ರ‍್ಯಾಂಕ್‌ ಪಡೆದವರು ಮುಂದೆ ಯಾವ ವೃತ್ತಿ ಆಯ್ಕೆ ಮಾಡಿಕೊಳ್ಳುತ್ತಾರೆ? ಬಹುತೇಕರು ದೊಡ್ಡ ಟೆಕ್‌ ಕಂಪನಿಗಳು, ಸಾಫ್ಟ್‌ವೇರ್‌ ಕ್ಷೇತ್ರ ಅಥವಾ ವಿದೇಶಿ ಉದ್ಯೋಗದತ್ತ ಹೋಗಬಹುದು ಎಂದು ಊಹಿಸುತ್ತಾರೆ. ಆದರೆ 2000ರಲ್ಲಿ IIT-JEEಯಲ್ಲಿ ಆಲ್‌ ಇಂಡಿಯಾ ರ‍್ಯಾಂಕ್‌ 1 ಪಡೆದ ನಿತಿನ್‌ ಗುಪ್ತಾ (Nitin Gupta ) ಅವರ ಪಯಣ ಮಾತ್ರ ಸಂಪೂರ್ಣ ವಿಭಿನ್ನವಾಗಿದೆ.

IIT-JEE Topper Nitin Gupta Now Studies Mosquito Brains His Unusual Career Journey

ಅವರು ಸುಲಭವಾಗಿ ಅಮೆರಿಕಕ್ಕೆ ತೆರಳಿ ಅಲ್ಲಿ ದೊಡ್ಡ ಕೆಲಸ ಹೊಂದಿ ಐಷಾರಾಮಿ ಬದುಕು ಬದುಕಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ಬದಲಿಗೆ ಉತ್ತರ ಪ್ರದೇಶದ IIT ಕಾನ್ಪುರದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಸಂಶೋಧನೆಯ ವಿಷಯವೂ ಸಾಕಷ್ಟು ಕುತೂಹಲಕಾರಿಯಾಗಿದೆ. ಅವರು "ಸೊಳ್ಳೆಯ ಮೆದುಳು ಸೇರಿದಂತೆ ಕೀಟಗಳ ಮೆದುಳು ಮಾಹಿತಿ ಹೇಗೆ ಸಂಸ್ಕರಿಸುತ್ತದೆ ಮತ್ತು ಅದರಿಂದ ವರ್ತನೆ ಹೇಗೆ ರೂಪುಗೊಳ್ಳುತ್ತದೆ" ಎಂಬುದನ್ನು ಅಧ್ಯಯನ ಮಾಡುತ್ತಿದ್ದಾರೆ.

ಕಂಪ್ಯೂಟರ್ ಸೈನ್ಸ್‌ನಿಂದ ಮೆದುಳಿನ ವಿಜ್ಞಾನದೆಡೆಗೆ

ನಿತಿನ್‌ ಗುಪ್ತಾ ಅವರು IIT ಕಾನ್ಪುರದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಟೆಕ್‌ ಪದವಿ ಪಡೆದರು. ಕಂಪ್ಯೂಟರ್‌ಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದ ಅವರ ಆಸಕ್ತಿ ಕ್ರಮೇಣ ಜೀವಶಾಸ್ತ್ರದ ಕಡೆಗೆ ತಿರುಗಿತು. ನಂತರ ಅವರು ಅಮೆರಿಕದ ಸ್ಯಾನ್‌ ಡಿಯೆಗೋದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯಲ್ಲಿ ಬಯೋಇನ್ಫರ್ಮ್ಯಾಟಿಕ್ಸ್‌ ಮತ್ತು ಸಿಸ್ಟಮ್ಸ್‌ ಬಯಾಲಜಿಯಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು.

2009ರಲ್ಲಿ ಪಿಎಚ್‌ಡಿ ಮುಗಿಸಿದ ಬಳಿಕ ಅಮೆರಿಕದ (america) ನ್ಯಾಷನಲ್‌ ಇನ್ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ನಲ್ಲಿ ಪೋಸ್ಟ್‌ಡಾಕ್ಟರಲ್‌ ಸಂಶೋಧಕರಾಗಿ ಕೆಲಸ ಮಾಡಿದರು. ಅಲ್ಲಿ ನರಕೋಶಗಳಲ್ಲಿನ ವಿದ್ಯುತ್‌ ಚಟುವಟಿಕೆ ಮತ್ತು ನರಮಂಡಲದ ಕಾರ್ಯವಿಧಾನವನ್ನು ಅಧ್ಯಯನ ಮಾಡಿದರು. ಹೀಗೆ ಕಂಪ್ಯೂಟರ್‌ ಸೈನ್ಸ್‌ನಿಂದ ಆರಂಭವಾದ ಅವರ ಶೈಕ್ಷಣಿಕ ಪಯಣ ನಿಧಾನವಾಗಿ ನರ ವಿಜ್ಞಾನ ಅಥವಾ ನ್ಯೂರೋಸೈನ್ಸ್‌ ಕಡೆಗೆ ತಿರುಗಿತು.

2014ರಲ್ಲಿ ಭಾರತಕ್ಕೆ ವಾಪಸ್‌

ವಿದೇಶದಲ್ಲಿ ಉನ್ನತ ಶಿಕ್ಷಣ ಮತ್ತು ಸಂಶೋಧನೆಯ (research) ಅವಕಾಶಗಳಿದ್ದರೂ ನಿತಿನ್‌ ಗುಪ್ತಾ ಅವರು 2014ರಲ್ಲಿ ಭಾರತಕ್ಕೆ ಮರಳಿದರು. ಅವರು ಐಐಟಿ ಕಾನ್ಪುರದ Department of Biological Sciences and Bioengineeringಗೆ ಪ್ರಾಧ್ಯಾಪಕರಾಗಿ ಸೇರಿದರು.

ಇಂದು ಅವರ ಸಂಶೋಧನೆಯ ಪ್ರಮುಖ ವಿಷಯವೆಂದರೆ ನರಮಂಡಲವು ಹೊರಗಿನ ಮಾಹಿತಿಯನ್ನು ಹೇಗೆ ಸ್ವೀಕರಿಸುತ್ತದೆ, ಅದನ್ನು ಹೇಗೆ ಸಂಸ್ಕರಿಸುತ್ತದೆ ಮತ್ತು ಕೊನೆಗೆ ಅದಕ್ಕೆ ತಕ್ಕಂತೆ ಜೀವಿಯ ವರ್ತನೆ ಹೇಗೆ ಬದಲಾಗುತ್ತದೆ ಎಂಬುದು.

ಸೊಳ್ಳೆ ಎಂದರೆ ಸಾಮಾನ್ಯವಾಗಿ ನಮಗೆ ಕಿರಿಕಿರಿ ಉಂಟುಮಾಡುವ ಕೀಟ. ಆದರೆ ವಿಜ್ಞಾನಿಗಳ ಪಾಲಿಗೆ ಅದರ ನರಮಂಡಲ ಸಾಕಷ್ಟು ಆಸಕ್ತಿದಾಯಕವಾಗಿದೆ. ಸೊಳ್ಳೆಗಳು ತಮ್ಮ ಆತಿಥೇಯರನ್ನು, ಅಂದರೆ ಮನುಷ್ಯರು ಸೇರಿದಂತೆ ಇತರ ಜೀವಿಗಳನ್ನು ಹುಡುಕಲು ವಾಸನೆಯಂತಹ ಸಂವೇದನಾ ಮಾಹಿತಿಯನ್ನು ಬಳಸುತ್ತವೆ.

ನಿತಿನ್‌ ಗುಪ್ತಾ ಅವರ ಪ್ರಯೋಗಾಲಯವು ಸೊಳ್ಳೆಗಳು ಮತ್ತು ಇತರ ಕೀಟಗಳು ವಾಸನೆಗಳನ್ನು ಹೇಗೆ ಗುರುತಿಸುತ್ತವೆ, ಅವುಗಳಿಂದ ಯಾವ ರೀತಿಯ ನರ ಸಂಕೇತಗಳು ಉಂಟಾಗುತ್ತವೆ ಮತ್ತು ಆ ಸಂಕೇತಗಳು ಅಂತಿಮವಾಗಿ ನಿರ್ದಿಷ್ಟ ವರ್ತನೆಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಅಧ್ಯಯನ ಮಾಡುತ್ತದೆ.

ಸೊಳ್ಳೆಯ ಮೆದುಳಿನಿಂದ ಮನುಷ್ಯನ ಮೆದುಳಿನವರೆಗೆ

ಸೊಳ್ಳೆಯಂತಹ ಸಣ್ಣ ಜೀವಿಯ ಮೆದುಳನ್ನು ಅಧ್ಯಯನ ಮಾಡುವುದರಿಂದ ಮನುಷ್ಯನ ಮೆದುಳಿನ ಬಗ್ಗೆ ಏನು ತಿಳಿಯಬಹುದು ಎಂಬ ಪ್ರಶ್ನೆ ಸಹಜ. ನರಮಂಡಲವು ಹೊರಗಿನಿಂದ ಬರುವ ಮಾಹಿತಿಯನ್ನು ಸ್ವೀಕರಿಸಿ, ಅದನ್ನು ಸಂಸ್ಕರಿಸಿ, ನಂತರ ಒಂದು ನಿರ್ದಿಷ್ಟ ಪ್ರತಿಕ್ರಿಯೆಯನ್ನು ನೀಡುವ ವಿಧಾನವನ್ನು ಅರ್ಥಮಾಡಿಕೊಳ್ಳುವುದು ನರ ವಿಜ್ಞಾನದ ಪ್ರಮುಖ ಕ್ಷೇತ್ರವಾಗಿದೆ.

ಕೀಟಗಳ ನರಮಂಡಲ ಸರಳವಾಗಿರುವುದರಿಂದ, ಕೆಲವು ಮೂಲಭೂತ ನರ ಪ್ರಕ್ರಿಯೆಗಳನ್ನು ಅರ್ಥಮಾಡಿಕೊಳ್ಳಲು ಅವು ಉಪಯುಕ್ತ ಮಾದರಿಗಳಾಗಬಹುದು. ವಿಶೇಷವಾಗಿ ವಾಸನೆ, ಸಂವೇದನೆ ಮತ್ತು ವರ್ತನೆಯ ನಡುವಿನ ಸಂಬಂಧವನ್ನು ಅಧ್ಯಯನ ಮಾಡಲು ಸೊಳ್ಳೆಗಳು ಮತ್ತು ಇತರ ಕೀಟಗಳು ವಿಜ್ಞಾನಿಗಳಿಗೆ ಆಸಕ್ತಿದಾಯಕವಾಗಿವೆ.

ನಿತಿನ್‌ ಗುಪ್ತಾ ಅವರ ಸಂಶೋಧನಾ ಕೆಲಸಕ್ಕೆ ಹಲವು ಗೌರವಗಳು ಲಭಿಸಿವೆ. ಅವರಿಗೆ Innovative Young Biotechnologist Award, Swarnajayanti Fellowship ಮತ್ತು CNR Rao Faculty Award ಸೇರಿದಂತೆ ಹಲವು ಪ್ರಶಸ್ತಿ ಹಾಗೂ ಫೆಲೋಶಿಪ್‌ಗಳು ದೊರೆತಿವೆ.

ಐಐಟಿಯಲ್ಲಿ ಓದಿದವರು ಕೇವಲ ಸಾಫ್ಟ್‌ವೇರ್‌, ತಂತ್ರಜ್ಞಾನ ಅಥವಾ ಕಾರ್ಪೊರೇಟ್‌ ಕ್ಷೇತ್ರದಲ್ಲೇ ವೃತ್ತಿ ಮಾಡಬೇಕು ಎಂಬುದೇನಿಲ್ಲ. ಒಂದು ಕ್ಷೇತ್ರದಲ್ಲಿ ಪಡೆದ ಶಿಕ್ಷಣ ಮತ್ತೊಂದು ಕ್ಷೇತ್ರದ ಕುತೂಹಲಕ್ಕೆ ದಾರಿ ಮಾಡಿಕೊಡಬಹುದು. ಕಂಪ್ಯೂಟರ್‌ ಸೈನ್ಸ್‌ನಲ್ಲಿ ಬಿಟೆಕ್‌, ಅಮೆರಿಕದಲ್ಲಿ ಬಯೋಇನ್ಫರ್ಮ್ಯಾಟಿಕ್ಸ್‌ ಮತ್ತು ಸಿಸ್ಟಮ್ಸ್‌ ಬಯಾಲಜಿಯಲ್ಲಿ ಪಿಎಚ್‌ಡಿ, ಬಳಿಕ ನರ ವಿಜ್ಞಾನ ಸಂಶೋಧನೆ... ಹೀಗೆ ನಿತಿನ್‌ ಗುಪ್ತಾ ಅವರ ಪಯಣ ಹಲವು ಕ್ಷೇತ್ರಗಳನ್ನು ದಾಟಿ ಇಂದು ಸೊಳ್ಳೆಯ ಮೆದುಳು ಹೇಗೆ ಕೆಲಸ ಮಾಡುತ್ತದೆ ಎಂಬ ಪ್ರಶ್ನೆಯವರೆಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+