ಚುನಾವಣೆಯಲ್ಲಿ ಗೆದ್ದರೆ ಎಲ್ಲಾ ಅವಿವಾಹಿತರಿಗೆ ಮದುವೆ ಭಾಗ್ಯ ಫಿಕ್ಸ್, ಎಲ್ಲಿ!
ಮಹಾರಾಷ್ಟ್ರದಲ್ಲಿ ಮತದಾರರನ್ನು ಸೆಳೆಯುವುದಕ್ಕೆ ಅಲ್ಲಿನ ರಾಜಕೀಯ ಪಕ್ಷಗಳು ಹಾಗೂ ರಾಜಕೀಯ ನಾಯಕರು ನಡೆಸುತ್ತಿರುವ ಸರ್ಕಸ್‌ಗಳು ಒಂದೆರಡಲ್ಲ. ಮಹಾರಾಷ್ಟ್ರದಲ್ಲಿ ಇದೇ 20ಕ್ಕೆ ವಿಧಾನಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಹೈಕಮಾಂಡ್‌ನ ಘಾಟಾನುಘಟಿ ನಾಯಕರು ಈಗಾಗಲೇ ಅಲ್ಲಿ ಬೀಡು ಬಿಟ್ಟಿದ್ದು. ಅಬ್ಬರದ ಚುನಾವಣೆ ಪ್ರಚಾರ ನಡೆದಿದೆ. ಈ ಬಾರಿ ಮಹಾಯುತಿ (ಬಿಜೆಪಿ ನೇತೃತ್ವದ ಸಮ್ಮಿಶ್ರ ಸರ್ಕಾರ) ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸುವುದರ ಮೂಲಕ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಆದರೆ, ಈ ಬಾರಿ ಮಹಾರಾಷ್ಟ್ರದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರದಲ್ಲಿ ನವೆಂಬರ್ 20ಕ್ಕೆ ಒಂದೇ ಹಂತದಲ್ಲಿ 288 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ. ಶಿವಸೇನಾ ಹಾಗೂ ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಇಬ್ಭಾಗವಾದ ಮೇಲೆ ಮೊದಲ ಬಾರಿ ಚುನಾವಣೆ ಎದುರಿಸುತ್ತಿವೆ. ಮಹಾರಾಷ್ಟ್ರದಲ್ಲಿ ಈಗಾಗಲೇ ಕಾಂಗ್ರೆಸ್ ಮೈತ್ರಿ ಪಕ್ಷವು ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದೆ. ಬಿಜೆಪಿ ಸಹ ಭರ್ಜರಿ ಚುನಾವಣೆ ಪ್ರಣಾಳಿಕೆಯನ್ನೇ ಬಿಡುಗಡೆ ಮಾಡಿದೆ. ಇದರ ನಡುವೆ ಚುನಾವಣೆಯಲ್ಲಿ ಪಕ್ಷದ ನಾಯಕರೊಬ್ಬರು ಇಲ್ಲಿಯ ವರೆಗೆ ಮದುವೆಯಾಗದೆ ಯುವಕರಿಗೆ ಮದುವೆ ಮಾಡಿಸುವ ಭರವಸೆ ನೀಡಿದ್ದಾರೆ.

ಮಹಾರಾಷ್ಟ್ರ ಚುನಾವಣೆಯ ಪ್ರಚಾರ ಕಣ ರಂಗೇರುತ್ತಿದ್ದು. ಪ್ರಮುಖ ಪಕ್ಷಗಳು ಭರ್ಜರಿ ಆಫರ್‌ಗಳನ್ನು ಜನರ ಮುಂದೆ ಇರಿಸಿದ್ದರೆ, ಪಕ್ಷದ ಅಭ್ಯರ್ಥಿಗಳು ಸಹ ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಭರವಸೆಗಳನ್ನೇ ಕೊಡುತ್ತಿದ್ದಾರೆ. ಇದೀಗ ಎನ್ಸಿಪಿ(ಎಸ್ಪಿ) ಪಕ್ಷದ ಅಭ್ಯರ್ಥಿ ರಾಜೇಸಾಹೇಬ್ ದೇಶಮುಖ್ ಎನ್ನುವವರು ಕೊಟ್ಟಿರುವ ಆಫರ್ ಜನರಲ್ಲಿ ಕುತೂಹಲ ಮೂಡಿಸಿದೆ. ಈ ಬಾರಿಯ ಮಹಾರಾಷ್ಟ್ರ ಚುನಾವಣೆಯಲ್ಲಿ ಗೆದ್ದರೆ, ಕ್ಷೇತ್ರದಲ್ಲಿರುವ ಹೆಣ್ಣು ಸಿಗದ ಇರುವ ಎಲ್ಲಾ ಯುವಕರಿಗೂ ಮದುವೆ ಮಾಡಿಸ್ತೀನಿ ಅಂತ ಅವರು ಭರವಸೆ ಕೊಟ್ಟಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪರ್ಲಿ ವಿಧಾನಸಭಾ ಕ್ಷೇತ್ರದಿಂದ ರಾಜೇಸಾಹೇಬ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಅವರು, ಮರಾಠವಾಡದ ಗ್ರಾಮೀಣ ಭಾಗದಲ್ಲಿ ವಯಸ್ಸಿಗೆ ಬಂದ ಯುವಕರು, ವಧು ಸಿಗದೆ ಬ್ರಹ್ಮಚಾರಿಯಾಗಿ ಉಳಿಯುತ್ತಿದ್ದಾರೆ. ಇದು ನೋವಿನ ಸಂಗತಿ ಎಂದಿದ್ದಾರೆ. ಅವರ ಮಾತುಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಈ ಭಾಗದಲ್ಲಿ ವಿದ್ಯಾವಂತ ಯುವಕರು ಇದ್ದಾರೆ. ಆದರೆ, ಅವರ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ಅವರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಇದಕ್ಕೆ ಪ್ರತಿಸ್ಪರ್ಧಿ ಹಾಗೂ ಅಧಿಕಾರದಲ್ಲಿ ಇರುವ ಧಜಂಜಯ್ ಮುಂಡೆಯೇ ಕಾರಣ ಎಂದು ಅವರು ದೂರಿದ್ದಾರೆ. ಇಲ್ಲಿನ ಉಸ್ತುವಾರಿ ಸಚಿವರೂ ಆಗಿರುವ ಅವರು, ಉದ್ಯೋಗ ಹಾಗೂ ಉದ್ಯಮ ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಹೀಗಾಗಿ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗದೆ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇದರಿಂದ ಅವರಿಗೆ ಕನ್ಯೆ ಸಿಗುತ್ತಿಲ್ಲ ಎಂದು ಅವರು ದೂರಿದ್ದಾರೆ.












Click it and Unblock the Notifications