Parineeti Chopra: ನಾನೆಂದಿಗೂ ರಾಜಕಾರಣಿಯನ್ನು ಮದುವೆಯಾಗಲ್ಲ: ಪರಿಣಿತಿ ಚೋಪ್ರಾ ಹಳೆ ವಿಡಿಯೋ ವೈರಲ್
ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡರ ಜೊತೆ ಇಂದು (ಮೇ 13) ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ದೆಹಲಿಯಲ್ಲಿ ಕಾಪುರ್ತಾಲ ನಿವಾಸದಲ್ಲಿ ಈ ನಿಶ್ಚಿತಾರ್ಥ ಸಮಾರಂಭವು ಸಂಜೆ 5 ಗಂಟೆಯಿಂದ ಆರಂಭವಾಗಿದೆ. ರಾತ್ರಿ ಸುಮಾರು 8 ಗಂಟೆಗೆ ಇಬ್ಬರೂ ಕೂಡಾ ಉಂಗುರವನ್ನು ಹಾಕುವ ಮೂಲಕ ನಿಶ್ಚಿತಾರ್ಥ ವಿಧಿ ನಡೆಸಲಿದ್ದಾರೆ. ಈ ನಡುವೆ ಪರಿಣಿತಿ ಚೋಪ್ರಾರ ಹಳೆಯ ವಿಡಿಯೋ ವೈರಲ್ ಆಗಿದೆ.
ಪರಿಣಿತಿ ಚೋಪ್ರಾ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾರ ಸಂದರ್ಶನದ ಹಳೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ. ಇಬ್ಬರ ಸಿನಿಮಾ ಜಬರಿಯಾ ಜೋಡಿ ಬಗ್ಗೆ ಬಾಲಿವುಡ್ ಹಂಗಾಮಾದಲ್ಲಿ ನಡೆದ ಸಂದರ್ಶನ ಇದಾಗಿದೆ. ಈ ವಿಡಿಯೋ ವೈರಲ್ ಆಗಿರುವುದು ಅಷ್ಟು ವಿಶೇಷವೇನು ಎಂದು ನಿಮಗೆ ಅನಿಸಬಹುದು. ಆದರೆ ಈ ವಿಡಿಯೋದಲ್ಲಿ "ನಾನು ಎಂದಿಗೂ ರಾಜಕಾರಣಿಯನ್ನು ವಿವಾಹವಾಗಲ್ಲ," ಎಂದು ಪರಿಣಿತಿ ಹೇಳಿರುವುದು ಕಂಡು ಬಂದಿದೆ.

ನಾನು ಎಂದಿಗೂ ಕೂಡಾ ರಾಜಕಾರಣಿಯನ್ನು ವಿವಾಹವಾಗಲಾರೆ!
ಹೌದು, ಬಾಲಿವುಡ್ ಹಂಗಾಮಾದಲ್ಲಿ ಕಾರ್ಯಕ್ರಮ ನಿರ್ವಾಹಕ ಫರಿದೂನ್ ಶಹರ್ಯಾರ್ ಪರಿಣಿತಿ ಚೋಪ್ರಾ ಬಳಿ ತಾನು ವಿವಾಹವಾಗಲು ಬಯಸುವ ಹುಡುಗನ ಬಗ್ಗೆ ಪ್ರಶ್ನಿಸಿದ್ದಾರೆ. ಈ ವೇಳೆಯ ವಿಡಿಯೋ ಕ್ಲಿಪ್ ಅನ್ನು ಫರಿದೂನ್ ಶಹರ್ಯಾರ್ ಹಂಚಿಕೊಂಡಿದ್ದಾರೆ. "ನಾವು ರಾಜಕಾರಣಿಯನ್ನು ವಿವಾಹವಾಗಲು ಬಯಸಲ್ಲ. ನಾನು ಎಂದಿಗೂ ಕೂಡಾ ರಾಜಕಾರಣಿಯನ್ನು ವಿವಾಹವಾಗಲು ಬಯಸಲ್ಲ," ಎಂದು ಪರಿಣಿತಿ ಚೋಪ್ರಾ ಕೆಲವು ವರ್ಷಗಳ ಹಿಂದೆ ಹೇಳಿದ್ದರು ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಯಾವ ರಾಜಕಾರಣಿಯನ್ನು ಪರಿಣಿತಿ ಚೋಪ್ರಾ ವಿವಾಹವಾಗಲು ಬಯಸುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಚೋಪ್ರಾ, "ಸಮಸ್ಯೆ ಏನೆಂದರೆ ನಾನು ಯಾವುದೇ ರಾಜಕಾರಣಿಯನ್ನು ವಿವಾಹವಾಗಲು ಬಯಸಲ್ಲ. ರಾಜಕಾರಣಿಗಳನ್ನು ವಿವಾಹವಾಗುವುದಾದರೆ ಹಲವಾರು ಉತ್ತಮ ಆಯ್ಕೆಗಳು ಇದೆ. ಆದರೆ ನಾನು ಎಂದಿಗೂ ಕೂಡಾ ಯಾವುದೇ ರಾಜಕಾರಣಿಯನ್ನು ವಿವಾಹವಾಗಲು ಬಯಸುವುದಿಲ್ಲ," ಎಂದು ಹೇಳಿದ್ದಾರೆ.
ಈ ವಿಡಿಯೋ ಈಗ ಪರಿಣಿತಿ ಚೋಪ್ರಾರ ಎಎಪಿ ನಾಯಕ ರಾಘವ್ ಚಡ್ಡರನ್ನು ವಿವಾಹವಾಗುತ್ತಿರುವಾಗ ವೈರಲ್ ಆಗಿದೆ. ಹಲವಾರು ಮಂದಿ ಪರಿಣಿತಿ ಚೋಪ್ರಾರನ್ನು ಹಾಸ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋವನ್ನು ಹಂಚಿಕೊಂಡು ಹಲವಾರು ಮಂದಿ ತಮಾಷೆ ಮಾಡುತ್ತಿದ್ದಾರೆ. ಇನ್ನು ಕೆಲವರು "ಪರಿಣಿತಿ ಚೋಪ್ರಾ ಜೀವನದಲ್ಲಿ ಎಂದಿಗೂ ಕೂಡಾ ಇಲ್ಲ ಎಂದು ಹೇಳಲಾಗದ ಸ್ಥಿತಿ ಬಂದಿದೆ," ಎಂದು ಹಾಸ್ಯ ಮಾಡಿದ್ದಾರೆ.
ಪರಿಣಿತಿ ಚೋಪ್ರಾ ನಿಶ್ಚಿತಾರ್ಥ
ಪರಿಣಿತಿ ಚೋಪ್ರಾ ನಿಶ್ಚಿತಾರ್ಥಕ್ಕೆ ಸುಮಾರು 150 ಸ್ನೇಹಿತರು, ಕುಟುಂಬ ಸದಸ್ಯರು ಭೇಟಿ ನೀಡಲಿದ್ದಾರೆ. ಈಗಾಗಲೇ ಅತಿಥಿಗಳು ಆಗಮಿಸುತ್ತಿದ್ದಾರೆ. 8 ಗಂಟೆಗೆ ಸಮಾರಂಭ ನಡೆಯಲಿದೆ. ವಿವಾಹ ದಿನವನ್ನು ಈವರೆಗೂ ಘೋಷಣೆ ಮಾಡಲಾಗಿಲ್ಲ. ಆದರೆ ಈ ವರ್ಷದ ಅಂತ್ಯದಲ್ಲಿ ವಿವಾಹ ನಡೆಯಬಹುದು ಎಂದು ಅಂದಾಜು ಮಾಡಲಾಗಿದೆ. ಪ್ರಖ್ಯಾತ ಡ್ರೆಸ್ ಡಿಸೈನರ್ ಮನೀಶ್ ಮಲ್ಹೋತ್ರಾರ ಡಿಸೈನ್‌ನ ಬಟ್ಟೆಯನ್ನು ಇಂದು ಪರಿಣಿತಿ ತೊಡಲಿದ್ದಾರೆ. ಈ ನಿಶ್ಚಿತಾರ್ಥಕ್ಕೆ ಮಲ್ಹೋತ್ರಾ ಈಗಾಗಲೇ ಆಗಮಿಸಿದ್ದಾರೆ.












Click it and Unblock the Notifications