ಟಿವಿ ಸೌಂಡ್ ವಿಚಾರಕ್ಕೆ ಗಂಡನನ್ನೇ ಕೊಲೆ ಮಾಡಿದ ಪತ್ನಿ
ಗುಂಟೂರು, ಫೆಬ್ರವರಿ 20: ಸಾಮಾನ್ಯವಾಗಿ ದೊಡ್ಡ ದೊಡ್ಡ ಡೀಲ್ ವಿಚಾರವಾಗಿ ಕೊಲೆ ಮಾಡಿರುವ ಘಟನೆಗಳ ಬಗ್ಗೆ ಕೇಳಿರುತ್ತೇವೆ. ಆದರೆ, ಇದೀಗ ಟಿವಿ ಸೌಂಡ್ ವಿಚಾರವಾಗಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಪತ್ನಿಯೇ ಗಂಡನಿಗೆ ಚಾಕು ಇರಿದು ಕೊಂದಿರುವ ವಿಚಿತ್ರ ಘಟನೆ ಆಂಧ್ರಪ್ರದೇಶದ ಗಂಟೂರಿನಲ್ಲಿ ನಡೆದಿದೆ.
ಪೊಲೀಸರ ಮಾಹಿತಿ ಪ್ರಕಾರ, ಟಿವಿಯ ವಾಲ್ಯೂಮ್ ಕಡಿಮೆ ಮಾಡುವ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಮಾತಿನ ಚಕಮಕಿ ಆರಂಭವಾಗಿದೆ. ಬಳಿಕ ಇದು ಉಗ್ರ ಸ್ವರೂಪ ಪಡೆದಿದ್ದು, ಈ ವೇಳೆ ಆಕ್ರೋಶಗೊಂಡ ಪತ್ನಿ ಗಂಡನ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಆರಂಭಿಸಿದ್ದಾರೆ. ಮೃತ ವ್ಯಕ್ತಿಯನ್ನು 27 ವರ್ಷದ ಶೇಖ್ ಅಹ್ಮದ್ ಎಂದು ಗುರುತಿಸಲಾಗಿದೆ. ಅವರು ಎಸಿ ಮೆಕಾನಿಕ್ ಆಗಿದ್ದರು. ಅಹ್ಮದ್ ಮತ್ತು ಅವರ ಪತ್ನಿ ಇಬ್ಬರೂ ಮಂಗಲಗಿರಿಯ ಟಿಡ್ಕೋ ವಸತಿ ಕಾಲೋನಿಯಲ್ಲಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.
ಟಿವಿ ಸೌಂಡ್ ಕಡಿಮೆ ಮಾಡುವ ವಿಚಾರಕ್ಕೆ ಕೊಲೆ
ಪೊಲೀಸರ ಮಾಹಿತಿ ಪ್ರಕಾರ, ಟಿವಿ ಸೌಂಡ್ ಕಡಿಮೆ ಮಾಡಬೇಕು ಎಂದು ಗಂಡ ಕೇಳಿದ್ದಾರೆ. ಆಗ ಗಂಡ-ಹೆಂಡತಿ ನಡುವೆ ವಾಗ್ವಾದ ಉಂಟಾಯಿತು. ಈ ವೇಳೆ ಆಕ್ರೋಶಗೊಂಡ ಪತ್ನಿ ಚಾಕುವಿನಿಂದ ಗಂಡನಿಗೆ ಇರಿದಿದ್ದಾಳೆ. ಘಟನೆಯ ನಂತರ ಸ್ಥಳೀಯರು ಗಾಯಗೊಂಡ ಅಹ್ಮದ್ ಅವರನ್ನು ತಕ್ಷಣವೇ ವಿಜಯವಾಡದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮಾಜಿ ಪತ್ನಿಗೆ ಚಾಕು ಇರಿತ
ಫೆಬ್ರವರಿ ತಿಂಗಳ ಆರಂಭದಲ್ಲಿ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಗ್ರೀನ್ ಸಿಟಿ ಕಾಲೋನಿಯೊಂದರ ಅಪಾರ್ಟ್‌ಮೆಂಟ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಮಾಜಿ ಪತ್ನಿಗೆ ಚಾಕು ಇರಿದು ಕೊಂದಿರುವ ಘಟನೆ ನಡೆದಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ಮೃತ ಮಹಿಳೆ ವಿಚ್ಛೇದನ ನೀಡಿ ಮತ್ತೊಬ್ಬ ವ್ಯಕ್ತಿಯನ್ನು ವಿವಾಹವಾಗಿದ್ದಳು ಎಂದು ತಿಳಿದುಬಂದಿದ್ದು, ಇದೇ ಕಾರಣದಿಂದ ಈ ಹತ್ಯೆ ನಡೆದಿರುವುದಾಗಿ ವರದಿಯಾಗಿದೆ.
ಘಟನೆಯ ಮಾಹಿತಿ ತಿಳಿದ ವನಸ್ಥಲಿಪುರಂ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಈ ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದರು. ಇನ್ನೂ ಈ ಕುರಿತು ಮಾಧ್ಯಮದವರ ಬಳಿ ಮಾತನಾಡಿದ ಪೊಲೀಸ್ ಅಧಿಕಾರಿ, ಘಟನೆಯ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದರು.
ಆಸ್ತಿ ವಿವಾದಕ್ಕೆ ಕೊಲೆ
ಮತ್ತೊಂದೆಡೆ ಇದೇ ತಿಂಗಳ ಆರಂಭದಲ್ಲಿ ತೆಲಂಗಾಣದ ಮೊಯಿನಾಬಾದ್‌ನಲ್ಲಿ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಿಳಾ ವಕೀಲೆಯನ್ನು ಅವರ ಸಹೋದರ ಹಾಗೂ ಅವನ ಸಹಚರರು ಹತ್ಯೆಗೈದ ಘಟನೆ ನಡೆದಿದೆ. ಈ ಕುರಿತು ಚೆವೆಲ್ಲಾ ನ್ಯಾಯಾಲಯದಲ್ಲಿ ವಕೀಲರು ವಾದ ಮಂಡಿಸಿದ್ದು, ಜಿ.ಸ್ವಪ್ನ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸರ ಮಾಹಿತಿ ಪ್ರಕಾರ, ಫೆಬ್ರವರಿ 4ರಂದು ಕೇತಿರೆಡ್ಡಿಪಳ್ಳಿ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. ಆ ದಿನ ಸ್ವಪ್ನ ಅವರು ತಮ್ಮ ತಾಯಿಯೊಂದಿಗೆ ತಮಗೆ ಸಂಬಂಧಿಸಿದ ಭೂಮಿಯನ್ನು ಪರಿಶೀಲಿಸಲು ತೆರಳಿದ್ದರು.
ಆ ವೇಳೆ ಸ್ವಪ್ನ ಅವರ ಹಿರಿಯ ಸಹೋದರ ಜಿ.ರಾಜು ಮತ್ತು ಇತರ ಮೂವರು ಸೇರಿ, ಕೇತಿರೆಡ್ಡಿಪಳ್ಳಿ ಗ್ರಾಮದ ಸರ್ವೇ ನಂ. 339ರಲ್ಲಿ ಇರುವ ವಿವಾದಿತ ನಾಲ್ಕು ಏಕರೆ ಭೂಮಿಯಲ್ಲಿ ಅವರ ಪಾಲನ್ನು ಕಬಳಿಸುವ ಉದ್ದೇಶದಿಂದ ಸಂಚು ರೂಪಿಸಿ ಹತ್ಯೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications