Human finger in ice cream: ಐಸ್‌ಕ್ರೀಂನಲ್ಲಿ ಸಿಕ್ಕಿದ್ದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವವರ ಹೆಬ್ಬೆರಳು!
ನವದೆಹಲಿ, ಜೂನ್. 28: ಇತ್ತೀಚೆಗೆ ಮಹಾರಾಷ್ಟ್ರದ ಪುಣೆಯ ಐಸ್‌ಕ್ರೀಂ ಫ್ಯಾಕ್ಟರಿ ಸಕತ್ ಸದ್ದು ಮಾಡಿತ್ತು. ವೈದ್ಯರೊಬ್ಬರು ಖರೀದಿಸಿದ್ದ ಐಸ್ ಕ್ರೀಂನಲ್ಲಿ ಮಾನವನ ಬೆರಳು ಪತ್ತೆಯಾಗಿತ್ತು. ಈಗ ಆ ಹೆಬ್ಬೆರಳು ಯಾರದ್ದು ಎಂಬುದು ಡಿಎನ್‌ಎ ಪರೀಕ್ಷೆಯಿಂದ ತಿಳಿದು ಬಂದಿದೆ.
ಪುಣೆಯ ಇಂದಾಪುರದಲ್ಲಿರುವ ಐಸ್ ಕ್ರೀಮ್ ಕಂಪನಿಯ ಕಾರ್ಖಾನೆಯ ಕೆಲಸಗಾರನಿಗೆ ಆ ಹೆಬ್ಬೆರಳು ಸೇರಿದ್ದು ಎಂದು ಡಿಎನ್‌ಎ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಲಾಡ್ ಪೊಲೀಸರಿಗೆ ಫೊರೆನ್ಸಿಕ್ ವರದಿ ಬಂದಿದ್ದು, ಬೆರಳು 24 ವರ್ಷದ ಓಂಕಾರ್ ಪೋಟೆ ಅವರದ್ದು ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಸದ್ಯ ಕಾರ್ಖಾನೆಯ ಕಾರ್ಮಿಕರಿಗೆ ನೋಟಿಸ್ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.

ಕಾರ್ಮಿಕನಿಗೆ ಇಲ್ಲ ಯಾವುದೇ ಕಾಯಿಲೆ
ಪೊಲೀಸರು ಕಳೆದ ಶನಿವಾರ ಎಲ್ಲಾ ಹಣ್ಣು ಮಾರಾಟ ಮಾಡುವವರು ಮತ್ತು ಆಪರೇಟರ್‌ಗಳಿಂದ ರಕ್ತದ ಮಾದರಿಗಳನ್ನು ಸಂಗ್ರಹಿಸಿದ್ದರು. ಕೆಲಸಗಾರರಿಗೆ ಯಾವುದಾದರೂ ಪ್ರಮುಖ ಕಾಯಿಲೆಗಳಿವೆಯೇ ಎಂದು ನಿರ್ಧರಿಸಲು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದರು. ಸೋಮವಾರ, ಪೊಲೀಸರಿಗೆ ರಕ್ತ ಪರೀಕ್ಷೆಯ ಫಲಿತಾಂಶ ಸಿಕ್ಕಿದ್ದು, ಕಾರ್ಮಿಕನಿಗೆ ಯಾವುದೇ ಕಾಯಿಲೆಯಿಲ್ಲ ಎಂಬುದನ್ನು ದೃಢಪಡಿಸಿದೆ.
ಜೂನ್ 12 ರಂದು, ಮಲಾಡ್ ನಿವಾಸಿ ಡಾ ಬ್ರೆಂಡನ್ ಫೆರಾವೊ ತಾವು ಖರೀದಿಸಿದ ಐಸ್ ಕ್ರೀಂನಲ್ಲಿ ಬೆರಳು ಸಿಕ್ಕಿತ್ತು. ಇದನ್ನು ನೋಡಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಜೂನ್ 13 ರಂದು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 272 (ಮಾರಾಟಕ್ಕೆ ಉದ್ದೇಶಿಸಲಾದ ಆಹಾರ ಅಥವಾ ಪಾನೀಯದ ಕಲಬೆರಕೆ), 273 (ಹಾನಿಕಾರಕ ಆಹಾರ ಅಥವಾ ಪಾನೀಯದ ಮಾರಾಟ) ಮತ್ತು 336 (ಇತರರ ಜೀವ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಕಾಯ್ದೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸರು ನಂತರ ಯಮ್ಮೋ ಐಸ್ ಕ್ರೀಮ್‌ಗೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಪೊಲೀಸರು ಐದು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ತಂಡವೊಂದು ಐಸ್ ಕ್ರೀಂ ತಯಾರಿಸುತ್ತಿದ್ದ ಇಂದಾಪುರ ಕಾರ್ಖಾನೆಯನ್ನು ತಲುಪಿತು. ಇಂದಾಪುರದ ನ್ಯಾಚುರಲ್ ಡೈರಿ ಕಂಪನಿಯಲ್ಲಿ ಡ್ರೈ ಫ್ರೂಟ್ ಫೀಡರ್ ಯಂತ್ರದಲ್ಲಿ 24 ವರ್ಷದ ಕಾರ್ಮಿಕನ ಬೆರಳು ತುಂಡಾಗಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ.
ಐಸ್ ಕ್ರೀಂನಲ್ಲಿ ಸಿಕ್ಕ ಬೆರಳು ಈ ಕಾರ್ಮಿಕನದ್ದು ಎಂದು ಪೊಲೀಸರು ಶಂಕಿಸಿದ್ದಾರೆ. ಡಿಎನ್ಎ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಯಿತು. ವರದಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜೂನ್ 27 ರಂದು, ಕೋನ್‌ನಲ್ಲಿ ತುಂಡರಿಸಿದ ಮಾನವ ಹೆಬ್ಬೆರಳು ಕಾರ್ಮಿಕನದ್ದು ಎಂದು ದೃಢಪಡಿಸುವ ವರದಿ ಪೊಲೀಸರಿಗೆ ಸಿಕ್ಕಿದೆ.
ಒಂದು ತಿಂಗಳ ಹಿಂದೆ ಐಸ್ ಕ್ರೀಮ್ ತಯಾರಿಸಲಾಗಿದೆ. ಉತ್ಪಾದನೆಯ ನಂತರ, ಅದನ್ನು ಹಡಪ್ಸರ್‌ನಲ್ಲಿರುವ ಗೋಡೌನ್‌ಗೆ ಸಾಗಿಸಲಾಗಿತ್ತು, ನಂತರ ಸಾಕಿನಾಕಾಗೆ ಮತ್ತು ನಂತರ ಭಿವಂಡಿಗೆ ಅಂತಿಮವಾಗಿ ಮಲಾಡ್ ಗೋಡೌನ್‌ಗೆ ತಲುಪಿ ಡಾ ಫೆರಾವೊಗೆ ತಲುಪಿಸಲಾಯಿತು. ಈ ಬಗ್ಗೆ ಪೊಲೀಸರು ಐದು ಸ್ಥಳಗಳಲ್ಲಿ ತನಿಖೆ ನಡೆಸಿದ್ದಾರೆ. ಕಾರ್ಮಿಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಈಗಾಗಲೇ ಪುಣೆ ಮೂಲದ ಐಸ್‌ಕ್ರೀಂ ತಯಾರಕರ ಪರವಾನಗಿಯನ್ನು ತನಿಖೆಗಾಗಿ ಅಮಾನತುಗೊಳಿಸಿದೆ. ಕಂಪನಿಯು ಈ ಹಿಂದೆ ವಿಷಯವನ್ನು ಕೂಲಂಕಷವಾಗಿ ತನಿಖೆ ಮಾಡಲು ಅಧಿಕಾರಿಗಳಿಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಮತ್ತು ಬೆಂಬಲಿಸುತ್ತೇವೆ ಎಂದು ಪ್ರಕಟಣೆ ಹೊರಡಿಸಿತ್ತು.












Click it and Unblock the Notifications