Union Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯದ ಸುಳಿವು, ಭಾರೀ ಚರ್ಚೆ!
Union Budget 2025: ಕೇಂದ್ರ ಬಿಜೆಪಿ ಸರ್ಕಾರವು ಫೆಬ್ರವರಿ 1ಕ್ಕೆ ಬಜೆಟ್ ಮಂಡನೆ ಮಾಡಲಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸಲಿದ್ದಾರೆ. ಈಗಾಗಲೇ ಕೇಂದ್ರ ಸರ್ಕಾರವು ಬಜೆಟ್ ಮಂಡನೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸಾಮಾನ್ಯವಾಗಿ ಬಜೆಟ್ ಮಂಡನೆ ಮಾಡಿದ ಮೇಲೆ ವಿರೋಧ ಪಕ್ಷದ ರಾಜ್ಯಗಳಿಗೆ ಅನ್ಯಾಯವಾಗಿದೆ ಎನ್ನುವ ಆರೋಪಗಳು ಕೇಳಿ ಬರುವುದು ಇದೆ. ಆದರೆ, ಕೇಂದ್ರ ಬಿಜೆಪಿ ಸರ್ಕಾರವು ಬಜೆಟ್ ಮಂಡನೆ ಮಾಡುವುದಕ್ಕಿಂತ ಮುಂಚೆಯೇ ಕರ್ನಾಟಕಕ್ಕೆ ಅನ್ಯಾಯ ಮಾಡುವ ಲಕ್ಷಣಗಳು ಅಥವಾ ಕರ್ನಾಟಕಕ್ಕೆ ಈ ಬಾರಿಯೂ ಅನ್ಯಾಯವಾಗಲಿದೆ ಎನ್ನುವ ಅನುಮಾಗಳು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಕೇಂದ್ರ ಸರ್ಕಾರವು ಕರ್ನಾಟಕದ ಪ್ರಮುಖ ಬೇಡಿಕೆಯೊಂದನ್ನು ತಿರಸ್ಕರಿಸಿರುವುದು. ಅದೇನು ಎನ್ನುವ ವಿವರ ಇಲ್ಲಿದೆ.
ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರವು ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಉದ್ಯೋಗ ಸೃಷ್ಟಿ ಹಾಗೂ ಹಣದುಬ್ಬರ ನಿಯಂತ್ರಣ ಸೇರಿದಂತೆ ಮಧ್ಯಮವರ್ಗದವರ ಪರವಾದ ಬಜೆಟ್ ಮಂಡನೆಯಾಗುವ ಸಾಧ್ಯತೆ ಇದೆ ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಲಿದೆಯೇ ಎನ್ನುವ ಆತಂಕ ಕಾರಣವಾಗಿದೆ. ಇದಕ್ಕೆ ಮುಖ್ಯ ಕಾರಣ ಕರ್ನಾಟಕದ ಪ್ರಮುಖ ಬೇಡಿಕೆಯನ್ನು ಅದರಲ್ಲೂ ಆರೋಗ್ಯ ಸೇವೆಗೆ ಸಂಬಂಧಿಸಿದ ಬೇಡಿಕೆಯನ್ನು ಕೇಂದ್ರ ಬಿಜೆಪಿ ಸರ್ಕಾರ ತಿರಸ್ಕರಿಸಲಿದೆಯೇ ಎನ್ನುವ ಅನುಮಾನ ಎದುರಾಗಿದೆ.

ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ವಿಸ್ತೀರ್ಣ, ಜನಸಂಖ್ಯೆ ಹಾಗೂ ತೆರಿಗೆ ಪಾವತಿ ಸೇರಿದಂತೆ ಹಲವು ವಿಷಯಗಳಲ್ಲಿ ಪ್ರಮುಖ ರಾಜ್ಯವಾಗಿದೆ. ಆದರೆ, ಕರ್ನಾಟಕದಲ್ಲಿ ಏಮ್ಸ್ ಆಸ್ಪತ್ರೆ ಇಲ್ಲ. ಕರ್ನಾಟಕದಲ್ಲಿ ಏಮ್ಸ್ ಆಸ್ಪತ್ರೆ ಸೇವೆ ಕೊಡಬೇಕು ಎಂದು ಕರ್ನಾಟಕವು ಹಲವು ವರ್ಷಗಳಿಂದ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಲ್ಲೇ ಇದೆ. ಆದರೆ ರಾಜ್ಯ ಸರ್ಕಾರದ ಮನವಿಯನ್ನು ಕೇಂದ್ರ ಬಿಜೆಪಿ ಸರ್ಕಾರ ತಿರಸ್ಕರಿಸುತ್ತಿದೆ ಎನ್ನುವ ಆರೋಪ ಇದೆ. ಈ ಬಾರಿಯ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಏಮ್ಸ್ ಸಿಗುವ ನಿರೀಕ್ಷೆ ಇತ್ತು. ಅದು ಸಹ ಈ ಬಾರಿಯೂ ಹಿನ್ನೆಡೆಯಾಗುವ ಸಾಧ್ಯತೆ ಇದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರ ಆರೋಗ್ಯ ಸಚಿವರಾದ ಜೆ.ಪಿ ನಡ್ಡಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರವನ್ನು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಶೇರ್ ಮಾಡಿಕೊಂಡಿದ್ದು. ಈ ಪತ್ರದ ಮೂಲಕ ಕರ್ನಾಟಕದ ಜನರಿಗೆ ನಡ್ಡಾ ಅವರು ಏನು ಹೇಳಲು ಬಯಸುತ್ತಿದ್ದಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ಕರ್ನಾಟಕ ಸರ್ಕಾರವು ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ AIIMS ಮಂಜೂರು ಮಾಡಬೇಕು ಎಂದು ನಿರಂತರವಾಗಿ ಮನವಿ ಮಾಡುತ್ತಲ್ಲೇ ಇದೆ. ಆದರೆ ನಮ್ಮ ಬೇಡಿಕೆಗೆ ಕೇಂದ್ರ ಸರ್ಕಾರವು ಸ್ಪಂದಿಸುತ್ತಿಲ್ಲ. ಈಗಾಗಲೇ ಕರ್ನಾಟಕವನ್ನು ಹೊರತುಪಡಿಸಿ 22 ರಾಜ್ಯಗಳು AIIMSಗೆ ಅನುಮೋದನೆ ಪಡೆದುಕೊಂಡಿವೆ. ಆದರೆ ಕರ್ನಾಟಕದ ಹಲವು ವರ್ಷಗಳ ಬೇಡಿಕೆಗೆ ಕೇಂದ್ರ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವಿವಿಧ ಯೋಜನೆಗಳ ನಿಧಿಗಳನ್ನು ಬಳಸುವುದನ್ನು ಸಚಿವರು ಉಲ್ಲೇಖಿಸಿದ್ದಾರೆ. ಆದರೆ ಏಮ್ಸ್ ಆಸ್ಪತ್ರೆಯ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. AIIMS ಸ್ಥಾಪನೆಯಾಗಬೇಕಾದರೆ, ಬಜೆಟ್ ಅಗತ್ಯವಿದೆ. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಕ್ಕೆ ಕರ್ನಾಟಕ ಸಿದ್ಧವಾಗಿದೆ. ಆದರೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ದೂರಿದೆ.
ಕೇಂದ್ರ ಸರ್ಕಾರವು ಕರ್ನಾಟಕಕ್ಕೆ AIIMS ಸೇವೆಯನ್ನು ನಿರಾಕರಿಸುತ್ತಿದ್ದೇವೆ ಎಂದು ಜಾಣತನದಿಂದ ಮತ್ತು ಪರೋಕ್ಷವಾಗಿ ಹೇಳುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕರ್ನಾಟಕಕ್ಕೆ ಅನ್ಯಾಯ ಮುಂದುವರೆದಿದೆ ಎಂದು ಅವರು ಆರೋಪಿಸಿದ್ದಾರೆ.












Click it and Unblock the Notifications