ಬಿಹಾರಕ್ಕೆ ಭೇಟಿ ನೀಡಲಿರುವ ಗೃಹ ಸಚಿವ ಅಮಿತ್ ಶಾ, ಜೂನ್ 29 ಕ್ಕೆ ಬೃಹತ್ ರ‍್ಯಾಲಿ
ಪಾಟ್ನಾ, ಜೂನ್. 15: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಜೂನ್ 29 ರಂದು ಮುಂಗೇರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿಯ ಬಿಹಾರ ಅಧ್ಯಕ್ಷ ಸಾಮ್ರಾಟ್ ಚೌಧರಿ ಬುಧವಾರ ಮಾಹಿತಿ ನೀಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಕೂಡ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.
ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಝಂಜರ್‌ಪುರದಲ್ಲಿ ಸಾರ್ವಜನಿಕ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ. "ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಹಾರಕ್ಕೆ ಭೇಟಿ ನೀಡಲಿದ್ದಾರೆ ಮತ್ತು ಜೂನ್ 29 ರಂದು ಮುಂಗೇರ್‌ನಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಝಂಜರ್‌ಪುರದಲ್ಲಿ ಸಾರ್ವಜನಿಕ ರ‍್ಯಾಲಿ ನಡೆಸಲಿದ್ದಾರೆ" ಎಂದು ಸಾಮ್ರಾಟ್ ಚೌಧರಿ ಹೇಳಿದ್ದಾರೆ.

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಬಿಜೆಪಿಯೊಂದಿಗಿನ ಸಂಬಂಧವನ್ನು ಮುರಿದು, ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವನ್ನು ಅಂತ್ಯಗೊಳಿಸಿ, 2022 ರ ಆಗಸ್ಟ್‌ನಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಹೊರಹಾಕಿದ ನಂತರ ಒಂಬತ್ತು ತಿಂಗಳಲ್ಲಿ ಅಮಿತ್ ಶಾ ಬಿಹಾರಕ್ಕೆ ಸತತವಾಗಿ ಭೇಟಿ ನೀಡುತ್ತಿದ್ದಾರೆ. ಒಂಬತ್ತು ತಿಂಗಳಲ್ಲಿ ಇದು ಅವರ ಐದನೇ ಭೇಟಿ.
ಕಳೆದ ವರ್ಷ ಅಮಿತ್ ಶಾ ಅವರು ಸೀಮಾಂಚಲ್ ಪ್ರದೇಶದ ರಾಜಧಾನಿ ಎಂದು ಪರಿಗಣಿಸಲಾದ ಪುನಿಯಾಗೆ ಭೇಟಿ ನೀಡಿದ್ದರು. ನಂತರ, ಅಕ್ಟೋಬರ್‌ನಲ್ಲಿ ಅವರು ದಿವಂಗತ ಸಮಾಜವಾದಿ ಧೀಮಂತ ಜೈ ಪ್ರಕಾಶ್ ನಾರಾಯಣ್ ಅವರ ಜನ್ಮಸ್ಥಳವಾದ ಸಿತಾಬ್ ಡಿಯಾರಾಕ್ಕೆ ಭೇಟಿ ನೀಡಿದ್ದರು. ಈ ವರ್ಷದ ಫೆಬ್ರವರಿಯಲ್ಲಿ, ಅವರು ಅದೇ ದಿನ (ಫೆ 25) ವಾಲ್ಮಕಿನಗರ ಮತ್ತು ಪಾಟ್ನಾಗೆ ಬಂದಿದ್ದರು.
ಇದರ ಜೊತೆಗೆ ಭೂಮಿಹಾರ್ ಸಮುದಾಯವನ್ನು ಓಲೈಸುವ ಪ್ರಯತ್ನದಲ್ಲಿ ರೈತ ನಾಯಕ ಸಹಜಾನಂದ ಸರಸ್ವತಿ ಅವರ ಜನ್ಮದಿನದಂದು ಪಾಟ್ನಾದಲ್ಲಿ ಆಯೋಜಿಸಲಾದ ಕಿಸಾನ್ ಸಮಾಗಮ್ ಅನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಏಪ್ರಿಲ್‌ನಲ್ಲಿ ನಾವಡಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದರು.
ಇತ್ತ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ವಿರುದ್ಧ ವಿರೋಧವನ್ನು ಸಜ್ಜುಗೊಳಿಸಲು ಉನ್ನತ ವಿರೋಧ ಪಕ್ಷದ ನಾಯಕರ ಸಭೆಯನ್ನು ಕರೆದಿದ್ದಾರೆ. ಜೂನ್ 23 ರಂದು ಪಾಟ್ನಾದಲ್ಲಿ ಸಭೆ ನಡೆಯಲಿದೆ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಾಲನ್ ಸಿಂಗ್ ಈ ಹಿಂದೆ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಸಮಾನ ಮನಸ್ಕ ವಿರೋಧ ಪಕ್ಷಗಳ ಒಗ್ಗಟ್ಟಿಗೆ ಅಡಿಪಾಯ ಹಾಕುವ ಗುರಿಯನ್ನು ಹೊಂದಿರುವ ಸಭೆಯನ್ನು ಮೂಲತಃ ಜೂನ್ 12 ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಜೂನ್ 12 ರಂದು ಸಭೆಗೆ ಹಾಜರಾಗಲು ಸಾಧ್ಯವಾಗದ ಕಾರಣ ಸಭೆಯನ್ನು ಮುಂದೂಡಲಾಯಿತು.
ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಕಳೆದ ವರ್ಷ ಆಗಸ್ಟ್‌ನಲ್ಲಿ ಹೊಸ ಸರ್ಕಾರ ರಚಿಸಲು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು ತೊರೆದು ಮಹಾಮೈತ್ರಿಕೂಟಕ್ಕೆ ಸೇರಿದ್ದಾರೆ. ಇದಾದ ನಂತರ ದೇಶದಲ್ಲಿ ಪ್ರತಿಪಕ್ಷಗಳ ಒಗ್ಗಟ್ಟಿಗೆ ಮೂಲ ಕಾರನವಾಗಿದ್ದಾರೆ. ಎಲ್ಲಾ ನಾಯಕರನ್ನು ಒಂದು ಕಡೆ ಸೇರಿಸುವ ಪ್ರಯತ್ನದಲ್ಲಿ ನಿತೀಶ್ ಕುಮಾರ್ ಪಾತ್ರ ಬಹುಮುಖ್ಯವಾಗಿದೆ.












Click it and Unblock the Notifications