ಒಂದೇ ಕಾರಣ ನೀಡಿ ರಜೆಗೆ ಅರ್ಜಿ ಹಾಕಿದ 700ಕ್ಕೂ ಅಧಿಕರ ಪೊಲೀಸರು; ಮುಂದೇನಾಯ್ತು?
Holiday: ಸಾಮಾನ್ಯವಾಗಿ ಸರ್ಕಾರಿ ಅಥವಾ ಖಾಸಗಿ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ವರ್ಷಕ್ಕೆ ಇಂತಿಷ್ಟೆಂದು ರಜೆಗಳು ಇರುತ್ತವೆ. ಯಾವುದದರೂ ತುರ್ತು ಸಂದರ್ಭ ಅಥವಾ ಹಬ್ಬ, ಕಾರ್ಯಕ್ರಮಗಳಿಗೆ ರಜೆಗಳನ್ನು ಪಡೆಯಬಹುದಾಗಿದೆ. ಆದರೆ, ಇದೀಗ ವಿಚಿತ್ರ ಎಂಬಂತೆ 700ಕ್ಕೂ ಹೆಚ್ಚು ಮಂದಿ ಪೊಲೀಸರು ಒಂದೇ ಕಾರಣ ನೀಡಿ ರಜೆಗೆ ಅರ್ಜಿ ಸಲ್ಲಿಸಿದ್ದಾರೆಂಬ ಮಾಹಿತಿಯೊಂದು ಹೊರಬಿದ್ದಿದೆ.
ಸರ್ಕಾರಿ ಮಟ್ಟದ ಯಾವುದೇ ಇಲಾಖೆಯಲ್ಲಾಗಲಿ ತುರ್ತು ಸಂದರ್ಭಗಳಲ್ಲಿ ಅಧಿಕಾರಿಗಳಿಗೆ ರಜೆ ನೀಡಬೇಕಾಗುತ್ತದೆ. ಆದರೆ ಕೆಲವರು ಇದನ್ನೇ ಬಂಡವಾಳ ಮಾಡಿಕೊಂಡು ಸುಳ್ಳು ನೆಪ ಹೇಳಿ ರಜೆಗಳನ್ನು ಪಡೆಯುವ ಮೂಲಕ ಕೊನೆಗೆ ಇತರ ಅಧಿಕಾರಿಗಳಿಗೂ ಸಂಕಷ್ಟ ತಂದುಬಿಡುತ್ತಾರೆ. ಅಂತಹದ್ದೇ ಒಂದು ಘಟನೆ ಪ್ರಯಾಗ್‌ರಾಜ್‌ನಲ್ಲಿ ನಡೆದಿದೆ.

2025ರ ಜನವರಿಯಲ್ಲಿ ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳ ನಡೆಯಲಿದ್ದು, ಈ ಹಿನ್ನೆಲೆ ಈಗಾಗಲೇ ಉತ್ತರಪ್ರದೇಶ ಸರ್ಕಾರ ಸಕಲ ತಯಾರಿ ಮಾಡಿಕೊಂಡಿದೆ. ಕೋಟ್ಯಂತರ ಜನ ಭಾಗಿ ಆಗುವ ನಿರೀಕ್ಷೆಯಿದ್ದು, ಭದ್ರತೆಗೆ 6,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಭದ್ರತೆಗೆ ಸಂಬಂಧಿಸಿದಂತೆ ಅಕ್ಟೋಬರ್ 25ರಿಂದ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತಿದೆ. ಈ ಪೈಕಿ 1200ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಡಿಸೆಂಬರ್‌ನಲ್ಲಿ ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಪೈಕಿ 700ಕ್ಕೂ ಹೆಚ್ಚು ಪೊಲೀಸರು ಒಂದೇ ಕಾರಣ ನೀಡಿದ್ದಾರೆ. ಇದೀಗ ಇದೇ ವಿಚಾರ ಅಧಿಕಾರಿಗಳನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಮೂಲಗಳ ಪ್ರಕಾರ, 700ಕ್ಕೂ ಹೆಚ್ಚು ಪೊಲೀಸರು ತಮ್ಮ ಪತ್ನಿಗೆ ಹೆರಿಗೆ ಕಾರಣ ನೀಡಿ ರಜೆ ಕೋರಿದ್ದಾರೆ. ಡಿಸೆಂಬರ್ ಅಥವಾ ಜನವರಿಯಲ್ಲಿ ಹೆರಿಗೆ ಆಗುವ ಸಾಧ್ಯತೆಯಿದೆ ಎಂದು ಕಾರಣಗಳನ್ನು ನೀಡಿ ರಜೆ ನೀಡಬೇಕು ಎಂದು ಅಧಿಕಾರಿಗಳಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರಂತೆ ಅಂತಾ ತಿಳಿದುಬಂದಿದೆ.
ಅರ್ಜಿ ಸಲ್ಲಿಸಿದವರ ಪೈಕಿ 2018 ಮತ್ತು 2023ರಲ್ಲಿ ನೇಮಕ ಆಗಿರುವವರು ಹೆಚ್ಚಿದ್ದಾರಂತೆ. ಅಷ್ಟೇ ಅಲ್ಲದೆ, ಪೋಷಕರ ಅನಾರೋಗ್ಯದ ಹಿನ್ನೆಲೆ 250 ಪೊಲೀಸರು ರಜೆಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಇತರರು ಇನ್ನೂ ಬೇರೆ ಬೇರೆ ಕಾರಣಗಳನ್ನು ನೀಡಿ ರಜೆ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
2025ರ ಜನವರಿ 13ರಂದು ಮಹಾಕುಂಭಮೇಳ ಆರಂಭವಾಗಲಿದೆ. ಇದು ಫೆಬ್ರವರಿ 26ರಂದು ಮುಕ್ತಾಯ ಆಗಲಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆಯಿದ್ದು, ಈ ಹಿನ್ನೆಲೆ ಸರ್ಕಾರ ಯಾವುದೇ ಅಹಿತಕರ ಘಟನೆಗಳು ನೆಡೆಯದಂತೆ ಈಗಿನಿಂದಲೇ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.












Click it and Unblock the Notifications