ಕಾಂಗ್ರೆಸ್ ಕಚೇರಿ ಮುಂದೆ ಸಾರ್ವಕರ್ ಪ್ರತಿಮೆ ಸ್ಥಾಪಿಸಲು ಮುಂದಾದ ಹಿಂದೂ ಮಹಾಸಭಾ
ನವದೆಹಲಿ, ನವೆಂಬರ್ 24: ಸಾವರ್ಕರ್ ಕುರಿತು ರಾಹುಲ್ ಗಾಂಧಿಯವರ ಟೀಕೆಗೆ ತಿರುಗೇಟು ನೀಡಿರುವ ಅಖಿಲ ಭಾರತೀಯ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ, ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿರುವ ಕಾಂಗ್ರೆಸ್ ನಾಯಕರ ಸಾಮಾಜಿಕ ಮತ್ತು ರಾಜಕೀಯ ಚಟುವಟಿಕೆಗಳನ್ನು ನಿರ್ಬಂಧಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದ್ದಾರೆ.
ನವೆಂಬರ್ 19ರಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಚಕ್ರಪಾಣಿ, ರಾಷ್ಟ್ರ ರಾಜಧಾನಿಯ ಕಾಂಗ್ರೆಸ್ ಪ್ರಧಾನ ಕಚೇರಿಯ ಮುಂದೆ ಸಾವರ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಹಿಂದೂ ಮಹಾಸಭಾ ನಿರ್ಧರಿಸಿದೆ ಎಂದು ಹೇಳಿದ್ದಾರೆ. ಎಒ ಹ್ಯೂಮ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಅವರನ್ನು ಮತ್ತೆ ಮತ್ತೆ ಅವಮಾನಿಸಿದೆ ಎಂದು ಅವರು ಬರೆದಿದ್ದಾರೆ.
ರಾಹುಲ್ ಗಾಂಧಿಯನ್ನು ಮಾನಸಿಕ ಅಸ್ವಸ್ಥ ಎಂದು ಕರೆದಿರುವ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ಚಕ್ರಪಾಣಿ, ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿ ಕಾಂಗ್ರೆಸ್ ನಾಯಕರು ಅಪರಾಧ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಮಾನಸಿಕ ಅಸ್ವಸ್ಥರಾಗಿದ್ದು, ಆಗ್ರಾದಲ್ಲಿ ಅವರಿಗೆ ಮಾನಸಿಕ ಚಿಕಿತ್ಸೆಯ ಅಗತ್ಯವಿದೆ. ಬ್ರಿಟಿಷರ ಒತ್ತಾಯದ ಮೇರೆಗೆ ಅವರು ಭಾರತದ ಮಹಾನ್ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸುತ್ತಿದ್ದರೆ, ಅದು ಅಪರಾಧವೂ ಆಗಿದೆ. ಇದಕ್ಕಾಗಿ ಸರ್ಕಾರವು ರಾಹುಲ್ ಗಾಂಧಿ ಅವರ ಎಲ್ಲಾ ರಾಜಕೀಯ ಚಟುವಟಿಕೆಗಳನ್ನು ತಕ್ಷಣವೇ ನಿಷೇಧಿಸಬೇಕು ಮತ್ತು ಅವರನ್ನು ಕಂಬಿ ಹಿಂದೆ ಹಾಕಬೇಕು ಎಂದು ಪತ್ರದಲ್ಲಿ ಅವರು ಬರೆದಿದ್ದಾರೆ.

ಮುಂದಿನ ಫೆಬ್ರವರಿ 26ರಂದು ಸಾವರ್ಕರ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ದೆಹಲಿಯ 24 ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯ ಮುಂದೆ ಸಾವರ್ಕರ್ ಅವರ ಪ್ರತಿಮೆಯನ್ನು ಸ್ಥಾಪಿಸಲು ಹಿಂದೂ ಮಹಾಸಭಾ ನಿರ್ಧರಿಸಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಕ್ಬರ್ ರಸ್ತೆಯನ್ನು ಸಾವರ್ಕರ್ ರಸ್ತೆ ಎಂದು ಮರುನಾಮಕರಣ ಮಾಡಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡುವಂತೆ ಹಿಂದೂ ಮಹಾಸಭಾ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದೆ.
ಈ ಹಿಂದೆ ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರವನ್ನು ಓದಿದ್ದ ರಾಹುಲ್ ಗಾಂಧಿ, ಕೇಸರಿ ವಿಚಾರಧಾರೆಯು ಸ್ವಾತಂತ್ರ್ಯದ ಮೊದಲು ಬ್ರಿಟಿಷರಿಗೆ ಕ್ಷಮೆಯಾಚಿಸುವ ಪತ್ರಕ್ಕೆ ಸಹಿ ಹಾಕುವ ಮೂಲಕ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರಂಥ ನಾಯಕರಿಗೆ ದ್ರೋಹ ಬಗೆದಿದ್ದಾರೆ ಎಂದಿದ್ದರು.
ಸಾವರ್ಕರ್ ಅವರು ಬ್ರಿಟಿಷರಿಗೆ ಬರೆದ ಪತ್ರದಲ್ಲಿ, 'ಸರ್, ನಾನು ನಿಮ್ಮ ಅತ್ಯಂತ ವಿಧೇಯ ಸೇವಕನಾಗಿ ಉಳಿಯಲು ವಿನಂತಿಸಿಕೊಳ್ಳುತ್ತೇನೆ ಎಂದು ಬರೆದು ಸಹಿ ಹಾಕಿದ್ದರು. ಸಾವರ್ಕರ್ ಅವರು ಬ್ರಿಟಿಷರಿಗೆ ಸಹಾಯ ಮಾಡಿದ್ದರು. ಈ ಪತ್ರಕ್ಕೆ ಸಹಿ ಹಾಕುವ ಮೂಲಕ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರಂಥ ನಾಯಕರಿಗೆ ದ್ರೋಹ ಮಾಡಿದರು' ಎಂದು ರಾಹುಲ್ ಗಾಂಧಿ ಅವರು ಹೇಳಿದ್ದರು.












Click it and Unblock the Notifications