Hindi Diwas: ಹಿಂದಿ ಭಾಷೆ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ...
ಹಿಂದಿ ದಿನಾಚರಣೆ ನಡೆಯುತ್ತಿದೆ, ಪರ ಮತ್ತು ವಿರೋಧದ ನಡುವೆ ಹಿಂದಿ ದಿವಸ್ ಬಗ್ಗೆ ಚರ್ಚೆ ಜೋರಾಗಿದೆ. ಅದರಲ್ಲೂ ಕನ್ನಡಿಗರ ಮೇಲೆ ಮತ್ತು ದಕ್ಷಿಣ ಭಾರತದ ಭಾಷೆಗಳ ಮೇಲೆ ಹಿಂದಿ ಹೇರಿಕೆ ಮಾಡಲಾಗ್ತಿದೆ ಎಂಬ ಆರೋಪ ಇದೆ. ಈ ಹೊತ್ತಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಹೇಳಿಕೆ ಸಾಕಷ್ಟು ಗಮನ ಸೆಳೆದಿದೆ. ಹಾಗಾದರೆ ಅಮಿತ್ ಶಾ ಹೇಳಿದ್ದೇನು? ಹಿಂದಿ ದಿವಸ್ ಬಗ್ಗೆ ಕೇಂದ್ರ ಗೃಹ ಸಚಿವರ ಅಭಿಪ್ರಾಯ ಏನು?
ಅಮಿತ್ ಶಾ ಅವರು 'ಹಿಂದಿ ದಿವಸ್' ಸಂದರ್ಭದಲ್ಲಿ ವಿಶೇಷ ಸಂದೇಶ ನೀಡಿದ್ದಾರೆ. ಇದೇ ಸಂದೇಶದಲ್ಲಿ ಹಿಂದಿ ಭಾಷೆಯ ಬಗ್ಗೆ ಮಾತನಾಡಿದ್ದಾರೆ. ಹಿಂದಿ ಭಾರತದ ಇತರ ಭಾಷೆಗಳ ವೈವಿಧ್ಯತೆ ಒಂದುಗೂಡಿಸುತ್ತದೆ ಎಂದು ಅಮಿತ್ ಶಾ ಪ್ರತಿಪಾದಿಸಿದ್ದಾರೆ. ಹಿಂದಿ ಎಂದಿಗೂ ಯಾವುದೇ ಭಾರತೀಯ ಭಾಷೆ ಜೊತೆ ಸ್ಪರ್ಧಿಸಿಲ್ಲ ಅಥವಾ ಸ್ಪರ್ಧಿಸುವುದಿಲ್ಲ. ದೇಶದ ಎಲ್ಲಾ ಭಾಷೆಗಳನ್ನು ಬಲಪಡಿಸುವ ಮೂಲಕ ಪ್ರಬಲವಾದ ದೇಶ ರೂಪುಗೊಳ್ಳುತ್ತೆ. ಎಲ್ಲಾ ಸ್ಥಳೀಯ ಭಾಷೆಗಳನ್ನ ಸಶಕ್ತಗೊಳಿಸಲು ಹಿಂದಿ ಮಾಧ್ಯಮವಾಗಲಿದೆ ಎಂದಿದ್ದಾರೆ ಅಮಿತ್ ಶಾ. ಹಾಗೇ ಮತ್ತೊಂದು ಪ್ರಮುಖ ವಿಚಾರವನ್ನೂ ಅಮಿತ್ ಶಾ ಹಂಚಿಕೊಂಡಿದ್ದಾರೆ.

ಸ್ವಾತಂತ್ರ್ಯ ಹೋರಾಟ & ಹಿಂದಿ ಭಾಷೆ
ಹಾಗೇ ಹಿಂದಿ ಇತರ ಭಾಷೆಗಳ ಜೊತೆ ಹೇಗೆ ಬೆರೆದಿದೆ ಎಂಬುದನ್ನ ಅಮಿತ್ ಶಾ ಹೇಳಿದ್ದು ಭಾರತ ವೈವಿಧ್ಯಮಯ ಭಾಷೆಗಳ ದೇಶ. ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವದ ದೇಶದಲ್ಲಿ ಹಿಂದಿ ಭಾಷೆಗಳ ವೈವಿಧ್ಯತೆ ಒಂದುಗೂಡಿಸುತ್ತದೆ. ಹಿಂದಿ ಪ್ರಜಾಸತ್ತಾತ್ಮಕ ಭಾಷೆಯಾಗಿದ್ದು, ವಿವಿಧ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ಮತ್ತು ಅನೇಕ ಜಾಗತಿಕ ಭಾಷೆಗಳನ್ನು ಗೌರವಿಸಿದೆ ಮತ್ತು ಅವುಗಳ ವ್ಯಾಕರಣ ನಿಯಮ ಅಳವಡಿಸಿಕೊಂಡಿದೆ ಎಂದಿದ್ದಾರೆ ಅಮಿತ್ ಶಾ. ಹಾಗೇ ಸ್ವಾತಂತ್ರ್ಯ ಹೋರಾಟದ ಕಷ್ಟದ ದಿನಗಳಲ್ಲಿ ದೇಶವನ್ನು ಒಗ್ಗೂಡಿಸುವಲ್ಲಿ ಹಿಂದಿ ಭಾಷೆ ಅಮೂಲ್ಯ ಪಾತ್ರ ವಹಿಸಿತ್ತು ಎಂದು ಹಿಂದಿ ಭಾಷೆ ಸ್ಮರಿಸಿದ್ದಾರೆ.
ಹಲವು ಭಾಷೆ ಮತ್ತು ಉಪಭಾಷೆ ಹೊಂದಿರುವ ದೇಶದಲ್ಲಿ ಏಕತೆ ಭಾವನೆ ತುಂಬಿದೆ. ಇನ್ನು ಹಿಂದಿ ಸಂವಹನ ಭಾಷೆಯಾಗಿ ಸ್ವಾತಂತ್ರ್ಯ ಹೋರಾಟವನ್ನ ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದಿದ್ದಾರೆ. ಹಾಗೇ ಈ ಮೂಲಕ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಹಿಂದಿ ಭಾಷೆಯ ಪಾತ್ರವನ್ನು ಅಮಿತ್ ಶಾ ಇದೇ ಸಂದರ್ಭದಲ್ಲಿ ಹೊಗಳಿದ್ದಾರೆ.

ಭಾರತದ ಭಾಷೆಗಳಿಗೆ ಜಾಗತಿಕ ಮನ್ನಣೆ
ಹಾಗೇ ಸ್ವಾತಂತ್ರ್ಯ ಚಳವಳಿಯಲ್ಲಿ ಹಿಂದಿ ಭಾಷೆಯ ಪ್ರಮುಖ ಪಾತ್ರವನ್ನು ಪರಿಗಣಿಸಿ ಹಾಗೂ ಸ್ವಾತಂತ್ರ್ಯ ಬಂದ ನಂತರ, ಸಂವಿಧಾನದ ಶಿಲ್ಪಿಗಳು ಸೆಪ್ಟೆಂಬರ್ 14, 1949 ರಂದು ಅದನ್ನು ಅಧಿಕೃತ ಭಾಷೆಯಾಗಿ ಸ್ವೀಕರಿಸಿದರು. ಎಲ್ಲಾ ಭಾರತೀಯ ಭಾಷೆಗಳು ಮತ್ತು ಉಪಭಾಷೆಗಳು ದೇಶದ ಸಾಂಸ್ಕೃತಿಕ ಪರಂಪರೆ, ಅದನ್ನು ಮುಂದುವರಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ & ಜಾಗತಿಕ ವೇದಿಕೆಗಳಲ್ಲಿ ಭಾರತೀಯ ಭಾಷೆಗಳಿಗೆ ಮನ್ನಣೆ ಮತ್ತು ಗೌರವ ಸಿಕ್ಕಿದೆ ಎಂದು ಅಮಿತ್ ಶಾ ಇದೇ ವೇಳೆ ಹೇಳಿದ್ದಾರೆ.
ಪರ & ವಿರೋಧದ ಚರ್ಚೆ ಶುರು
ಇನ್ನು ಒಂದು ಕಡೆ ಹಿಂದಿ ದಿನಾಚರಣೆ ಪರವಾಗಿ ಮಾತುಗಳು ಕೇಳಿಬರುತ್ತಿದ್ದರೆ, ಹಾಗೇ ಇನ್ನೊಂದು ಕಡೆ ಹಿಂದಿ ಹೇರಿಕೆ ಮಾಡಲಾಗುತ್ತಿದೆ. ಅದರಲ್ಲೂ ಭಾರತದ ಇತರ ಭಾಷೆ & ಸಂಸ್ಕೃತಿಯ ಮೇಲೆ ಹಿಂದಿ ಭಾಷೆಯನ್ನು ಬಲವಂತವಾಗಿ ಹೇರಲಾಗುತ್ತಿದೆ ಎಂಬ ಕುರಿತು ಆರೋಪ ಕೇಳಿಬರುತ್ತಿದೆ. ಇದೀಗ ಕೇಂದ್ರ ಗೃಹ ಸಚಿವರು ಹಿಂದಿ ಭಾಷೆಯ ಬಗ್ಗೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ಅದರ ಪಾತ್ರದ ಬಗ್ಗೆ ತಮ್ಮ ಹೇಳಿಕೆಯಲ್ಲಿ ಪ್ರತಿಪಾದಿಸಿದ್ದಾರೆ.
ಒಟ್ನಲ್ಲಿ ಒಂದು ಕಡೆ ಹಿಂದಿ ದಿನಾಚರಣೆ ಹಿಂದಿ ಭಾಷಿಕರಿಗೆ ಖುಷಿ ಕೊಟ್ಟಿದ್ದರೆ, ಇದೇ ವೇಳೆ ಹಿಂದಿಯನ್ನು ರಾಷ್ಟ್ರೀಯ ಭಾಷೆ ಅನ್ನಬಾರದು ಎಂಬ ಆಗ್ರಹ ಕೂಡ ಕೇಳಿಬರ್ತಿದೆ. ಈ ಮಧ್ಯೆ ಹಿಂದಿ ದಿನಾಚರಣೆ ಬಗ್ಗೆ ವಿರೋಧವೂ ಇದೆ. ಈ ಎಲ್ಲಾ ಪರ & ವಿರೋಧದ ಚರ್ಚೆ ನಡುವೆ ಇಂದು ಹಿಂದಿ ದಿವಸ ಅಂದರೆ ಹಿಂದಿ ದಿನಾಚರಣೆ ನಡೆಯುತ್ತಿದೆ.












Click it and Unblock the Notifications