ಹಿಮಾಚಲ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಏಕರೂಪ ನಾಗರಿಕ ಸಂಹಿತೆ ಜಾರಿ ಭರವಸೆ
ಶಿಮ್ಲಾ, ನವೆಂಬರ್ 6: ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪಕ್ಷಗಳು ಪ್ರಚಾರ ಚುರುಕುಗೊಳಿಸಿವೆ. ಬಿಜೆಪಿ ಕೂಡ ಭರದ ಪ್ರಚಾರ ನಡೆಸುತ್ತಿದೆ. ಹಲವಾರು ಯೋಜನೆಗಳ ಭರವಸೆ ಮೂಲಕ ಮತದಾರರನ್ನು ಸೆಳೆಯುತ್ತಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಹಿಮಾಚಲ ಪ್ರದೇಶದ ಚುನಾವಣಾ ಪ್ರಣಾಳಿಕೆಯನ್ನು ಇಂದು (ನವೆಂಬರ್ 6) ಅನಾವರಣಗೊಳಿಸಿತು. ಪ್ರಣಾಳಿಕೆ ಕರಡು ರಚನೆಗೆ ಸಾರ್ವಜನಿಕರಿಂದ ಸಲಹೆಗಳನ್ನು ಪಡೆಯಲು ಪಕ್ಷವು ಸಮಿತಿಯನ್ನು ರಚಿಸಿತ್ತು. ಜನರಿಂದ ಪಡೆದ ಸಲಹೆಗಳ ಆಧಾರದ ಮೇಲೆ ಸಮಿತಿ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ.
ಹಿಮಾಚಲ ಪ್ರದೇಶದ ಮತದಾನಕ್ಕೆ ಇನ್ನೂ ಕೆಲವೇ ದಿನಗಳ ಬಾಕಿ ಇವೆ. ಒಂದು ವೇಳೆ ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆಯನ್ನು ತರುವುದಾಗಿ ಬಿಜೆಪಿ ಭರವಸೆ ನೀಡಿದೆ. ಇದು ಮುಸ್ಲಿಮರಲ್ಲಿ ವಿವಾದಾಸ್ಪದ ವಿಷಯವಾಗಿದೆ. ಏಕೆಂದರೆ ಈ ಹೇಳಿಕೆ ಧರ್ಮ-ನಿರ್ದಿಷ್ಟ ಕಾನೂನುಗಳನ್ನು ತೆಗೆದುಹಾಕುತ್ತದೆ. ಇದು ಪ್ರತಿಪಕ್ಷಗಳು ಇತರ ರಾಜ್ಯಗಳಲ್ಲಿ ಹಿಂದೂ ಬಹುಸಂಖ್ಯಾತರ ಮತಗಳನ್ನು ಗಳಿಸುವ ಗಿಮಿಕ್ ಎಂದು ಟೀಕಿಸಿದ್ದಾರೆ.

ಬಿಜೆಪಿ ಪ್ರಣಾಳಿಕೆ ಬಿಡುಗಡೆ
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಅಕ್ಟೋಬರ್ 29 ಕೊನೆಯ ದಿನವಾಗಿದೆ. 68 ಸ್ಥಾನಗಳ ವಿಧಾನಸಭೆಗೆ ನವೆಂಬರ್ 12 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಅಕ್ಟೋಬರ್ 17ರಂದು ರಾಜ್ಯ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 25 ಕೊನೆಯ ದಿನವಾಗಿದ್ದು, ಅಕ್ಟೋಬರ್ 27ರಂದು ನಾಮಪತ್ರಗಳ ಪರಿಶೀಲನೆ ನಡೆಸಲಾಗಿತ್ತು.
11 ಪ್ರಮುಖ ಪ್ರಕಟಣೆಗಳನ್ನು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಿದೆ. ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, "ಈ ಬದ್ಧತೆಗಳು ಸಮಾಜದಲ್ಲಿ ಏಕರೂಪತೆಯನ್ನು ತರುತ್ತವೆ, ಯುವಕರು ಮತ್ತು ರೈತರನ್ನು ಸಬಲಗೊಳಿಸುತ್ತವೆ. ತೋಟಗಾರಿಕೆಯನ್ನು ಬಲಪಡಿಸುತ್ತವೆ. ಸರ್ಕಾರಿ ನೌಕರರಿಗೆ ನ್ಯಾಯವನ್ನು ನೀಡುತ್ತದೆ. ಧಾರ್ಮಿಕ ಪ್ರವಾಸೋದ್ಯಮವನ್ನು ಮುನ್ನಡೆಸುತ್ತವೆ'' ಎಂದಿದ್ದಾರೆ.

ಪ್ರಮುಖ ಪ್ರಕಟಣೆಗಳನ್ನು ಇಲ್ಲಿ ಪರಿಶೀಲಿಸಿ
1. ಬಿಜೆಪಿ ಸರ್ಕಾರವು ರಾಜ್ಯಕ್ಕೆ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ತರಲಿದೆ ಎಂದು ಪಕ್ಷದ ಅಧ್ಯಕ್ಷರು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಈ ಉದ್ದೇಶಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಲಾಗುವುದು ಮತ್ತು ಅವರ ವರದಿಯ ಆಧಾರದ ಮೇಲೆ ರಾಜ್ಯದಲ್ಲಿ ಯುಸಿಸಿ ಜಾರಿಗೆ ತರಲಾಗುವುದು.
2. ಉದ್ಯೋಗಗಳ ಕುರಿತು ಮಾತನಾಡಿದ ನಡ್ಡಾ, ಬಿಜೆಪಿ ಸರ್ಕಾರವು ಹಂತ ಹಂತವಾಗಿ 8 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಒದಗಿಸಲಿದೆ. ಇದು ಸರ್ಕಾರಿ ಉದ್ಯೋಗಗಳು ಮತ್ತು ಆರ್ಥಿಕ ವಲಯದಲ್ಲಿ ನಡೆಯುತ್ತಿರುವ ಕೆಲಸಗಳನ್ನು ಒಳಗೊಂಡಿರುತ್ತದೆ.
3. ಬಿಜೆಪಿ ಸರ್ಕಾರ 'ಶಕ್ತಿ' ಕಾರ್ಯಕ್ರಮವನ್ನು ಪ್ರಾರಂಭಿಸುತ್ತದೆ. ಇದರ ಅಡಿಯಲ್ಲಿ ಧಾರ್ಮಿಕ ಸ್ಥಳಗಳು ಮತ್ತು ದೇವಾಲಯಗಳ ಸುತ್ತ ಮೂಲಸೌಕರ್ಯ ಮತ್ತು ಸಾರಿಗೆಯನ್ನು ಅಭಿವೃದ್ಧಿಪಡಿಸಲು 10 ವರ್ಷಗಳ ಅವಧಿಯಲ್ಲಿ 12,000 ಕೋಟಿಗಳನ್ನು ವ್ಯಯಿಸಲಾಗುತ್ತದೆ. ಅವುಗಳನ್ನು 'ಹಿಮ್‌ತೀರ್ಥ' ಸರ್ಕ್ಯೂಟ್‌ಗೆ ಸಂಪರ್ಕಿಸಲಾಗುತ್ತದೆ.
4. "ನಾವು ಇಲ್ಲಿ 5 ಹೊಸ ವೈದ್ಯಕೀಯ ಕಾಲೇಜುಗಳನ್ನು ತೆರೆಯುತ್ತೇವೆ. ಆರೋಗ್ಯ ಮೂಲಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ಮತ್ತು ಪ್ರಾಥಮಿಕ ಆರೋಗ್ಯವನ್ನು ಮತ್ತಷ್ಟು ಬಲಪಡಿಸಲು, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮೊಬೈಲ್ ಕ್ಲಿನಿಕ್ಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲಾಗುವುದು. ಇದರಿಂದ ದೂರದ ಪ್ರದೇಶಗಳ ಜನರು ಇದರ ಆರೋಗ್ಯ ಪ್ರಯೋಜನ ಪಡೆಯುತ್ತಾರೆ'' ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದರು.
5. ಪಕ್ಷ ಸಮೀಕ್ಷೆ ನಡೆಸಲಿದೆ. ವಕ್ಫ್ ಆಸ್ತಿಗಳನ್ನು ನ್ಯಾಯಾಂಗ ಆಯೋಗದ ಅಡಿಯಲ್ಲಿ ಕಾನೂನು ಪ್ರಕಾರ ತನಿಖೆ ನಡೆಸಲಾಗುವುದು ಮತ್ತು ಅವುಗಳ ಅಕ್ರಮ ಬಳಕೆಯನ್ನು ತಡೆಯಲಾಗುವುದು ಎಂದು ಅವರು ಹೇಳಿದರು.

ಚುನಾವಣಾ ಅಸ್ತ್ರ
ಬೆಟ್ಟದ ತುದಿಯಲ್ಲಿರುವ ರಾಜ್ಯವಾದ ಹಿಮಾಚಲ ಪ್ರದೇಶದ ವಿಧಾನಸಭೆ ಚುನಾವಣೆಯು ಇದೇ ನವೆಂಬರ್ 12ರಂದು ನಡೆಯಲಿದೆ. 68 ಸ್ಥಾನಗಳ ವಿಧಾನಸಭೆ ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಹಾಗೂ ನಾಯಕರ ರ್‍ಯಾಲಿ ನಡೆಯುತ್ತಿದೆ.
ಹಿಮಾಚಲ ಪ್ರದೇಶದಲ್ಲಿ ನಿರುದ್ಯೋಗ ಸಮಸ್ಯೆಯು ಈ ಬಾರಿ ಪ್ರಮುಖ ಚುನಾವಣಾ ಅಸ್ತ್ರವಾಗಿದೆ. ಅದರ ಅಂಕಿ-ಅಂಶಗಳೇ ಅತ್ಯಂತ ಆತಂಕಕಾರಿ ಪರಿಸ್ಥಿತಿಯ ಬಗ್ಗೆ ಸಾರಿ ಹೇಳುತ್ತವೆ. ರಾಜ್ಯದಲ್ಲಿ ನಿರುದ್ಯೋಗ ದರವು 2022ರ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ. 9.2 ಹಾಗೂ 2022ರ ಅಕ್ಟೋಬರ್ ತಿಂಗಳಿನಲ್ಲಿ ಶೇ.8.6ರಷ್ಟಿದೆ. ರಾಷ್ಟ್ರೀಯ ಸರಾಸರಿ ಶೇಕಡಾ 7.6ರಷ್ಟಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (CMIE) ಬಹಿರಂಗಪಡಿಸಿದೆ.

30 ಯುನಿಟ್ ಉಚಿತ ವಿದ್ಯುತ್
ಇದೇ ತಿಂಗಳ 12 ರಂದು ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು. ಹಳೆಯ ಪಿಂಚಣಿ ಯೋಜನೆ ಅನುಷ್ಠಾನ, 30 ಯುನಿಟ್ ಉಚಿತ ವಿದ್ಯುತ್ ಪೂರೈಕೆ ಮತ್ತು ಪ್ರತಿಯೊಂದು ಕ್ಷೇತ್ರಕ್ಕೂ 10 ಕೋಟಿ ಸ್ಟಾರ್ಟ್ ಅಫ್ ಫಂಡ್ ನೀಡುವುದಾಗಿ ಘೋಷಿಸಿದೆ.ಈ ಸಂದರ್ಭದಲ್ಲಿ ಹಿಮಾಚಲ ಪ್ರದೇಶದ ಕಾಂಗ್ರೆಸ್ ಉಸ್ತುವಾರಿ ರಾಜೀವ್ ಶುಕ್ಲಾ, ಮಾಜಿ ಪಿಸಿಸಿ ಅಧ್ಯಕ್ಷ ಸುಖ್ ವಿಂದರ್ ಸಿಂಗ್ ಸುಖು ಮತ್ತು ಐಸಿಸಿ ಕಾರ್ಯದರ್ಶಿ ತೇಜಿಂದರ್ ಪಾಲ್ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications