Himachal Pradesh Election Result 2022; ಸೆರಾಜ್ ಕ್ಷೇತ್ರದಲ್ಲಿ 20,425 ಮತಗಳ ಅಂತರದಿಂದ ಜೈರಾಮ್‌ಗೆ ಗೆಲುವು
ಶಿಮ್ಲಾ, ಡಿಸೆಂಬರ್, 08: ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022 ಮತ ಎಣಿಕೆ ನಡೆದಿದ್ದು, ಸೆರಾಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಎಂ ಜಯರಾಮ್ ಠಾಕೂರ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 20,425 ಮತಗಳ ಅಂತರದಿಂದ ಗೆದ್ದಿದ್ದು, ಗೆಲುವಿನ ಪತಾಕೆಯನ್ನು ಹಾರಿಸಿದ್ದಾರೆ.
Recommended Video

ಸ್ಪಲ್ಪ ಹೊತ್ತಿನ ಹಿಂದೆ ಸಿಎಂ ಜೈರಾಮ್ ಠಾಕೂರ್ ತಮ್ಮ ಕ್ಷೇತ್ರ ಸೇರಾಜ್‌ನಲ್ಲಿ 14,921 ಮತಗಳಿಂದ ಮುನ್ನಡೆ ಸಾಧಿಸಿದ್ದರು. ಇದೀಗ 20,425 ಮತಗಳ ಅಂತರದಿಂದ ಗೆದ್ದಿದ್ದು, ಪಕ್ಷದ ಕಾರ್ಯಕರ್ತರು ಸಂಭ್ರಾಮಾಚರಣೆಯನ್ನು ಮಾಡುತ್ತಿದ್ದಾರೆ. ಸೆರಾಜ್ ಕ್ಷೇತ್ರವು ಬಿಜೆಪಿಯ ಭದ್ರಕೋಟೆಯಾಗಿದ್ದು, ಜೈ ರಾಮ್ ಠಾಕೂರ್ 1998ರಿಂದ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. ಹಾಗೆಯೇ ಇದೀಗ ಮತ್ತೆ ಭಾರಿ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಕ್ಷೇತ್ರವನ್ನು ಭದ್ರತೆಯಿಂದ ಕಾಪಾಡಿಕೊಂಡಿದ್ದಾರೆ.

ಜನರ ಸಮಸ್ಯೆಗೆ ಪರಿಹಾರ ಸಿಗುತ್ತಾ?
ಈಗಲಾದರೂ ಮುಂದಿನ ದಿನಗಳಲ್ಲಿ ಸೆರಾಜ್ ಕ್ಷೇತ್ರದ ಜನರಿಗೆ ರಸ್ತೆ ಸಂಪರ್ಕವನ್ನು ಕಲ್ಪಸಿಕೊಡುತ್ತಾರಾ ಅನ್ನುವುದನ್ನು ಕಾದುನೋಡಬೇಕಿದೆ. ಅಲ್ಲಿನ ಸ್ಥಳೀಯರು ರಸ್ತೆ ಸಂಪರ್ಕವಿಲ್ಲದೇ ದಿನನಿತ್ಯ ಪರದಾಡುವಂತೆ ಆಗಿದೆ. ಸೆರಾಜ್ ಕಣಿವೆಯಾದ್ಯಂತ ಹಲವಾರು ಮಾರ್ಗಗಳು ಕಲ್ಲುಗಳು ಮತ್ತು ಬಂಡೆಗಳಿಂದ ಆವೃತವಾಗಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ ಎಂದು ಅಲ್ಲಿನ ಸ್ಥಳೀಯರು ಜೈರಾಮ್ ಠಾಕೂರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಮಗೆ ಮೂಲಸೌಕರ್ಯಗಳನ್ನು ಕಡದೆ ಕಡೆಗಣಿಸಲಾಗಿದೆ ಎಂದು ಕೂಡ ಸ್ಥಳೀಯರು ಆರೋಪಿಸುತ್ತಲೇ ಬಂದಿದ್ದಾರೆ. ಇದೀಗ ಭಾರಿ ಮತಗಳ ಅಂತರದಿಂದ ಮತ್ತೆ ಗೆದ್ದಿದ್ದು, ಈಗಾಲಾದರೂ ತಮ್ನ ಕ್ಷೇತ್ರ ಜನರ ಕಷ್ಟವನ್ನು ಆಲಿಸುತ್ತಾರಾ? ಅನ್ನುವುದೇ ಯಕ್ಷ ಪ್ರಶ್ನೆಯಾಗಿದೆ.

ಹಿಮಾಚಲ ಪ್ರದೇಶದ 68 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯುತ್ತಿದ್ದು, ಮತ ಎಣಿಕೆ ಕೇಂದ್ರಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. 68 ಸ್ಥಾನಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸ್ಪರ್ಧಿಸಿದ್ದರೆ. ಆಮ್ ಆದ್ಮಿ ಪಕ್ಷ 67 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಹಿಮಾಚಲ ಪ್ರದೇಶದಲ್ಲಿ ಫಲಿತಾಂಶದ ವಿವರ ಕುತೂಹಲ ಕೆರಳಿಸುತ್ತಿದ್ದು, ಸದ್ಯದ ಪ್ರಕಾರ ಬೆಳಗ್ಗೆ 11:15ರ ಸುಮಾರಿಗೆ ಕಾಂಗ್ರೆಸ್ 34 ಮತ್ತು ಬಿಜೆಪಿ 31 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಹೀಗೆ ಬಿಜೆಪಿ, ಕಾಂಗ್ರೆಸ್ ನಡುವೆ ಹಾವು ಏಣಿಯ ಆಟ ಮುಂದುವರೆದಿದೆ. ಈಗಾಗಲೇ ಸುಂದರ್ ನಗರ, ಸೆರಾಜ್ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ವಿಜಯ ಪತಾಕೆಯನ್ನು ಹಾರಿಸಿದೆ.












Click it and Unblock the Notifications