Himachal Pradesh : ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶಕ್ಕೆ ₹ 10,000 ಕೋಟಿ ನಷ್ಟ
ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶ ಅಕ್ಷರಶಃ ನಲುಗಿ ಹೋಗಿದೆ. ಮೇಘಸ್ಫೋಟಗಳು, ಭೂಕುಸಿತಗಳು ಮತ್ತು ರಸ್ತೆಗಳ ಹಾನಿಯಿಂದ ಹಿಮಾಚಲ ಜರ್ಝರಿತವಾಗಿದೆ. ಭಾರಿ ಮಳೆಯಿಂದಾಗಿ ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ 60 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ, ಗಾಯಗೊಂಡ ನಾಗರಿಕರು ಮತ್ತು ವಾಹನಗಳನ್ನು ಅವಶೇಷಗಳಡಿಯಿಂದ ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ.
ಮುಂದಿನ ಎರಡು ದಿನಗಳಲ್ಲಿ ಹಿಮಾಚಲ ಪ್ರದೇಶದಲ್ಲಿ ಮತ್ತು ಮುಂದಿನ 4-5 ದಿನಗಳಲ್ಲಿ ಉತ್ತರಾಖಂಡ ಮತ್ತು ಈಶಾನ್ಯ ಭಾರತದಲ್ಲಿ ಪ್ರತ್ಯೇಕವಾದ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.
ಭಾರೀ ಮಳೆಯಿಂದಾಗಿ, ದೆಹಲಿಯ ಯಮುನಾ ನದಿಯ ನೀರಿನ ಮಟ್ಟವು ಈ ವರ್ಷ ಎರಡನೇ ಬಾರಿಗೆ ಮಂಗಳವಾರ ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದೆ.

ಸುಧಾರಿಸಿಕೊಳ್ಳಲು ಬೇಕು ಒಂದು ವರ್ಷ
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಬುಧವಾರ ಕಾಂಗ್ರಾಕ್ಕೆ ತೆರಳುತ್ತಿದ್ದು, ಅಲ್ಲಿ ಅಣೆಕಟ್ಟು ತುಂಬಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರಾದಲ್ಲಿ ಇನ್ನೂ 100 ಮಂದಿ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಶಿಮ್ಲಾದಲ್ಲಿ ಮತ್ತೊಂದು ಮೃತದೇಹ ಪತ್ತೆಯಾಗಿದೆ. ರಾಜ್ಯಕ್ಕೆ ಸುಮಾರು ₹10 ಸಾವಿರ ಕೋಟಿ ನಷ್ಟವಾಗಿದೆ. ರಾಜ್ಯದ ಮೂಲಸೌಕರ್ಯವನ್ನು ಪುನರಾಭಿವೃದ್ಧಿ ಮಾಡಲು ನಮಗೆ ಸುಮಾರು 1 ವರ್ಷ ಬೇಕಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಕಾಂಗ್ರಾದ ಪಾಂಗ್ ಅಣೆಕಟ್ಟಿನ ತಗ್ಗು ಪ್ರದೇಶಗಳಿಂದ 800 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ನಿರಂತರ ಮಳೆಯಿಂದಾಗಿ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಸ್ಥಳಾಂತರ ಪ್ರಕ್ರಿಯೆ ನಡೆದಿದೆ.
ಕುಸಿಯುತ್ತಿರುವ ಕಟ್ಟಡಗಳು
ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಬುಧವಾರ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ರಾಜ್ಯದ ಶಿಕ್ಷಣ ಇಲಾಖೆ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದ್ದು, ಮಂಗಳವಾರ ಸಂಜೆ ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯ ಜೋಶಿಮಠದ ಬಳಿಯ ಹೆಲಾಂಗ್‌ನಲ್ಲಿ ಕಟ್ಟಡವೊಂದು ಕುಸಿದು ಬಿದ್ದು ಓರ್ವ ಸಾವನ್ನಪ್ಪಿದ್ದು, ಐವರನ್ನು ರಕ್ಷಿಸಲಾಗಿದೆ.

ಶಿಮ್ಲಾ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ, ಬುಧವಾರ ಸುದ್ದಿ ಸಂಸ್ಥೆ ಪಿಟಿಐ ಜೊತೆ ಮಾತನಾಡುತ್ತಾ, ಇತ್ತೀಚೆಗೆ ಭೂಕುಸಿತ ಸಂಭವಿಸಿದ ಸಮ್ಮರ್ ಹಿಲ್ಸ್ ಮತ್ತು ಕೃಷ್ಣ ನಗರಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಸಮ್ಮರ್ ಹಿಲ್ ಪ್ರದೇಶದ ಶಿವ ದೇವಾಲಯದಿಂದ 13 ಮೃತದೇಹಗಳನ್ನು ಹೊರತೆಗೆಯಲಾಗಿದೆ ಮತ್ತು ಕೃಷ್ಣ ನಗರದಲ್ಲಿ ಒಂದು ಮೃತದೇಹ ಪತ್ತೆಯಾಗಿದೆ ಎಂದು ಅವರು ಹೇಳಿದರು.
ಭಾರತೀಯ ವಾಯುಪಡೆ (ಐಎಎಫ್) ಮಂಗಳವಾರ ಶಿಮ್ಲಾದಲ್ಲಿ ರಕ್ಷಣಾ ಕಾರ್ಯಾಚರಣೆ ಶುರುಮಾಡಿದೆ. "ಇಂದು ಹಿಮಾಚಲ ಪ್ರದೇಶದ ಶಿಮ್ಲಾ ಬಳಿ ಭೂಕುಸಿತದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಪ್ರಯತ್ನಗಳಿಗಾಗಿ ವೆಸ್ಟರ್ನ್ ಏರ್ ಕಮಾಂಡ್‌ನ ಚಿನೂಕ್ ಹೆಲಿಕಾಪ್ಟರ್ 18 ಭಾರತೀಯ ಸೇನಾ ಸಿಬ್ಬಂದಿ ಮತ್ತು 3 ಟನ್ ಮಿನಿ ಡೋಜರ್ ಸಾಗಿಸಲಾಗಿದೆ" ಎಂದು ವಾಯುಪಡೆ ತಿಳಿಸಿದೆ.
ಹಲವು ರಾಷ್ಟ್ರೀಯ ಹೆದ್ದಾರಿಗಳು ಬಂದ್
ಹಿಮಾಚಲ ಪ್ರದೇಶ ಸಿಎಂ ಸುಖು ಮಂಗಳವಾರ ನೈಸರ್ಗಿಕ ವಿಕೋಪ ನಿರ್ವಹಣೆಗಾಗಿ ಹೈಪವರ್ ಸಮಿತಿಯೊಂದಿಗೆ ಸಭೆ ನಡೆಸಿದರು. ಕಳೆದ ನಾಲ್ಕು ದಿನಗಳಿಂದ ಶೇ.157ರಷ್ಟು ಮಳೆಯಾಗಿದ್ದು, ಇಡೀ ರಾಜ್ಯಾದ್ಯಂತ ಅಪಾರ ಪ್ರಮಾಣದ ಹಾನಿಯಾಗಿದೆ ಎಂದು ಹೇಳಿದರು.
ಅಂದಾಜಿನ ಪ್ರಕಾರ, ಈ ಮಾನ್ಸೂನ್‌ನಲ್ಲಿ ಉತ್ತರಾಖಂಡದಲ್ಲಿ ಮಳೆ ಸಂಬಂಧಿತ ಘಟನೆಗಳಿಂದ 52 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 37 ಜನರು ಗಾಯಗೊಂಡಿದ್ದಾರೆ. ಉತ್ತರಾಖಂಡದ ಚಮೋಲಿ ಪೊಲೀಸರ ಪ್ರಕಾರ, ಚಮೋಲಿ ಜಿಲ್ಲೆಯ ಪಿಪಲ್ಕೋಟಿ, ಗಡೋರಾ, ನವೋದಯ ವಿದ್ಯಾಲಯ ಪಿಪಾಲ್‌ಕೋಟಿ, ಗುಲಾಬ್‌ಕೋಟಿ, ಪಗಲಾನಳ ಮತ್ತು ವಿಷ್ಣುಪ್ರಯಾಗ ಪ್ರದೇಶಗಳಲ್ಲಿ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ.












Click it and Unblock the Notifications