ಮಾಯಾವತಿ ನಡೆಗೆ ಅಸಲಿ ಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ
ಭೋಪಾಲ್, ಅಕ್ಟೋಬರ್ 04: ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದೆ ಸ್ವತಂತ್ರವಾಗಿ ಸ್ಪರ್ಧಿಸಲು ಬಹುಜನ ಸಮಾಜವಾದಿ ಪಕ್ಷ ನಿರ್ಧರಿಸಿರುವುದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಬಿಚ್ಚಿಟ್ಟಿದ್ದಾರೆ.
"ಬಿಎಸ್ಪಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಯಾವೆಲ್ಲ ಕ್ಷೇತ್ರದಲ್ಲಿ ಕಣಕ್ಕಿಳಿಸಿಸಲು ನಿರ್ಧರಿಸಿತ್ತೋ ಅಲ್ಲೆಲ್ಲೂ ಬಿಎಸ್ಪಿ ಗೆಲ್ಲುವುದಕ್ಕೆ ಸಾಧ್ಯವಿರಲಿಲ್ಲ. ಆ ಎಲ್ಲ ಕ್ಷೇತ್ರಗಳಲ್ಲೂ ಬಿಎಸ್ಪಿಗೆ ಉತ್ತಮ ಬೆಂಬಲ ಇರಲಿಲ್ಲ. ಆದರೆ ಎಲ್ಲೆಲ್ಲಿ ಬಿಎಸ್ಪಿ ಗೆಲ್ಲಲು ಸಾಧ್ಯವಿತ್ತೋ, ಆ ಕ್ಷೇತ್ರಗಳಲ್ಲಿ ಅದು ತನ್ನ ಅಭ್ಯರ್ಥಿಗಳ ಹೆಸರನ್ನು ಸೂಚಿಸಿರಲಿಲ್ಲ. ಅದು ಸಿದ್ಧಪಡಿಸಿದ ಪಟ್ಟಿಯನ್ನು ನೋಡಿ ನಮಗೆ ಅಚ್ಚರಿಯಾಯಿತು" ಎಂದು ಕಮಲ್ ನಾಥ್ ಹೇಳಿದ್ದಾರೆ.
'ಆದ್ದರಿಂದಲೇ ಬಿಎಸ್ಪಿಗೆ ಸೋಲಬಹುದಾದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಬಾರದೆಂದು ಕಾಂಗ್ರೆಸ್ ಮನವಿ ಮಾಡಿತ್ತು. ಆದರೆ ಇದಕ್ಕೆ ಒಪ್ಪಲು ಬಿಎಸ್ಪಿ ಅಧಿನಾಯಕಿ ಮಾಯಾವತಿಯವರಿಗೆ ಇಷ್ಟವಿರಲಿಲ್ಲ. ಮೈತ್ರಿ ಮಾಡಿಕೊಳ್ಳದೆ ಹೊರನಡೆದರು' ಎಂದು ಅವರು ತಿಳಿಸಿದ್ದಾರೆ.

ಇದೇ ಡಿಸೆಂಬರ್ ತಿಂಗಳಿನಲ್ಲಿ ನಡೆಯಲಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಚುನಾವಣೆಗಳಲ್ಲಿ ಬಿಎಸ್ಪಿ ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಕಾಂಗ್ರೆಸ್ ನಿರ್ಧರಿಸಿತ್ತು. ಆದರೆ ಈ ಮೈತ್ರಿಗೆ ಒಲ್ಲೆ ಎಂದು ಬಿಎಸ್ಪಿ ಹೇಳಿದ್ದು, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆ ಕೈಜೋಡಿಸುವುದಿಲ್ಲ ಎಂದು ಬುಧವಾರ ಮಾಯಾವತಿ ಸ್ಪಷ್ಟಪಡಿಸಿದ್ದರು.












Click it and Unblock the Notifications