Super Moon: ಆಕಾಶದಲ್ಲಿ ದೈತ್ಯ ಚಂದ್ರನ ಕಣ್ತುಂಬಿಕೊಳ್ಳಿ!
ಬಾಹ್ಯಾಕಾಶದ ಮತ್ತೊಂದು ವಿಸ್ಮಯಕ್ಕೆ ಮಾನವರು ಸಾಕ್ಷಿಯಾಗಲಿದ್ದಾರೆ. ಇಂದು ಅಂದ್ರೆ ಸೆಪ್ಟೆಂಬರ್ 28ರ ರಾತ್ರಿ ಚಂದಿರ ಆಗಸದಲ್ಲಿ ಮಿಂಚಲಿದ್ದಾನೆ. 2023ರ ಕೊನೆಯ ಸೂಪರ್ ಮೂನ್ ಇದಾಗಿರುವ ಕಾರಣ ಸಾಕಷ್ಟು ಕುತೂಹಲ ಕೆರಳಿದೆ. ಸಾಮಾನ್ಯಕ್ಕಿಂತ ಅತಿಹೆಚ್ಚು ದೊಡ್ಡದಾಗಿ ಭೂಮಿ ಮೇಲಿಂದ ಚಂದ್ರ ಕಾಣಲಿದ್ದಾನೆ. ಹೀಗಾಗಿ ಚಂದ್ರನ ಸೌಂದರ್ಯ ಕಣ್ತುಂಬಿಕೊಳ್ಳಬಹುದು.
ಭೂಮಿ ಮತ್ತು ಚಂದ್ರನ ನಡುವಿನ ಅಂತರ ಸುಮಾರು 3,84,400 ಕಿಲೋ ಮೀಟರ್, ಆದ್ರೆ ಸೂಪರ್ ಮೂನ್ ವಿದ್ಯಮಾನ ಸಂಭವಿಸುವ ಸಮಯದಲ್ಲಿ ಚಂದ್ರ ಭೂಮಿಗೆ ಅತಿ ಹತ್ತಿರ ಬರುತ್ತಾನೆ. ಸೆಪ್ಟೆಂಬರ್ 28 ಹಾಗೂ ಸೆಪ್ಟೆಂಬರ್ 29ರ ರಾತ್ರಿ ಇಂತಹ ವಿದ್ಯಮಾನ ನಾವು ಕಣ್ತುಂಬಿಕೊಳ್ಳಬಹುದು. ಭೂಮಿಗೆ ಚಂದ್ರ ಹತ್ತಿರ ಬರುವ ಕಾರಣ ಭೂಮಿ ಮೇಲಿರುವ ನಾವು & ಕೋಟ್ಯಂತರ ಜೀವಿಗಳ ಕಣ್ಣಿಗೆ ಚಂದ್ರ ದೊಡ್ಡದಾಗಿ ಕಾಣುತ್ತಾನೆ. ಅದರಲ್ಲೂ ಈ ವರ್ಷದ ಕೊನೆಯ ಸೂಪರ್ ಮೂನ್ ವಿದ್ಯಮಾನ ಇದಾಗಿರುವ ಹಿನ್ನೆಲೆ ಸಾಕಷ್ಟು ಗಮನ ಸೆಳೆದಿದೆ.

ಸೂಪರ್ ಮೂನ್ ಬಲು ಅಂದ!
ಹುಣ್ಣಿಮೆಯೊಂದಿಗೆ, ಚಂದ್ರನು ಭೂಮಿಯ ಉತ್ತರ ಗೋಳಾರ್ಧದಲ್ಲಿ ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳಲಿದ್ದಾನೆ. ಮತ್ತೊಂದ್ಕಡೆ ಚಂದ್ರ ಈಗ ಭೂಮಿ ಹತ್ತಿರ ಬರುವ ಹಿನ್ನೆಲೆಯಲ್ಲಿ ಹೆಚ್ಚು ಪ್ರಕಾಶಮಾನವಾಗಿ ಕೂಡ ಕಾಣಲಿದ್ದಾನೆ. ಈ ಸಮಯದಲ್ಲಿ ಚಂದ್ರ ಮತ್ತು ಭೂಮಿ ನಡುವಿನ ಅಂತರ ತುಂಬಾ ಕಡಿಮೆ ಆಗಿರುತ್ತೆ. ಈ ವರ್ಷ ಜುಲೈ 3, ಆಗಸ್ಟ್ 1, ಆಗಸ್ಟ್ 31 ರ ಬಳಿಕ ಈಗ ಅಂದ್ರೆ ಸೆಪ್ಟೆಂಬರ್ 28 ಹಾಗೂ ಸೆಪ್ಟೆಂಬರ್ 29 ರಂದು ಸೂಪರ್ ಮೂನ್ ಅನ್ನ ವೀಕ್ಷಿಸಬಹುದು. ಹೀಗಾಗಿ ಜಗತ್ತಿನ ಗಮನ ಇಂದು ರಾತ್ರಿ ಚಂದ್ರನ ಮೇಲೆ ಇರಲಿದೆ.
ಭೂಮಿ ಮೇಲೆ ಏನು ಪ್ರಭಾವ?
ಅಂದಹಾಗೆ ಭೂಮಿ ಮೇಲೆ ಗುರುತ್ವ ಬದಲಾವಣೆಗೆ ಚಂದ್ರನೇ ಮೂಲ. ಅದ್ರಲ್ಲೂ ಇಲ್ಲಿ ಸಂಭವಿಸುವ ಸಮುದ್ರದ ಏರಿಳಿತ ಹಾಗೂ ಅಲೆಗಳ ಅಬ್ಬರಕ್ಕೂ ಚಂದ್ರನೇ ಕಾರಣ. ಹೀಗೆ ಭೂಮಿ ಮೇಲೆಯೂ ಸಾಕಷ್ಟು ವಿಚಾರಗಳನ್ನ ಚಂದ್ರ ನಿಯಂತ್ರಿಸುತ್ತಾನೆ. ಹೀಗಾಗಿ ಇದೀಗ ಸಂಭವಿಸುವ ಸೂಪರ್ ಮೂನ್ ಕೂಡ ಹಲವಾರು ಬದಲಾವಣೆಗೆ ಕಾರಣವಾಗುವ ನಿರೀಕ್ಷೆ ಕೂಡ ಇದೆ. ಅದರಲ್ಲೂ ಭೂಮಿಗೆ ಚಂದ್ರನು ಅತಿ ಹತ್ತಿರಕ್ಕೆ ಬರುವ ಕಾರಣ ಸಮುದ್ರದ ಏರಿಳಿತ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇರುತ್ತದೆ.
2016ರ ನವೆಂಬರ್ 14ರಂದು ಸಂಭವಿಸಿದ್ದ ಸೂಪರ್ ಮೂನ್ ಇತ್ತೀಚೆಗೆ ಸಂಭವಿಸಿದ ಅತಿ ವಿಸ್ಮಯಕಾರಿ ಸೂಪರ್ ಮೂನ್‌ಗಳಲ್ಲಿ ಒಂದಾಗಿದೆ. ಈ ವೇಳೆ ಭೂಮಿಗೆ ಚಂದ್ರನು ಅತಿ ಸಮೀಪಕ್ಕೆ ಬಂದಿದ್ದ. 1948ರ ಜನವರಿ 26ರಂದು ಕೂಡ ಇದೇ ರೀತಿ ಅದ್ಭುತ ಸೂಪರ್ ಮೂನ್‌ಗೆ ಮನುಷ್ಯ ಸಾಕ್ಷಿಯಾಗಿದ್ದ. ಇನ್ನು 2034ರ ನವೆಂಬರ್ 25ಕ್ಕೆ ಇದೇ ರೀತಿಯಾಗಿ ಸೂಪರ್ ಮೂನ್ ಒಂದನ್ನ ಮನಷ್ಯರು ಕಣ್ತುಂಬಿಕೊಳ್ಳಬಹುದು. ಹೀಗಾಗಿ ಇಂದು ಮತ್ತು ನಾಳೆ ಬಾಹ್ಯಾಕಾಶ ಉತ್ಸಾಹಿಗಳ ಕಣ್ಣಿಗೆ ಹಬ್ಬವೇ ಸರಿ.












Click it and Unblock the Notifications