ಮುಂದಿನ 5 ದಿನಗಳವರೆಗೆ ಈ ರಾಜ್ಯಗಳಲ್ಲಿ ಭಾರೀ ಮಳೆ ಸೂಚನೆ
ನವದೆಹಲಿ, ಸೆಪ್ಟೆಂಬರ್ 24: ಮುಂಗಾರು ಹಾಗೂ ವಾಯುಭಾರ ಕುಸಿತದ ಪರಿಣಾಮವಾಗಿ ಗುಜರಾತ್, ಪೂರ್ವ ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಕೊಂಕಣ ಪ್ರದೇಶದಲ್ಲಿ ಮುಂದಿನ ಐದು ದಿನಗಳ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಭಾನುವಾರದಿಂದ ಪಶ್ಚಿಮ ಬಂಗಾಳ ಹಾಗೂ ಒಡಿಶಾದಲ್ಲಿ ಅಧಿಕ ಮಳೆಯಾಗುವ ಸೂಚನೆಯಿದೆ ಎಂದು ಹೇಳಿದೆ.
ಮುಂಗಾರು ತನ್ನ ಸಾಮಾನ್ಯ ಸ್ಥಾನಕ್ಕೆ ಮರಳಲಿದ್ದು, ಮುಂದಿನ ಐದು ದಿನಗಳ ಕಾಲ ದಕ್ಷಿಣದಲ್ಲಿ ಉಳಿಯಲಿದೆ. ಇದರೊಂದಿಗೆ, ಛತ್ತೀಸ್‌ಗಡ ಹಾಗೂ ನೆರೆಹೊರೆಯಲ್ಲಿ ಚಂಡಮಾರುತ ಪ್ರಭಾವ ಮುಂದುವರೆಯಲಿದೆ. ಹೀಗಾಗಿ ಮುಂದಿನ ಎರಡು ದಿನಗಳ ಕಾಲ ಮಧ್ಯ ಪ್ರದೇಶದಾದ್ಯಂತ ಪಶ್ಚಿಮ- ವಾಯವ್ಯ ದಿಕ್ಕಿಗೆ ಚಲಿಸುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಿದೆ.

ನೈಋತ್ಯ ರಾಜಸ್ಥಾನ ಹಾಗೂ ಪೂರ್ವ -ಮಧ್ಯ ಬಂಗಾಳಕೊಲ್ಲಿ ಹಾಗೂ ನೆರೆಹೊರೆಯಲ್ಲಿ ಚಂಡಮಾರುತದ ಪರಿಚಲನೆಯಿದ್ದು, ಮುಂದಿನ 12 ಗಂಟೆಗಳಲ್ಲಿ ಈ ಪ್ರದೇಶದಲ್ಲಿ ವಾಯುಭಾರ ಕುಸಿತವಾಗುವ ಸಾಧ್ಯತೆಯಿದೆ.
ನಂತರ ಮುಂದಿನ 48 ಗಂಟೆಗಳಲ್ಲಿ ಮಾರುತಗಳು ಪಶ್ಚಿಮ-ವಾಯವ್ಯ ದಿಕ್ಕಿನಲ್ಲಿ ಒಡಿಶಾ ಕರಾವಳಿ ಕಡೆಗೆ ಚಲಿಸುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಮುಂದಿನ ಐದು ದಿನಗಳಲ್ಲಿ ಪೂರ್ವ ರಾಜಸ್ಥಾನ, ಪಶ್ಚಿಮ ಮಧ್ಯ ಪ್ರದೇಶ, ಗುಜರಾತ್, ಕೊಂಕಣ, ಗೋವಾ ಹಾಗೂ ಆಂಧ್ರ ಕರಾವಳಿ ಪ್ರದೇಶದಲ್ಲಿ ಭಾರೀಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ.
ಗುಜರಾತ್‌ನಲ್ಲಿ ಸೆಪ್ಟೆಂಬರ್ 25 ಹಾಗೂ 26ರಂದು, ಸೌರಾಷ್ಟ್ರ, ಕಚ್‌ನಲ್ಲಿ ಸೆ 26 ಹಾಗೂ 27ರಂದು, ಆಂಧ್ರದ ಕರಾವಳಿಯಲ್ಲಿ ಭಾನುವಾರದಂದು ಭಾರೀ ಮಳೆಯಾಗಲಿದೆ ಎಂದು ಮಾಹಿತಿ ನೀಡಿದೆ.

ಮುಂದಿನ 12 ಗಂಟೆಗಳಲ್ಲಿ ಈಶಾನ್ಯ ಹಾಗೂ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಹಾಗೂ ಪಶ್ಚಿಮ ವಾಯವ್ಯ ದಿಕ್ಕಿನಲ್ಲಿ ಒತ್ತಡ ಪ್ರದೇಶ ಸೃಷ್ಟಿಯಾಗಿ, ಭಾನುವಾರದಿಂದ ಒಡಿಶಾ ಹಾಗೂ ಪಶ್ಚಿಮ ಬಂಗಾಳದಲ್ಲಿ ಮಳೆ ಆರಂಭವಾಗಲಿದೆ ಎಂದು ತಿಳಿಸಿದೆ.
ಕೇರಳ ಹಾಗೂ ಮಹಾರಾಷ್ಟ್ರದಲ್ಲಿ ಸೆಪ್ಟೆಂಬರ್ 25ರಿಂದ ವ್ಯಾಪಕ ಮಳೆಯಾಗಲಿರುವುದಾಗಿ ಮುನ್ಸೂಚನೆ ನೀಡಿದೆ.
ಈಶಾನ್ಯ ಹಾಗೂ ಪೂರ್ವ-ಮಧ್ಯ ಬಂಗಾಳ ಕೊಲ್ಲಿಯಲ್ಲಿ ಸೆ. 24ರಂದು ಒತ್ತಡ ರೂಪುಗೊಳ್ಳುವ ಸಾಧ್ಯತೆಯಿರುವುದರಿಂದ ಮುಂಗಾರು ಮತ್ತೆ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಜಮ್ಮು ಹಾಗೂ ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್ ಹಾಗೂ ಹರಿಯಾಣದಲ್ಲಿ ಶುಕ್ರವಾರ ಮಳೆ ಮುಂದುವರೆಯಲಿದೆ.
ಇದರೊಂದಿಗೆ, ದೇಶದಲ್ಲಿ ಈ ಬಾರಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಗಿಂತ 27% ಹೆಚ್ಚಿನ ಮಳೆಯಾಗಲಿದೆ. ಬಂಗಾಳ ಕೊಲ್ಲಿಯಲ್ಲಿ ಇತ್ತೀಚಿಗೆ ರೂಪುಗೊಂಡಿರುವ ವಾಯುಭಾರ ಕುಸಿತ ಮಳೆ ಪ್ರಮಾಣದ ಏರಿಕೆಗೆ ಕಾರಣವಾಗಲಿದೆ. ಇದರಿಂದಾಗಿ ಸಾಮಾನ್ಯವಾಗಿ ಸೆಪ್ಟೆಂಬರ್ 17ರಿಂದ ಕಡಿಮೆಯಾಗಬೇಕಿದ್ದ ಮಳೆ ಇನ್ನೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರ್ನಾಟಕದಲ್ಲಿ ಮಳೆ:
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 28ರವರೆಗೂ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಒಳನಾಡಿನ ಬೀದರ್, ಕಲಬುರಗಿ, ಯಾದಗಿರಿ, ಕೊಪ್ಪಳ, ವಿಜಯಪುರ, ರಾಯಚೂರು, ಧಾರವಾಡ, ಹಾವೇರಿ ಜಿಲ್ಲೆಗಳ ಕೆಲವೆಡೆ ಮುಂದಿನ ಐದು ದಿನ ಭಾರಿ ಮಳೆಯಾಗಲಿರುವುದಾಗಿ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಮುಂಗಾರು ಅಂತ್ಯವಾಗುವುದು ಈ ಬಾರಿ ಇನ್ನಷ್ಟು ವಿಳಂಬವಾಗುತ್ತದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದ್ದು, ಸೆಪ್ಟೆಂಬರ್ 26ರವರೆಗೂ ಹತ್ತು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆಯನ್ನು ನೀಡಿದೆ. ಹತ್ತು ರಾಜ್ಯಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.











Click it and Unblock the Notifications