ಹೆಲೆನ್ ಭೀತಿಗೆ ನಲುಗಿದ ಆಂಧ್ರ ಕರಾವಳಿ
ಹೈದರಾಬಾದ್, ನ.22: ಬಂಗಾಳಕೊಲ್ಲಿ ಯಲ್ಲಿ ತೀವ್ರ ವಾಯುಭಾರ ಕುಸಿತದ ಪರಿಣಾಮ ಆಂಧ್ರ ಪ್ರದೇಶದಲ್ಲಿ ಹೆಲೆನ್ ಚಂಡಮಾರುತ ಸಂಜೆ ವೇಳೆಗೆ ಅಪ್ಪಳಿಸುವ ಸಾಧ್ಯತೆಯಿದ್ದು, ಕರಾವಳಿ ತೀರಭಾಗಕ್ಕೆ ಮಧ್ಯಾಹ್ನದಿಂದಲೇ ಕಾಟ ತೊಡಗಿದೆ. ಭಾರಿ ಕಟ್ಟೆಚ್ಚರದ ನಡುವೆ 30 ಜನ ಮೀನುಗಾರರ ತಂಡ ಕಡಲಿನಲ್ಲಿ ಕಣ್ಮರೆಯಾಗಿದೆ, ಏಳು ಮಂದಿ ಸಾವನ್ನಪ್ಪಿರುವ ದುರಂತ ಸುದ್ದಿಯೂ ಅಪ್ಪಳಿಸಿದೆ.
ನೆಲ್ಲೂರು ಮತ್ತು ಪ್ರಕಾಶಂ ಜಿಲ್ಲೆಯಲ್ಲಿ ಕಳೆದ ರಾತ್ರಿಯಿಂದಲೇ ವ್ಯಾಪಕ ಮಳೆಯಾಗುತ್ತಿದ್ದು,ಗುಂಟೂರು, ಕೃಷ್ಣಾ ಜಿಲ್ಲೆಗೆ ಕಾಲಿಟ್ಟಿದ್ದು, ಸಂಜೆ ವೇಳೆಗೆ ದಕ್ಷಿಣ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ವಿಪತ್ತು ನಿರ್ವಹಣಾ ಆಯುಕ್ತ ಸಿ.ಪಾರ್ಥಸಾರಥಿ ತಿಳಿಸಿದ್ದಾರೆ.
ಶುಕ್ರವಾರ ಸಂಜೆ ವೇಳೆಗೆ ಆಂಧ್ರದ ಓಂಗಲ್, ಕವಾಲಿ ಮತ್ತು ಶ್ರೀಹರಿಕೋಟ ನಡುವೆ ಹೆಲೆನ್ ಚಂಡಮಾರುತ ಬೀಸಲಿದ್ದು, ನಾಳೆ ಓಂಗಲ್ ಪ್ರವೇಶಿಸುವ ಸಾಧ್ಯತೆಯಿದೆ. ಪ್ರತಿ ಗಂಟೆಗೆ 55ಕಿಮೀ ನಿಂದ 60 ಕಿಮೀ ವೇಗದಲ್ಲಿ ಬೀಸುತ್ತಿದೆ. ಸಂಜೆ ವೇಳೆಗೆ ಇದರ ವೇಗ 100ಕಿಮೀ ನಿಂದ 120 ಕಿಮೀ ಹೆಚ್ಚಳವಾಗಲಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಹೆಲೆನ್ ಚಂಡಮಾರುತ ಅಪ್ಪಳಿಸುವ ಸಾಧ್ಯತೆಯಿರುವುದರಿಂದ ಕರಾವಳಿ ತೀರ ಪ್ರದೇಶದ ಜಿಲ್ಲೆಗಳಲ್ಲಿ ಭಾರೀ ಸಂಖ್ಯೆಯ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ನೆಲ್ಲೂರು, ಪ್ರಕಾಶಂ, ಗುಂಟೂರು, ಕೃಷ್ಣಾ ಮತ್ತಿತರ ಕಡೆ ನಿನ್ನೆ ಸಂಜೆಯಿಂದಲೇ ತುಂತುರು ಮಳೆಯಾಗುತ್ತಿದ್ದು, ಇಂದು ಇದರ ಪ್ರಮಾಣ ಹೆಚ್ಚಾಗಿದೆ. ಉತ್ತರ ಆಂಧ್ರ ಪ್ರದೇಶ, ಉತ್ತರ ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ವ್ಯಾಪಕ ಮಳೆಯಾಗುವ ಸಂಭವವಿದೆ. ಈಗಾಗಲೇ ಆಂಧ್ರ ಪ್ರದೇಶಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಅಧಿಕಾರಿಗಳು ಆಗಮಿಸಿದ್ದಾರೆ.

ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ
ಒಟ್ಟು ಆರು ತಂಡಗಳನ್ನು ಕರಾವಳಿ ಪ್ರದೇಶದಲ್ಲಿ ನಿಯೋಜಿಸಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ವಾಹನಗಳಲ್ಲಿ ತಂಡೋಪತಂಡವಾಗಿ ಜನರನ್ನು ಅಧಿಕಾರಿಗಳು ಸ್ಥಳಾಂತರ ಮಾಡುವಲ್ಲಿ ತಲ್ಲೀನರಾಗಿದ್ದಾರೆ.

ಮೀನುಗಾರರಿಗೆ ಸೂಚನೆ
ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ ನೀಡಲಾಗಿದೆ.
ಭಾರೀ ಪ್ರಮಾಣದಲ್ಲಿ ಜನರನ್ನು ಸ್ಥಳಾಂತರ ಮಾಡುತ್ತಿರುವುದರಿಂದ ಕೇಂದ್ರ ಸರ್ಕಾರ ಹೆಚ್ಚಿನ ವಾಯುಪಡೆ ವಿಮಾನಗಳನ್ನು ನೀಡಬೇಕೆಂದು ಆಂಧ್ರ ಪ್ರದೇಶ ಸರ್ಕಾರ ಮನವಿ ಮಾಡಿದೆ. ಆದರೆ ಎಚ್ಚರಿಕೆ ಲೆಕ್ಕಿಸದೆ ಕಡಲಿಗೆ ಇಳಿದ 30 ಮೀನುಗಾರರಿದ್ದ ತಂಡ ಕಣ್ಮರೆಯಾಗಿದೆ
ರಕ್ಷಣಾ ಕಾರ್ಯಕ್ಕೆ ಸಜ್ಜು
ರಕ್ಷಣಾ ಕಾರ್ಯಕ್ಕೆ ಸ್ಥಳೀಯ ಪೊಲೀಸರು, ಕೇಂದ್ರ ವಿಪತ್ತು ನಿರ್ವಹಣಾ, ನುರಿತ ಈಜು ಗಾರರನ್ನು ಬಳಸಿಕೊಳ್ಳಲಾಗುತ್ತಿದೆ. ಅಲ್ಲಲ್ಲಿ ತುಂತುರು ಮಳೆಯಾಗುತ್ತಿ ವುದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಕಡೆ ರಸ್ತೆಗಳು ಬಿರುಕು ಬಿಟ್ಟಿದ್ದು, ಮರಗಳು ಧರೆಗುರುಳಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ತುರ್ತು ಕ್ರಮ ಕೈಗೊಂಡಿರುವುದರಿಂದ ಆಗಬಹುದಾದ ಹೆಚ್ಚಿನ ಅನಾಹುತವನ್ನು ಸದ್ಯದ ಮಟ್ಟಿಗೆ ತಡೆಯುವಲ್ಲಿ ಯಶಸ್ವಿಯಾಗಿದೆ.
ಮಚಲೀಪಟ್ಟಣಂನಲ್ಲಿ ಹೊಡೆತ
ಪೂರ್ವ ಹಾಗೂ ಪಶ್ಚಿಮ ಗೋದಾವರಿ ಜಿಲ್ಲೆಗಳ ಕರಾವಳಿ, ಮಚಲೀಪಟ್ಟಣದಲ್ಲಿ ಹೆಲೆನ್ ತನ್ನ್ ಪ್ರಭಾವ ತೋರಿಸಿದೆ. 7 ಜನ ಸಾವನ್ನಪ್ಪಿರುವ ವರದಿ ಬಂದಿದೆ.

ಮೀನುಗಾರರ ಸಮಸ್ಯೆ
ಅಗತ್ಯ ವಸ್ತುಗಳ ಕೊರತೆ, ನಿತ್ಯದ ಸಂಬಳ ಸಿಗದೆ ಪ್ರಾಕೃತಿಕ ವೈಪರೀತ್ಯದ ಎದುರು ಕೈಕಟ್ಟಿ ಕೂರುವ ಪರಿಸ್ಥಿತಿಯಲ್ಲಿ ಆಂಧ್ರದ ಮೀನುಗಾರರಿದ್ದಾರೆ












Click it and Unblock the Notifications