ಹಿಂದುತ್ವ ಗಟ್ಟಿಯಾಗಬೇಕಾದರೆ ಹಿಂದುಗಳು 5 ಮಕ್ಕಳನ್ನು ಹೆರಬೇಕಂತೆ!

ಬಲ್ಲಿಯಾ, ಜುಲೈ 26: 'ಹಿಂದುತ್ವ ಗಟ್ಟಿಯಾಗಿರಬೇಕೆಂದರೆ ಪ್ರತಿ ಹಿಂದು ದಂಪತಿಯೂ ಐದು ಮಕ್ಕಳನ್ನು ಹೆರಬೇಕು' ಎಂದು ಉತ್ತರ ಪ್ರದೇಶದ ಬಲ್ಲಿಯಾ ಶಾಸಕ ಸುರೇಂದ್ರ ಸಿಂಗ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ಹಿಂದುಗಳ ಜನಸಂಖ್ಯೆಯನ್ನು ಹೆಚ್ಚಿಸುವುದು ಅತ್ಯಗತ್ಯ ಎಂದರು.
ಹಿಂದೂಗಳು ಹೆಚ್ಚು ಮಕ್ಕಳು ಮಾಡಬೇಕು: ಗಿರಿರಾಜ್ ಸಿಂಗ್
'ಎಲ್ಲಾ ಭಾರತೀಯ ದಂಪತಿಯೂ ಕನಿಷ್ಠವೆಂದರೂ ಐದು ಮಕ್ಕಳನ್ನು ಹೆರಬೇಕು. ಈ ಮೂಲಕ ಹಿಂದುಗಳ ಜನಸಂಖ್ಯೆ ಹೆಚ್ಚಿದರೆ, ಹಿಂದುತ್ವವನ್ನು ಯಾರೂ ಸ್ಪರ್ಶಿಸುವುದಕ್ಕೆ ಬರುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಭಾರತ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಗೂ ಕಾರಣ ಜನಸಂಖ್ಯೆಯ ಹೆಚ್ಚಳ ಎಂದು ತಜ್ಞರು ವಿಶಸ್ಲೇಷಿಸುತ್ತಿರುವಾಗ ಪ್ರತಿ ದಂಪತಿಯೂ ಐದು ಮಕ್ಕಳನ್ನು ಹೆರಬೇಕು ಎಂಬ ಹೇಳಿಕೆ ವಿವಾದ ಎಬ್ಬಿಸಿದೆ.
ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ನೀಡುವುದರಲ್ಲೇ ಹೆಸರಾದ ಸುರೇಂದ್ರ ಸಿಂಗ್, 'ಮರ್ಯಾದಾ ಪುರುಷೋತ್ತಮ ರಾಮನ ಕಾಲದಲ್ಲೂ ಅತ್ಯಾಚಾರ ಪ್ರಕರಣಗಳನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ' ಎಂದು ಇತ್ತೀಚೆಗಷ್ಟೇ ಹೇಳಿಕೆ ನೀಡಿದ್ದರು.
ಅತ್ಯಾಚಾರ ಪ್ರಕರಣಗಳನ್ನು ಸಂವಿಧಾನದಿಂದ ನಿಯಂತ್ರಿಸಲಸು ಸಾಧ್ಯವಿಲ್ಲ, ಅಂಥ ಕೃತ್ಯ ಮಾಡದಂಥ ಮೌಲ್ಯಯುತ ಸಂಸ್ಕಾರ ಪ್ರತಿವ್ಯಕ್ತಿಗೂ ಸಿಗಬೇಕು ಎಂದು ಅವರು ಹೇಳಿದ್ದರು.
ಹಿಂದುಗಳು ಹೆಚ್ಚು ಮಕ್ಕಳನ್ನು ಮಾಡಿಕೊಳ್ಳುವ ಮೂಲಕ ದೇಶದಲ್ಲಿ ಹಿಂದುಗಳ ಜನಸಂಖ್ಯೆಯನ್ನು ಹೆಚ್ಚಿಸಲು ಗಂಭೀರವಾಗಿ ಯೋಚಿಸಬೇಕು" ಎಂದು 2016 ರಲ್ಲಿ ಸಚಿವ ಗಿರಿರಾಜ್ ಸಿಂಗ್ ನೀಡಿದ್ದ ಹೇಳಿಕೆ ವಿವಾದ ಸೃಷ್ಟಿಸಿತ್ತು.