Free Booster Dose: ಹರಿಯಾಣದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಬೂಸ್ಟರ್ ಡೋಸ್ ಉಚಿತ
ನವದೆಹಲಿ, ಏಪ್ರಿಲ್ 26: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಾಲ್ಕನೇ ಅಲೆಯನ್ನು ನಿಯಂತ್ರಿಸುವ ದೃಷ್ಟಿಯಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಬೂಸ್ಟರ್ ಡೋಸ್ ಅನ್ನು ನೀಡುವುದಕ್ಕೆ ಹರಿಯಾಣದ ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ 18-59 ವಯೋಮಾನದ ಎಲ್ಲಾ ಅರ್ಹ ಫಲಾನುಭವಿಗಳಿಗೆ ಯಾವುದೇ ಪಾವತಿಯಿಲ್ಲದೇ ಉಚಿತವಾಗಿ ಮೂರನೇ ಡೋಸ್ ಲಸಿಕೆಯನ್ನು ಸರ್ಕಾರದಿಂದ ನೀಡಲಾಗುವುದು ಎಂದು ಸೋಮವಾರ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಸರ್ಕಾರ ಘೋಷಿಸಿದೆ. ಈ ಯೋಜನೆಗಾಗಿ ರಾಜ್ಯ ಸರ್ಕಾರವು ಬರೋಬ್ಬರಿ 300 ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ತಿಳಿಸಿದೆ.
ದೆಹಲಿ ಸರ್ಕಾರವೂ ಕೂಡಾ ಈ ಹಿಂದೆ ಸರ್ಕಾರಿ ಆಸ್ಪತ್ರೆಗಳಲ್ಲಿ 18 ರಿಂದ 59 ವರ್ಷ ವಯಸ್ಸಿನ ಜನರಿಗೆ ಮುನ್ನೆಚ್ಚರಿಕೆ ಅಥವಾ ಬೂಸ್ಟರ್ ಡೋಸ್‌ಗಳನ್ನು ಉಚಿತವಾಗಿ ನೀಡುವುದಾಗಿ ಘೋಷಿಸಿತ್ತು. ದೆಹಲಿಯ ಎಲ್ಲಾ ಅರ್ಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್‌ನ ಪ್ರಯೋಜನವನ್ನು ನೀಡಲು, 18 ರಿಂದ 59 ವರ್ಷ ವಯಸ್ಸಿನವರಿಗೆ ಏಪ್ರಿಲ್ 21 ರಿಂದ ಎಲ್ಲಾ ಸರ್ಕಾರಿ CVC ಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ ಎಂದು ದೆಹಲಿ ಆರೋಗ್ಯ ಇಲಾಖೆ ತಿಳಿಸಿತ್ತು.

ಮೂರನೇ ಡೋಸ್ ಪಡೆಯಲು ಕೇಂದ್ರದ ಅನುಮತಿ:
ಕಳೆದ ಏಪ್ರಿಲ್ 10ರಂದು ಮೋದಿ ಸರ್ಕಾರವು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ವಯಸ್ಕರಿಗೆ ಬೂಸ್ಟರ್ ಡೋಸ್ ಅನ್ನು ನೀಡಲು ಅನುಮತಿ ನೀಡಿತ್ತು. "18 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಎರಡನೇ ಡೋಸ್ ಆಡಳಿತದ ನಂತರ ಒಂಬತ್ತು ತಿಂಗಳುಗಳನ್ನು ಪೂರ್ಣಗೊಳಿಸಿದ ಎಲ್ಲರೂ ಮುನ್ನೆಚ್ಚರಿಕೆ ಡೋಸ್‌ಗೆ ಅರ್ಹರಾಗಿರುತ್ತಾರೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿತ್ತು.
ಕಾಸು ಕೊಟ್ಟು ಲಸಿಕೆ ಪಡೆಯುವವರ ಸಂಖ್ಯೆ ವಿರಳ:
ದೇಶದಲ್ಲಿ 18 ರಿಂದ 59 ವಯೋಮಾನದವರಿಗೆ ಖಾಸಗಿ ಕೇಂದ್ರಗಳಲ್ಲಿ ಮಾತ್ರ ಬೂಸ್ಟರ್ ಡೋಸ್ ನೀಡಲಾಗುತ್ತಿದೆ. ಹೀಗೆ ಪಡೆಯುವ ಲಸಿಕೆಗೆ ಜನರೇ ಹಣ ಪಾವತಿ ಮಾಡಬೇಕು. ಈ ಕಾರಣದಿಂದಾಗಿಯೇ ಮುನ್ನೆಚ್ಚರಿಕೆ ಡೋಸ್ ಪಡೆದುಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. 18-59 ವರ್ಗದಲ್ಲಿ ಮುನ್ನೆಚ್ಚರಿಕೆಯ ಡೋಸ್‌ಗಳನ್ನು "ಮುಖ್ಯವಾಗಿ ವಿದೇಶದಲ್ಲಿ ಪ್ರಯಾಣಿಸಲು ಅಗತ್ಯವಿರುವವರು ಮತ್ತು ತೀವ್ರ ಅಸ್ವಸ್ಥತೆಯಿಂದ ಬಳಲುತ್ತಿರುವವರು ಮಾತ್ರ ತೆಗೆದುಕೊಳ್ಳುತ್ತಾರೆ" ಎಂದು ತಜ್ಞರು ಹೇಳಿದರು. ಇದನ್ನು ಅರಿತುಕೊಂಡ ಹರಿಯಾಣ ಸರ್ಕಾರವು ರಾಜ್ಯದಲ್ಲಿ ಕೋವಿಡ್-19 ನಾಲ್ಕನೇ ಅಲೆಯನ್ನು ನಿಯಂತ್ರಿಸುವ ಉದ್ದೇಶದಿಂದ ಉಚಿತವಾಗಿ ಬೂಸ್ಟರ್ ಡೋಸ್ ವಿತರಿಸುವುದಕ್ಕೆ ನಿರ್ಧರಿಸಿದೆ.
ಬೂಸ್ಟರ್ ಡೋಸ್ ಲಸಿಕೆಯ ಲಭ್ಯತೆಯಲ್ಲಿನ ಕೊರತೆ:
ದೆಹಲಿ, ಮುಂಬೈ, ಬೆಂಗಳೂರು ಮತ್ತು ಕೋಲ್ಕತ್ತಾದಂತಹ ಮೆಟ್ರೋ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿರುವ ಖಾಸಗಿ ಲಸಿಕೆ ಕೇಂದ್ರಗಳು ಇದಕ್ಕೆ ಪ್ರಮುಖ ಕಾರಣವಾಗಿದೆ. CoWin ಮಾಹಿತಿಯ ಪ್ರಕಾರ, 19,494 ಸರ್ಕಾರಿ ಲಸಿಕೆ ಸೈಟ್‌ಗಳಿಗೆ ಹೋಲಿಸಿದರೆ 893 ಖಾಸಗಿ ಲಸಿಕೆ ಸೈಟ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಖಾಸಗಿ ಲಸಿಕೆ ಕೇಂದ್ರಗಳ ಸಂಖ್ಯೆ ಕಡಿಮೆಯಾಗಿರುವ ದೊಡ್ಡ ಮತ್ತು ಮಧ್ಯಮ ಗಾತ್ರದ ರಾಜ್ಯಗಳಲ್ಲಿ 18-59 ವಯಸ್ಸಿನವರಿಗೆ 5,500ಕ್ಕಿಂತ ಕಡಿಮೆ ಜನರು ಮೂರನೇ ಡೋಸ್‌ಗಳನ್ನು ಪಡೆದುಕೊಂಡಿದ್ದಾರೆ. ರಾಜಸ್ಥಾನದಲ್ಲಿ 3,918, ಮಧ್ಯಪ್ರದೇಶ 4,303 ಮತ್ತು ಜಾರ್ಖಂಡ್ 5,290 ಮಂದಿಗೆ ಮುನ್ನೆಚ್ಚರಿಕೆ ಡೋಸ್ ವಿತರಣೆ ಮಾಡಲಾಗಿದೆ. ಛತ್ತೀಸ್‌ಗಢವು ಇದುವರೆಗೆ 18-59 ವಯಸ್ಸಿನವರಿಗೆ ಕೇವಲ 532 ಮುನ್ನೆಚ್ಚರಿಕೆ ಡೋಸ್‌ಗಳನ್ನು ನೀಡಿದೆ. ಬಿಹಾರದಲ್ಲಿ ಇದೇ ವಯೋಮಾನದ 22,141 ಮಂದಿಗೆ ಮಾತ್ರ 3ನೇ ಡೋಸ್ ಲಸಿಕೆ ನೀಡಲಾಗಿದೆ. ಹರಿಯಾಣ 20 ಸಾವಿರಕ್ಕಿಂತ ಹೆಚ್ಚು ಜನರು ಮೂರನೇ ಡೋಸ್ ಪಡೆದುಕೊಂಡಿದ್ದರೆ, ದೆಹಲಿಯ ಗುರುಗಾವ್ ಪ್ರದೇಶದಲ್ಲಿ 19,908 ಮಂದಿ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಂಡಿದ್ದಾರೆ.
ಯಾರು ಬೂಸ್ಟರ್ ಡೋಸ್ ಪಡೆಯಲು ಅರ್ಹರು?:
ದೇಶದ ಖಾಸಗಿ ಆಸ್ಪತ್ರೆಗಳಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಏಪ್ರಿಲ್ 10 ರಿಂದ ಕೋವಿಡ್-19 ಬೂಸ್ಟರ್ ಲಸಿಕೆಯನ್ನು ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಘೋಷಿಸಿದೆ. ಆದರೆ 18 ವರ್ಷ ಮೇಲ್ಪಟ್ಟ ನೀವು ಎರಡನೇ ಡೋಸ್ ಲಸಿಕೆಯನ್ನು ಪಡೆದು 9 ತಿಂಗಳು ಕಳೆದಿದ್ದರೆ ಮಾತ್ರ, ಬೂಸ್ಟರ್ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಅರ್ಹರಾಗಿರುತ್ತೀರಿ.
ದೇಶದಲ್ಲಿ ಬೂಸ್ಟರ್ ಡೋಸ್ ಲಸಿಕೆ ಬೆಲೆ ಎಷ್ಟು?:
ದೇಶದ ಖಾಸಗಿ ಕೋವಿಡ್-19 ಲಸಿಕೆ ಕೇಂದ್ರದಲ್ಲಿ ಕೋವಿಶೀಲ್ಡ್ ಬೂಸ್ಟರ್ ಲಸಿಕೆ ಒಂದು ಡೋಸ್ ದರವನ್ನು 600 ರೂಪಾಯಿ ಹಾಗೂ ಕೊವ್ಯಾಕ್ಸಿನ್ ಲಸಿಕೆಯ ಒಂದು ಡೋಸ್ ದರವನ್ನು 1200 ರೂಪಾಯಿಯಿಂದ 225 ರೂಪಾಯಿಗೆ ಕಡಿತಗೊಳಿಸಲಾಗಿದೆ. ಸೆರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಆದರ್ ಪೂನಾವಲ್ಲಾ ಮತ್ತು ಭಾರತ್ ಬಯೋಟೆಕ್ ಸಹ-ಸಂಸ್ಥಾಪಕಿ ಸುಚಿತ್ರಾ ಎಲಾ ಅವರು ಕೇಂದ್ರ ಸರ್ಕಾರದ ಜೊತೆ ನಡೆಸಿದ ಚರ್ಚೆಯ ನಂತರ ಟ್ವಿಟರ್‌ನಲ್ಲಿ ಬೆಲೆ ಕಡಿತದ ಬಗ್ಗೆ ಘೋಷಿಸಿದ್ದಾರೆ. ದೇಶದ ಖಾಸಗಿ ಆಸ್ಪತ್ರೆಗಳಲ್ಲಿ ಭಾನುವಾರದಿಂದ ಬೂಸ್ಟರ್ ಡೋಸ್ ಲಸಿಕೆ ಲಭ್ಯವಾಗಲಿದೆ.












Click it and Unblock the Notifications