Haryana Assembly Election 2024: ರಾಜಕೀಯ ಪಕ್ಷಗಳಿಗೆ ಖಡಕ್ ಎಚ್ಚರಿಕೆ ಕೊಟ್ಟ ಚುನಾವಣಾ ಆಯೋಗ
ಹರಿಯಾಣದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ಪಕ್ಷಗಳು ಬಿರುಸಿನ ಪ್ರಚಾರದಲ್ಲಿವೆ. ಇದರ ನಡುವೆಯೇ ಚುನಾವಣಾ ಆಯೋಗವು ಹರಿಯಾಣದಲ್ಲಿ ಚುನಾವಣೆಗೆ ಸಿದ್ಧವಾಗಿರುವ ಪಕ್ಷಗಳಿಗೆ ಖಡಕ್ ಸಂದೇಶವೊಂದನ್ನು ರವಾನಿಸಿದೆ.
ರಾಜಕೀಯ ಪಕ್ಷಗಳು ಹಾಗೂ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಯಾವುದೇ ಶಾಲಾ, ಕಾಲೇಜು ಮೈದಾನಗಳನ್ನು ಬಳಕೆ ಮಾಡಬಾರದು ಎಂದು ಹರಿಯಾಣದ ಮುಖ್ಯ ಚುನಾವಣಾಧಿಕಾರಿ ಪಂಕಜ್ ಅಗರ್ವಾಲ್ ಸೂಚನೆ ನೀಡಿದ್ದಾರೆ.

ರಾಜಕೀಯ ಪಕ್ಷಗಳು ಯಾವುದೇ ಚುನಾವಣಾ ರ್‍ಯಾಲಿಗಳಿಗೆ ಶಾಲಾ ಮತ್ತು ಕಾಲೇಜಿಗೆ ಸೇರಿದ ಆಟದ ಮೈದಾನಗಳನ್ನು ಬಳಸಲು ಚುನಾವಣಾ ಆಯೋಗವು ಅನುಮತಿ ನೀಡುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಹರಿಯಾಣ ಹೈಕೋರ್ಟ್‌ನ ತೀರ್ಪಿನ ಅನುಸಾರವಾಗಿಯೇ ಈ ನಿಷೇಧ ಹೇರಲಾಗಿದೆ. ಅದೇ ರೀತಿ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ನಡುವೆ ಜಾತಿ, ಧರ್ಮದ ಆಧಾರದಲ್ಲಿ ಮತದಾರರ ಭಾವನೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದೂ ಅಗರ್ವಾಲ್ ಹೇಳಿದ್ದಾರೆ.
ದೇವಸ್ಥಾನ, ಮಸೀದಿ, ಚರ್ಚ್, ಗುರುದ್ವಾರ ಸೇರಿದಂತೆ ಯಾವುದೇ ಧಾರ್ಮಿಕ ಸ್ಥಳಗಳನ್ನು ಪ್ರಚಾರದ ಉದ್ದೇಶಕ್ಕೆ ಬಳಸುವಂತಿಲ್ಲ. ಈ ಸ್ಥಳಗಳಲ್ಲಿ ಚುನಾವಣಾ ಭಾಷಣ, ಪೋಸ್ಟರ್ ಸೇರಿದಂತೆ ಯಾವುದೇ ಚುನಾವಣಾ ಚಟುವಟಿಕೆಗಳು ನಡೆಯುವಂತಿಲ್ಲ ಎಂದು ಪ್ರಕಟಣೆ ಹೊರಡಿಸಿದ್ದಾರೆ.

ಅಕ್ಟೋಬರ್ 5ರಂದು ನಡೆಯಲಿರುವ ಹರಿಯಾಣ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಭಾರತದ ಚುನಾವಣಾ ಆಯೋಗವು ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯೊಂದಿಗೆ ವಿಶೇಷ ಕ್ರಮಗಳನ್ನು ಜಾರಿಗೆ ತಂದಿದೆ ಎಂದಿದ್ದಾರೆ.
ಹರಿಯಾಣದಲ್ಲಿ ಅಕ್ಟೋಬರ್ 5ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಈಗಾಗಲೇ ಕಾಂಗ್ರೆಸ್, ಬಿಜೆಪಿ, ಎಎಪಿ ಪಕ್ಷಗಳು ಭರ್ಜರಿ ಪ್ರಚಾರ ಶುರು ಮಾಡಿದ್ದಾರೆ. ಕಾಂಗ್ರೆಸ್ ಅಲ್ಲಿಯೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ಮೋಡಿ ಮಾಡಲು ಹೊರಟಿದೆ. ಬಿಜೆಪಿಯಿಂದ ಪ್ರಧಾನಿ ಮೋದಿ ಈಗಾಗಲೇ ಪ್ರಚಾರ ನಡೆಸಿ ಬಂದಿದ್ದಾರೆ. ಆಮ್ ಆದ್ಮಿ ಪಕ್ಷ ಕೂಡ ಬಿರುಸಿನ ಪ್ರಸಾರಕ್ಕೆ ಸಜ್ಜಾಗಿದೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಪ್ರಧಾನಿ ಮೋದಿ ಅವರು ಕಾರ್ಯಕರ್ತರನ್ನು ಸಶಕ್ತಗೊಳಿಸಲು ಮುಂದಾಗಿದ್ದಾರೆ. ಇದಕ್ಕಾಗಿ ಹರಿಯಾಣ ಚುನಾವಣೆಗೂ ಮುನ್ನ ʼಮೇರಾ ಬೂತ್ ಸಬ್ಸೆ ಮಜ್ಬೂತ್ʼ (ನನ್ನ ಬೂತ್ ಪ್ರಬಲವಾಗಿದೆ) ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವುದಾಗಿ ಹೇಳಿದ್ದಾರೆ.

ಮೋದಿ ಅವರು ಈ 'ಮೇರಾ ಬೂತ್ ಸಬ್ಸೆ ಮಜ್ಬೂತ್' ಕಾರ್ಯಕ್ರಮವನ್ನು ಘೋಷಿಸಿದ್ದು, ಹರಿಯಾಣದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಸ್ವಯಂಸೇವಕರು ಮತ್ತು ಬೆಂಬಲಿಗರೊಂದಿಗೆ ಸಂವಾದ ನಡೆಸುವುದಾಗಿ ತಿಳಿಸಿದ್ದಾರೆ. ಇದೇ ಸೆಪ್ಟೆಂಬರ್ 26ರಂದು ಮಧ್ಯಾಹ್ನ 12.30ಕ್ಕೆ ನಮೋ ಅಪ್ಲಿಕೇಶನ್ ಮೂಲಕ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಿ ಮೋದಿ ತಮ್ಮ ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದಾರೆ.
ನಮ್ಮ ಕಾರ್ಯಕರ್ತರು, ಸ್ವಯಂಸೇವಕರು ಮತ್ತು ಬೆಂಬಲಿಗರು ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲಿ ಕಮಲವನ್ನು ಅರಳಿಸಲು ಪಣ ತೊಟ್ಟಿದ್ದಾರೆ ಎಂದು ಮೋದಿ ಶ್ಲಾಘಿಸಿದ್ದಾರೆ. ನಿಮ್ಮ ಪ್ರಶ್ನೆಗಳು ಮತ್ತು ಸಲಹೆಗಳನ್ನು ನನಗೆ ಕಳುಹಿಸಿ ಎಂದು ಕರೆ ನೀಡಿದ್ದಾರೆ.












Click it and Unblock the Notifications