ಬಿಜೆಪಿ ವಿರುದ್ಧ ಹೋರಾಡಲು ಹರ್ಯಾಣದಲ್ಲಿ ಕಾಂಗ್ರೆಸ್-ಬಿಎಸ್ಪಿ ಮೈತ್ರಿ?
ಜಾರ್ಖಂಡ್, ಸೆಪ್ಟೆಂಬರ್ 09: ಲೋಕಸಭೆ ಚುನಾವಣೆ ಮತ್ತು ಅದಕ್ಕೂ ಮುನ್ನ ನಡೆದಕೆಲವು ರಾಜ್ಯಗಳ ಚುನಾವಣೆಗಳಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಲು ಕಾಂಗ್ರೆಸ್ ಮತ್ತು ಬಿಎಸ್ಪಿ(ಬಹುಜನ ಸಮಾಜ ಪಕ್ಷ) ಮುಂದಾಗಿವೆ.
ಹರ್ಯಾಣದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಉಭಯ ಪಕ್ಷಗಳೂ ಮೈತ್ರಿ ಮಾಡಿಕೊಳ್ಳಲಿವೆ ಎಂದು ಕೆಲವು ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾತನಾಡಿದ ಹರ್ಯಾಣದ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಭುಪಿಂದರ್ ಸಿಂಗ್ ಹೂಡಾ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕುಮಾರಿ ಸೆಲ್ಜಾ ಅವರು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರನ್ನು ಭಾನುವಾರ ರಾತ್ರಿ ಭೇಟಿ ಮಾಡಿ ಈ ಕುರಿತು ಮಾತುಕತೆ ನಡೆಸಿದ್ದಾರೆ.

ಆದರೆ ಇದಕ್ಕೂ ಎರಡು ದಿನ ಮೊದಲಷ್ಟೇ ಮಾಯಾವತಿ ಅವರು ತಮ್ಮ ಬಿಎಸ್ಪಿ ಪಕ್ಷ ಹರ್ಯಾಣದ ಎಲ್ಲಾ 90 ವಿಧಾನಸಭಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದು, ಯಾವ ಪಕ್ಷದೊಂದಿಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದರು.
ಮಧ್ಯಪ್ರದೇಶ ಮತ್ತು ರಾಜಸ್ಥಾನಗಳಲ್ಲಿ 2018 ರಲ್ಲಿ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶದ ನಂತರ ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತಾದರೂ ಬಹುಮತಕ್ಕೆ ಕೆಲವೇ ಸೀಟುಗಳ ಅಗತ್ಯವಿತ್ತು. ಆ ಸಂದರ್ಭದಲ್ಲಿ ಬಿಎಸ್ಪಿ 'ಕೈ' ಹಿಡಿದಿತ್ತು. ಇದೀಗ ಹರ್ಯಾಣದಲ್ಲೂ ಕಾಂಗ್ರೆಸ್ ಮತ್ತು ಬಿಎಸ್ಪಿ ಮೈತ್ರಿ ಮಾಡಿಕೊಳ್ಳುವುದು ಬಹುತೇಕ ಖಚಿತವೆನ್ನಿಸಿದೆ.
ಏಪ್ರಿಲ್-ಮೇ ತಿಂಗಳಿನಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಎಸ್ಪಿಯು ಕಾಂಗ್ರೆಸ್ ನೇತೃತ್ವದ ಮಹಾಮೈತ್ರಿಕೂಟದಿಂದ ದೂರವುಳಿದಿದ್ದು ವಿಪಕ್ಷಗಳಿಗೆ ಭಾರೀ ಹೊಡೆತವನ್ನುಂಟು ಮಾಡಿತ್ತು ಎಂದು ವಿಶ್ಲೇಷಿಸಲಾಗಿತ್ತು. ಬಿಎಸ್ಪಿಯ ಭದ್ರಕೋಟೆ ಎನ್ನಿಸಿದ್ದ ಉತ್ತರ ಪ್ರದೇಶದ ಹಲವು ಕ್ಷೇತ್ರಗಳಲ್ಲಿ, ಎಸ್ಪಿ(ಅಮಾಜವಾದಿ ಪಕ್ಷ)ಯೊಂದಿಗಿನ ಮೈತ್ರಿಯ ಹೊರತಾಗಿಯೂ ಬಿಎಸ್ಪಿ ಮುಖಭಂಗ ಅನುಭವಿಸಿತ್ತು.












Click it and Unblock the Notifications