Hajj 2023: ಕೇಂದ್ರದ ಮಹತ್ವದ ನಿರ್ಧಾರ, ಹಜ್ ಯಾತ್ರೆಯ ವಿಐಪಿ ಕೋಟಾಗೆ ಬ್ರೇಕ್
ನವದೆಹಲಿ, ಜ. 11: ಹಜ್ ಯಾತ್ರೆಯ ಬಗ್ಗೆ ಮಹತ್ವದ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ ಹಜ್ ಯಾತ್ರಿಕರ ವಿಐಪಿ ಕೋಟಾವನ್ನು ಬುಧವಾರ ರದ್ದುಗೊಳಿಸಿದೆ. ವಿಐಪಿ ಯಾತ್ರಿಕರು ಇನ್ನು ಮುಂದೆ ಸಾಮಾನ್ಯ ಹಜ್ ಭಕ್ತರಂತೆ ಪ್ರಯಾಣಿಸಬೇಕಾಗಿದೆ.
ಈ ವಿಐಪಿ ಕೋಟಾವನ್ನು ಪ್ರಧಾನ ಮಂತ್ರಿ, ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಅಲ್ಪಸಂಖ್ಯಾತ ಸಚಿವರು ಹಾಗೂ ಭಾರತದ ಹಜ್ ಸಮಿತಿಗೆ ನೀಡಲಾಗಿತ್ತು. ಪ್ರಸ್ತುತ 500 ಸೀಟುಗಳನ್ನು ವಿಐಪಿಗಳಿಗೆ ಮೀಸಲಿಡಲಾಗಿತ್ತು.
ಇತ್ತೀಚೆಗೆ, ಸರ್ಕಾರ ಮತ್ತು ಸೌದಿ ಅರೇಬಿಯಾ ಹಜ್ 2023 ಗಾಗಿ ಒಪ್ಪಂದಕ್ಕೆ ಸಹಿ ಹಾಕಿದವು. ಇದರಲ್ಲಿ 1,75,000 ಭಾರತೀಯ ಯಾತ್ರಾರ್ಥಿಗಳಿಗೆ ವಾರ್ಷಿಕ ಪ್ರಯಾಣವನ್ನು ಮಾಡಲು ಅವಕಾಶ ನೀಡಲಾಗುತ್ತದೆ.

"2023 ರ ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾದೊಂದಿಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಈ ವರ್ಷ ಭಾರತದಿಂದ 1,75,025 ಯಾತ್ರಿಕರು ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ" ಎಂದು ಭಾರತದ ಹಜ್ ಸಮಿತಿ ಸದಸ್ಯ ಎರ್ ಐಜಾಜ್ ಹುಸೇನ್ ಹೇಳಿದ್ದಾರೆ. ಭಾರತದಿಂದ ಸುಮಾರು ಎರಡು ಲಕ್ಷ ಯಾತ್ರಿಕರು ಹಜ್ ಯಾತ್ರೆಗೆ ಹೋಗುತ್ತಿರುವುದು ಇದೇ ಮೊದಲು ಎನ್ನಲಾಗಿದೆ.
ಈವರೆಗೆ, ಅತ್ಯಧಿಕವೆಂದರೆ ಭಾರತದಿಂದ 2019 ರಲ್ಲಿ 1.4 ಲಕ್ಷ ಯಾತ್ರಿಕರು ಹಜ್ ತೀರ್ಥಯಾತ್ರೆ ಮಾಡಿದ್ದರು. ನಂತರದ ವರ್ಷದಲ್ಲಿ ಈ ಸಂಖ್ಯೆಯನ್ನು 1.25 ಲಕ್ಷಕ್ಕೆ ಇಳಿಸಲಾಯಿತು. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ಹಜ್ ಯಾತ್ರೆಯನ್ನು ರದ್ದುಗೊಳಿಸಲಾಯಿತು. 2022 ರಲ್ಲಿ 79,237 ಭಾರತೀಯ ಯಾತ್ರಿಕರು ಹಜ್ ಪ್ರಯಾಣ ಮಾಡಿದ್ದರು.

2022 ರಲ್ಲಿ, 7, 79,919 ವಿದೇಶಿ ಯಾತ್ರಾರ್ಥಿಗಳು ಮತ್ತು 1,19,434 ದೇಶೀಯ ಯಾತ್ರಾರ್ಥಿಗಳು ಸೇರಿದಂತೆ ಒಟ್ಟು ಹಜ್ ಯಾತ್ರಿಕರ ಸಂಖ್ಯೆ 8,99,353 ಕ್ಕೆ ಮುಟ್ಟಿತ್ತು.












Click it and Unblock the Notifications