ನೋಟುಗಳ ಮೇಲೆ ಗಣೇಶ, ಲಕ್ಷ್ಮಿ ಚಿತ್ರ ಮುದ್ರಿಸಿ: ಪ್ರಧಾನಿಗೆ ಪತ್ರ ರವಾನಿಸಿದ ಕೇಜ್ರಿವಾಲ್
ನವದೆಹಲಿ, ಅಕ್ಟೋಬರ್ 28: ಕರೆನ್ಸಿ ನೋಟುಗಳ ಮೇಲೆ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಬೇಕೆಂದು ಕೋರಿ ಪ್ರಧಾನಿ ನರೇಂದ್ರ ಮೋದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ರ ಬರೆದಿದ್ದಾರೆ. ಪ್ರಧಾನಿಗೆ ರವಾನಿಸಿರುವ ಪತ್ರವನ್ನು ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಔಪಚಾರಿಕವಾಗಿ ಮೋದಿಗೆ ಬರೆದ ಪತ್ರದಲ್ಲಿ, '130 ಕೋಟಿ ಭಾರತೀಯರ ಪರವಾಗಿ ವಿನಂತಿಸುತ್ತಿದ್ದೇನೆ. ಮಹಾತ್ಮ ಗಾಂಧಿಯವರೊಂದಿಗೆ ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮಿ ದೇವಿ ಮತ್ತು ಗಣೇಶನ ಚಿತ್ರಗಳನ್ನು ಮುದ್ರಿಸಬೇಕು' ಎಂದು ತಿಳಿಸಿದ್ದಾರೆ.
'ದೇಶದ ಆರ್ಥಿಕತೆಯು ಅತ್ಯಂತ ಕೆಟ್ಟ ಪರಿಸ್ಥಿತಿಯಲ್ಲಿ ಸಾಗುತ್ತಿದೆ. ಸ್ವಾತಂತ್ರ್ಯದ 75 ವರ್ಷಗಳ ನಂತರವೂ ಭಾರತವು ಅಭಿವೃದ್ಧಿ ಹೊಂದುತ್ತಿರುವ ಬಡ ದೇಶ ಎಂದು ಹೆಸರಾಗಿದೆ. ನಾಗರಿಕರು ಕಷ್ಟಪಟ್ಟು ಕೆಲಸ ಮಾಡಬೇಕಾಗಿ ಬಂದಿದೆ. ಆದರೆ, ನಮ್ಮ ಪ್ರಯತ್ನಗಳಿಗೆ ದೇವರ ಆಶೀರ್ವಾದವೂ ಬೇಕು. ಉತ್ತಮ ಫಲ ನೀಡಲು ದೇವತೆಗಳ ಅವಶ್ಯಕತೆ ಇದೆ' ಎಂದು ಪತ್ರದಲ್ಲಿ ಹೇಳಿದ್ದಾರೆ.

ತಮ್ಮ ಸಾರ್ವಜನಿಕ ಬೇಡಿಕೆಗೆ ಜನರ ಅಪಾರ ಬೆಂಬಲವಿದೆ ಎಂದೂ ಕೇಜ್ರಿವಾಲ್ ಹೇಳಿದ್ದಾರೆ.
'ಜನರು ಇದರಿಂದ ತುಂಬಾ ಉತ್ಸುಕರಾಗಿದ್ದಾರೆ. ಪ್ರತಿಯೊಬ್ಬರೂ ಇದನ್ನು ಶೀಘ್ರವಾಗಿ ಜಾರಿಗೆ ತರಬೇಕೆಂದು ಬಯಸುತ್ತಾರೆ' ಎಂದು ಅವರು ತಿಳಿಸಿದ್ದಾರೆ.
ಈ ವಿಚಾರವಾಗಿ ಗುರುವಾರ ಮಾಧ್ಯಮಗೋಷ್ಠಿ ಮಾಡಿದ್ದ ಅರವಿಂದ ಕೇಜ್ರಿವಾಲ್, 'ಲಕ್ಷ್ಮಿ ಸಮೃದ್ಧಿಯ ದೇವತೆ ಮತ್ತು ಗಣೇಶ ಅಡೆತಡೆಗಳನ್ನು ನಿವಾರಿಸುತ್ತಾನೆ' ಎಂದು ಹೇಳಿದ್ದರು.
'ಎಲ್ಲಾ ನೋಟುಗಳನ್ನು ಬದಲಿಸಿ ಎಂದು ನಾನು ಹೇಳುತ್ತಿಲ್ಲ. ಆದರೆ ಪ್ರತಿ ತಿಂಗಳು ಬಿಡುಗಡೆಯಾಗುವ ಎಲ್ಲಾ ಹೊಸ ನೋಟುಗಳು ಗಣೇಶ ಹಾಗೂ ಲಕ್ಷ್ಮಿ ದೇವರ ಚಿತ್ರಗಳನ್ನು ಹೊಂದಿರಬೇಕು' ಎಂದು ತಿಳಿಸಿದ್ದರು.
ಕರೆನ್ಸಿ ನೋಟಿನಲ್ಲಿ ಗಣೇಶನ ಚಿತ್ರವನ್ನು ಹೊಂದಿರುವ ಮುಸ್ಲಿಂ ರಾಷ್ಟ್ರವಾದ ಇಂಡೊನೆಷ್ಯಾವನ್ನು ಅವರು ಉಲ್ಲೇಖಿಸಿದ್ದರು.

'ಇಂಡೊನೇಷ್ಯಾದಲ್ಲಿ ಇದು ಸಾಧ್ಯವಿದೆ. ಆದರೆ, ನಮ್ಮಲ್ಲಿ ಏಕೆ ಸಾಧ್ಯವಿಲ್ಲ' ಎಂದು ಅವರು ಪ್ರಶ್ನಿಸಿದ್ದರು.
ಗುಜರಾತ್ ಚುನಾವಣೆಗೆ ತಂತ್ರ
ಗುಜರಾತ್ ವಿಧಾನಸಭೆ ಚುನಾವಣೆಗಳು ಕೆಲ ದಿನಗಳಲ್ಲಿ ನಡೆಯಲಿದೆ. ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಅವರು ಈ ಚುನಾವಣೆಯಲ್ಲಿ ಹಿಂದುತ್ವದ ತಂತ್ರಗಾರಿಕೆಯನ್ನು ಹೆಣೆದಿದ್ದಾರೆ ಎನ್ನಲಾಗಿದೆ. ನೋಟಿನಲ್ಲಿ ದೇವತೆಗಳು ಚಿತ್ರಗಳನ್ನು ಮುದ್ರಿಸಿ ಎನ್ನುವ ಮೂಲಕ ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ. ಗುಜರಾತ್‌ನಲ್ಲಿ ಎರಡು ದಶಕಗಳ ಕಾಲ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿ ಹಿಂದುತ್ವದ ತಂತ್ರಗಾರಿಕೆಯನ್ನೇ ನಂಬಿಕೊಂಡಿದೆ. ಬಿಜೆಪಿಯ ಹಿಂದುತ್ವದ ಸಿದ್ದಾಂತವನ್ನೇ ಕೇಜ್ರಿವಾಲ್ ನಕಲು ಮಾಡಲು ಹೊರಟಂತಿದೆ ಎಂದು ಕೆಲವರು ಟೀಕಿಸಿದ್ದಾರೆ. ಕುಡಿಯುವ ನೀಡು, ಶಿಕ್ಷಣ, ರಸ್ತೆ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಿದ್ದ ಕೇಜ್ರಿವಾಲ್ ಒಮ್ಮಿಂದೊಮ್ಮೆಲೇ ಹಿಂದುತ್ವದ ಮಡಿಲಿಗೆ ಜಾರಿರುವುದು ಎಷ್ಟು ಸರಿ ಎಂಬ ಪ್ರಶ್ನೆಗಳನ್ನು ಕೆಲವರು ಎತ್ತಿದ್ದಾರೆ.
ಕೇಜ್ರಿವಾಲ್ ವಿರುದ್ಧ ಬಿಜೆಪಿ ಕೆಂಡ
ಅರವಿಂದ ಕೇಜ್ರಿವಾಲ್ ಅವರು ನೋಟಿನಲ್ಲಿ ದೇವತೆಗಳ ಚಿತ್ರಗಳನ್ನು ಮುದ್ರಿಸುವಂತೆ ಪ್ರಧಾನಿ ಮನವಿ ಮಾಡುವುದಾಗಿ ಗುರುವಾರ ಹೇಳಿದ್ದರು. ತಕ್ಷಣವೇ ಎದ್ದು ಕುಳಿತ ಬಿಜೆಪಿ, ಕೇಜ್ರಿವಾಲ್‌ರನ್ನು ತರಾಟೆಗೆ ತೆಗೆದುಕೊಳ್ಳುವ ಕೆಲಸ ಮಾಡಿದೆ.
ಈ ವಿಚಾರವಾಗಿ ಮಾಧ್ಯಮಗೋಷ್ಠಿ ನಡೆಸಿದ ಬಿಜೆಪಿ ನಾಯಕ ಸಂಬೀತ್ ಪಾತ್ರ, 'ಹಿಂದುತ್ವದ ಬಗ್ಗೆ ಕೇಜ್ರಿವಾಲ್ ಅವರು ದ್ವಂದ್ವ ನಿಲುವು ಹೊಂದಿದ್ದಾರೆ. ವಿಧಾನಸಭೆಯಲ್ಲಿ ಕಾಶ್ಮೀರಿ ಪಂಡಿತರನ್ನು ಅಪಹಾಸ್ಯ ಮಾಡಿದ್ದಾರೆ. ಅವರ ಮೇಲೆ ತೆಗೆಯಲಾಗಿರುವ ಚಿತ್ರವನ್ನು ಗೇಲಿ ಮಾಡಿದ್ದಾರೆ. ಅಯೋದ್ಯೆಯ ರಾಮ ಮಂದಿರಕ್ಕೆ ತೆರಳಲು ಅವರು ನಿರಾಕರಿಸಿದ್ದಾರೆ. ಅಂತಹವರು ಈಗ ಹಿಂದುತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಗುಜರಾತ್ ಚುನಾವಣೆಗೆ ತಂತ್ರ ಮಾಡಿದ್ದಾರೆ' ಎಂದು ಹರಿಹಾಯ್ದಿದ್ದಾರೆ.












Click it and Unblock the Notifications