ಸರ್ಕಾರಿ ಕಚೇರಿಗಳಲ್ಲಿರುವ ಪಿಎಂ ಮೋದಿ ಫೋಟೋ ತೆಗೆಸಿ, ಆಯೋಗಕ್ಕೆ ಎಎಪಿ ಮನವಿ
ಅಹಮದಾಬಾದ್, ನವೆಂಬರ್ 15: ಗುಜರಾತ್ ವಿಧಾನಸಭಾ ಚುನಾವಣೆ ಪ್ರಚಾರ ಭರದಿಂದ ಸಾಗಿದೆ. ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿದ್ದಾರೆ. ಹೀಗಾಗಿ ಎಲ್ಲಾ ಸರ್ಕಾರಿ ಕಚೇರಿಗಳಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರ ಫೊಟೋ ತೆಗೆಸುವಂತೆ ಚುನಾವಣಾ ಆಯೋಗಕ್ಕೆ ಆಮ್ ಆದ್ಮಿ ಪಕ್ಷ ಮನವಿ ಮಾಡಿದೆ.
ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಪ್ರದರ್ಶಿಸುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಪೋಟೋಗಳನ್ನು ಸರ್ಕಾರಿ ಕಚೇರಿಗಳಿಂದ ತೆಗೆಯಬೇಕು ಇಲ್ಲವೇ ಮೋದಿ ಚಿತ್ರ ಕಾಣಿಸದಂತೆ ಮುಚ್ಚಬೇಕು ಎಂದು ನಿರ್ದೇಶನ ನೀಡುವಂತೆ ಎಎಪಿ ಚುನಾವಣಾ ಆಯೋಗಕ್ಕೆ ಮನವಿಯನ್ನು ಮಾಡಿದೆ.
ಗುಜರಾತ್ ರಾಜ್ಯದಲ್ಲಿ ಈಗಾಗಲೇ ಘೋಷಿಸಿರುವಂತೆ ಡಿಸೆಂಬರ್ 1 ಮತ್ತು 5ರಂದು ಎರಡು ಹಂತಗಳಲ್ಲಿ ಒಟ್ಟು 182 ಸ್ಥಾನಗಳಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ಡಿಸೆಂಬರ್ 8ರಂದು ಫಲಿತಾಂಶ ಹೊರಬೀಳಲಿದೆ.

''ಗುಜರಾತ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಬಿಜೆಪಿಯವರು ತಮ್ಮ ಸ್ಟಾರ್ ಪ್ರಚಾರಕರೆಂದು ಘೋಷಿತರಾಗಿರುವ ಪ್ರಧಾನಿ ಮೋದಿ ಅವರ ಪೋಟೋಗಳನ್ನು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಹಾಕಿರುತ್ತಾರೆ. ಇದು ನೇರವಾಗಿ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಹಾಗಾಗಿ ಎಲ್ಲ ಸರ್ಕಾರಿ ಕಚೇರಿಗಳಿಂದ ಪ್ರಧಾನಿ ಮೋದಿ ಪೋಟೋ ತೆಗೆಯಬೇಕು ಇಲ್ಲವೇ ಭಾವಚಿತ್ರ ಕಾಣಿಸದಂತೆ ಮುಚ್ಚಬೇಕು'' ಎಂದು ಎಎಪಿ ಕಾನೂನು ಘಟಕದ ಕಾರ್ಯದರ್ಶಿ ಪುನೀತ್ ಜುನೇಜಾ ಹೇಳಿದ್ದಾರೆ.
ಚುನಾವಣಾ ಆಯೋಗಕ್ಕೆ ಮನವಿ
ಚುನಾವಣಾ ಆಯೋಗಕ್ಕೆ ನೀಡಿದ ತನ್ನ ಮನವಿಯಲ್ಲಿ ಅವರು ಸರ್ಕಾರಿ ಕಚೇರಿಗಳಲ್ಲಿ ಪಕ್ಷವೊಂದರ ವ್ಯಕ್ತಿ ಪೋಟೋಗಳು ಇರುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಅಲ್ಲದೆ ಜನರ ಮೇಲೆ ಇದು ಪರಿಣಾಮ ಬೀರಬಹುದು. ಆದ್ದರಿಂದ ಮುಕ್ತ ನ್ಯಾಯಸಮ್ಮತ ಚುನಾವಣೆಗಳ ಭಾಗವಾಗಿ ಫೋಟೋಗಳನ್ನು ತೆಗೆಯಬೇಕು. ಇಲ್ಲವೇ ಮುಚ್ಚಬೇಕು ಎಂದು ಎಎಪಿ ಚುನಾವಣಾ ಆಯೋಗಕ್ಕೆ ಒತ್ತಾಯ ಮಾಡಿದೆ.

ಗುಜರಾತ್‌ನಲ್ಲಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಪ್ರಮುಖ ಸ್ಥಳದಲ್ಲಿ ಪ್ರಧಾನಿ ಮೋದಿ ಅವರ ಫೋಟೋಗಳನ್ನು ನೇತುಹಾಕಲಾಗಿದೆ. ಇದು ರಾಜ್ಯದ ಮತದಾರರ ಮೇಲೆ ಚುನಾವಣೆ ಸಮಯವಾಗಿರುವುದರಿಂದ ಪರಿಣಾಮ ಬೀರಬಹುದು. ಹಾಗಾಗಿ ಮುಕ್ತ, ನ್ಯಾಯಸಮ್ಮತ ಹಾಗೂ ಪಾರದರ್ಶಕ ಚುನಾವಣೆಗಳನ್ನು ನಡೆಸುವ ದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಪೋಟೋಗಳನ್ನು ತೆಗೆಯಬೇಕು ಎಂದು ಎಎಪಿ ಆಗ್ರಹಿಸಿದೆ.
ಬಿಜೆಪಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಈಗಾಗಲೇ ಸ್ಟಾರ್ ಪ್ರಚಾರಕ ಎಂದು ಘೋಷಿಸಲಾಗಿದೆ. ಅಲ್ಲದೆ ಬಿಜೆಪಿಯ ಉತ್ತುಂಗದ ನಾಯಕ ಎಂದು ಅಘೋಷಿತವಾಗಿ ಒಪ್ಪಲಾಗಿದೆ. ಸತತ ಏಳನೇ ಅವಧಿಗೆ ಆಡಳಿತರೂಢವಾಗಿರುವ ಬಿಜೆಪಿಗೆ ಆಮ್ ಆದ್ಮಿ ಪಕ್ಷ ಗುಜರಾತ್ ರಾಜ್ಯದಲ್ಲಿ ಪ್ರಮುಖ ಎದುರಾಳಿ ಪಕ್ಷವಾಗಿದೆ. ಇದು ಗುಜರಾತ್ ರಾಜ್ಯದ ಜನರಿಗೆ ಅನನ್ಯ ಭರವಸೆಗಳ ಮೂಲಕ ಜನರನ್ನು ತಲುಪುತ್ತಿದೆ. ಇದು ಸಹಜವಾಗಿಯೇ ಬಿಜೆಪಿಯವರ ಕಣ್ಣನ್ನು ಕೆಂಪಾಗಿಸಿದೆ.












Click it and Unblock the Notifications